ಸಾರಾಂಶ
ನ್ಯಾ. ಗವಾಯಿ ತೋರಿದ ತಾಳ್ಮೆ ಪ್ರಶಂಸಾರ್ಹ, ಇದು ನಮ್ಮ ನ್ಯಾಯಿಕ ಮೌಲ್ಯಗಳ ಸಂಕೇತ ಎಂದು ಹೇಳಿ ಆರೋಪಿ ವಕೀಲರ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
ಬಂಗಾರಪೇಟೆ: ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರು ಶೂ ಎಸೆದಿರುವುದನ್ನು ಖಂಡಿಸಿ, ಆರೋಪಿ ವಕೀಲನ ವಿರುದ್ಧ ಸೂಕ್ತಕ್ರಮವಹಿಸುವಂತೆ ಆಗ್ರಹಿಸಿ ದಲಿತ ಸಮಾಜ ಸೇನೆ ವತಿಯಿಂದ ಮಂಗಳವಾರ ಸಂಜೆ ಪ್ರತಿಭಟನೆ ಮಾಡಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿಭಟಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್, ನ್ಯಾಯಾಧೀಶರ ಮೇಲೆ ಅದೂ ನ್ಯಾಯಾಲಯದ ಆವರಣದಲ್ಲೇ ಶೂ ಎಸೆದಿರುವುದು ನ್ಯಾಯಾಂಗಕ್ಕೆ ದೊಡ್ಡ ಕಳಂಕವಾಗಿದೆ, ನ್ಯಾಯಾಧೀಶರ ಮೇಲೆ ಶೂ ಎಸೆಯುವುದು ಸಂವಿಧಾನಕ್ಕೆ ಮಾಡಿ ಅಪಮಾನವಾಗಿದೆ ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಮಧ್ಯಪ್ರದೇಶದ ಖಜುರಾಹೋದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿದ್ದಾರೆ. ಯಾರಿಗೇ ಅನ್ಯಾಯವಾಗಿದ್ದರೂ ಸಹ ಅದನ್ನು ನ್ಯಾಯಾಂಗದ ಹೋರಾಟದ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕೆ ವಿನಃ ಈ ರೀತಿ ಅನಾಗರಿಕವಾಗಿ ನಡೆದುಕೊಳ್ಳುವುದು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದರು.ಈ ಸಂದರ್ಭದಲ್ಲಿ ನ್ಯಾ. ಗವಾಯಿ ತೋರಿದ ತಾಳ್ಮೆ ಪ್ರಶಂಸಾರ್ಹ, ಇದು ನಮ್ಮ ನ್ಯಾಯಿಕ ಮೌಲ್ಯಗಳ ಸಂಕೇತ ಎಂದು ಹೇಳಿ ಆರೋಪಿ ವಕೀಲರ ಮೇಲೆ ಕ್ರಮಕ್ಕೆ ಆಗ್ರಹಿಸಿದರು. ವೆಂಕಟೇಶ್,ದೇವಗಾನಹಳ್ಳಿ ನಾಗೇಶ್,ಮುನಿರಾಜು,ರಾಜೇಂದ್ರ, ಅಯ್ಯಪ್ಪ,ಆಟೋ ಕರ್ಣ,ರಾಜು,ರವಿ,ಪ್ರದೀಪ್,ಮಹೇಂದ್ರ ಇತರರು ಇದ್ದರು.