ಸಾರಾಂಶ
ಬಳ್ಳಾರಿ: ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಹೊರಟಿರುವ ಬಿಜೆಪಿ-ಜೆಡಿಎಸ್ ನಡೆಯನ್ನು ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ದಲಿತ ಸಂಘರ್ಷ ಸಮಿತಿ (ಡಿಜಿ ಸಾಗರ್ ಬಣ) ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರವಾದ ಆಡಳಿತ ನೀಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಹಿತ ಕಾಯುವ ಕೆಲಸ ಮಾಡುತ್ತಿದೆ. ಇದನ್ನು ಸಹಿಸದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಮುಖ್ಯಮಂತ್ರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಮುಡಾ ಹಗರಣವನ್ನು ಮುಂದಿಟ್ಟುಕೊಂಡು ರಾಜಿನಾಮೆ ಕೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘರ್ಷ ಸಮಿತಿಯ ಮುಖಂಡರು ಹಾಗೂ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಅಹಿಂದ ಸಂಘಟನೆಯ ಡಾ.ಗಾದಿಲಿಂಗಪ್ಪ, ಸಂಘಟನೆಯ ಜಿಲ್ಲಾ ಸಂಚಾಲಕ ಎಚ್.ಬಿ.ಗಂಗಪ್ಪ, ಎಚ್.ಆಂಜನೇಯ, ಕೊಳಗಲ್ ಮಲ್ಲಯ್ಯ, ಛಲವಾದಿ ಸಂಘದ ನರಸಪ್ಪ, ಕುಡಿತಿನಿ ಪಂಪಾಪತಿ, ಮಲ್ಲಿಕಾರ್ಜುನ, ಮಹೇಶ್, ಎಚ್.ನಾಗೇಂದ್ರಪ್ಪ, ಬಿಸಿಲಹಳ್ಳಿ ರಮೇಶ್, ಎಚ್.ಮಲ್ಲಪ್ಪ, ಎಚ್.ಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಡಿಜಿ ಸಾಗರ್ ಬಣದ ದಲಿತ ಸಂಘರ್ಷ ಸಮಿತಿ ಸದಸ್ಯರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.