ರಾಕೇಶ್ ಕಿಶೋರ್‌ನನ್ನು ದೇಶದಿಂದ ಗಡಿಪಾರು ಮಾಡಲು ದಲಿತ ಸಂಘರ್ಷ ಸಮಿತಿ ಆಗ್ರಹ

| Published : Oct 13 2025, 02:01 AM IST

ರಾಕೇಶ್ ಕಿಶೋರ್‌ನನ್ನು ದೇಶದಿಂದ ಗಡಿಪಾರು ಮಾಡಲು ದಲಿತ ಸಂಘರ್ಷ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭಟನೆಗೂ ಮುಂಚೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮೌನವಾಗಿ ಮೆರವಣಿಗೆ ಸಾಗಿ ತಹಸೀಲ್ದಾರ್‌ ಕಚೇರಿ ಬಳಿ ಘೋಷಣೆ ಕೂಗಿ, ಆ ದೇಶದ್ರೋಹಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲೆತ್ನಿಸಿರುವುದು, ಪೂರ್ವ ನಿಯೋಜಿತ, ಇದು ಕೇವಲ ಮುಖ್ಯ ನ್ಯಾಯಾಧೀಶರ ಮೇಲೆ ನಡೆದ ದಾಳಿಯಲ್ಲ, ಬದಲಾಗಿ ದೇಶದ ಸಾಂವಿಧಾನಿಕ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ದುಷ್ಕೃತ್ಯವಾಗಿದ್ದು, ಜಾತಿ ವ್ಯಸನಿ ರಾಕೇಶ್ ಕಿಶೋರ್ ನಡೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ದೇಶದ್ರೋಹ ಕೆಲಸ. ಈತನನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ತಾಪಂ ಮಾಜಿ ಸದಸ್ಯ ಮತ್ತಿಕೆರೆ ಹನುಮಂತಯ್ಯ ಆಗ್ರಹಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಚನ್ನಪಟ್ಟಣ ಶಾಖೆ ಮತ್ತು ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಇದೊಂದು ಮಾನಸಿಕ ಸ್ಥಿತಿ, ಈ ಮನಸ್ಥಿತಿ ದೇಶವನ್ನು ಸಾಂಕ್ರಾಮಿಕವಾಗಿ ಆಕ್ರಮಿಸಿಕೊಂಡು ದೇಶದ ಭಾವೈಕ್ಯತೆಯನ್ನು ಹಾಳುಮಾಡುತ್ತಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿ ಅವರು ಖಜರಾಹೋದಲ್ಲಿನ ವಿಷ್ಣುವಿನ ವಿಗ್ರಹಕ್ಕೆ ಸಂಬಂಧಿಸಿದಂತೆ ಕೊಟ್ಟ ಹೇಳಿಕೆಯ ಹಿಂದಿನ ಸದುದ್ದೇಶವನ್ನು ಅರ್ಥಮಾಡಿಕೊಳ್ಳದ ಮನುವಾದಿ ಮನಸ್ಥಿತಿಯವರು ಹಾಗೂ ಮುಖ್ಯ ನ್ಯಾಯಮೂರ್ತಿಗಳ ತಾಯಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದಕ್ಕೆ ದೇಶದ ಸನಾತನ ವ್ಯಾದಿಗಳ ಕುಮ್ಮಕ್ಕಿನಿಂದ ಬಿ.ಆರ್.ಗವಾಯಿ ಅವರಿಗೆ ಅವಮಾನಿಸಲು ಈ ದುಷ್ಕೃತ್ಯ ಹೆಣೆಯಲಾಗಿದೆ ಎಂದು ಆರೋಪಿಸಿದರು.

ಶಿವಾನಂದ ಬೈರಾಪಟ್ಟಣ ಮಾತನಾಡಿ, ಮುಖ್ಯ ನ್ಯಾಯಮೂರ್ತಿಗಳಿಗೆ ಮುಜುಗರ ಉಂಟು ಮಾಡುವ ತಂತ್ರದಿಂದ ಈ ಕೃತ್ಯ ಮಾಡಲಾಗಿದೆ. ಇದು ಕ್ಷಮೆಗೆ ಅರ್ಹವಾದ ಘಟನೆಯಲ್ಲ. ಹಾಗಾಗಿ ಇಂತಹ ದುಷ್ಕೃತ್ಯ ಎಸಗಿರುವ ವಕೀಲ ರಾಕೇಶ್ ಕಿಶೋರ್‌ನನ್ನು ಕೂಡಲೇ ಬಂಧಿಸಿ, ಅತ್ಯುಗ್ರ ಶಿಕ್ಷೆ ನೀಡಬೇಕೆಂದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ವೆಂಕಟೇಶ್ (ಶೇಟು) ಮಾತನಾಡಿ, ಮುಖ್ಯ ನ್ಯಾಯಮೂರ್ತಿಗಳ ಮೇಲೆ ಮಾಡಿದ ದಾಳಿ, ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅಪಚಾರವಾಗಿದ್ದು, ಇಂತಹ ನೀಚ ಕೃತ್ಯ ಮಾಡಿದವನಿಗೆ ಕರುಣೆ ತೋರದೆ, ಶಿಕ್ಷಿಸಬೇಕು. ಅದು ಇಡೀ ದೇಶಕ್ಕೆ ಎಚ್ಚರಿಕೆಯ ಪಾಠವಾಗಬೇಕು ಎಂದರು.

ಪ್ರತಿಭಟನೆಗೂ ಮುಂಚೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಮೌನವಾಗಿ ಮೆರವಣಿಗೆ ಸಾಗಿ ತಹಸೀಲ್ದಾರ್‌ ಕಚೇರಿ ಬಳಿ ಘೋಷಣೆ ಕೂಗಿ, ಆ ದೇಶದ್ರೋಹಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಂಗಳವಾರಪೇಟೆ ಶೇಖರ , ಪ್ರದೀಪ್ ಕುಮಾರ್‌, ಕೋಟೆ ಶ್ರೀನಿವಾಸ್, ಪ್ರಜ್ಞಾ ಸಿದ್ದರಾಮು, ಕದಂಬ ಶಿವು, ಪ್ರಭು ಜಯರಾಂ, ಮಂಜು ಅಪ್ಪಗೆರೆ, ಕೃಷ್ಣಯ್ಯ ಮೈಲಾನಾಯಕನಹಳ್ಳಿ, ಸುಜೀವನ್ ಕುಮಾರ್, ಕಾಂತ ಕೂಡ್ಲೂರು, ಪ್ರಸಾದ್ ಅಂಬೇಡ್ಕರ್ ನಗರ, ಭರತ್ ನೀಲಕಂಠನಹಳ್ಳಿ, ಸಿದ್ದಪ್ಪ ಗರಕಹಳ್ಳಿ, ಪ್ರಸನ್ನ ಹೊನ್ನಿಗನಹಳ್ಳಿ, ಸತೀಶ್ ಹರಿಸಂದ್ರ, ಕೆಂಗಲ್ ಮೂರ್ತಿ, ವಿನಯ್ ಕುಡ್ಲೂರು, ಶಿವಣ್ಣ ಮುನಿಯಪ್ಪನದೊಡ್ಡಿ, ಶಿವಬಸವಯ್ಯ, ನಾಗರಾಜು ಮಂಕುಂದ, ಮಂಗಾಡಹಳ್ಳಿ ಕಾಂತ ಇತರರು ಭಾಗವಹಿಸಿದ್ದರು.