ಸಾರಾಂಶ
ದಸರಾ ಉದ್ಘಾಟನೆ ವಿಷಯವಾಗಿ ಮಾಧ್ಯಮದ ಮುಂದೆ ಯತ್ನಾಳ್ ಮಾತನಾಡುವಾಗ ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದ ಮಹಿಳೆಯರು ಮಾತ್ರ ಪೂಜೆ ಸಲ್ಲಿಸಬೇಕೆ ಹೊರತು ಸಾಮಾನ್ಯ ದಲಿತ ಮಹಿಳೆಗೂ ಪೂಜೆಗೂ ಅವಕಾಶವಿಲ್ಲ ಎಂದು ದಲಿತ ಮಹಿಳೆಯರನ್ನು ಸಾರ್ವಜನಿಕವಾಗಿ ಅವಮಾನಿಸಿ ನಿಂದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ದಸರಾ ಉದ್ಘಾಟನೆ ವಿಚಾರವಾಗಿ ದಲಿತ ಮಹಿಳೆಯನ್ನು ನಿಂದಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸೇರಿದ ಪದಾಧಿಕಾರಿಗಳು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಸಕ ಯತ್ನಾಳ್ ಪ್ರತಿಕೃತಿ ದಹಿಸಲು ಮುಂದಾದ ವೇಳೆ ಇನ್ಸ್ ಪೆಕ್ಟರ್ ವೆಂಕಟೇಗೌಡರು ಮಧ್ಯ ಪ್ರವೇಶಿಸಿ ಪ್ರತಿಕೃತಿ ದಹಿಸದಂತೆ ವಿಫಲಗೊಳಿಸಿದರು. ಬಳಿಕ ತಾಲೂಕು ಕಚೇರಿಗೆ ಆಗಮಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಮೈಸೂರು ವಿಭಾಗೀಯ ಸಂಚಾಲಕ ಮರಳಿಗ ಶಿವರಾಜ್ ಮಾತನಾಡಿ, ದಸರಾ ಉದ್ಘಾಟನೆ ವಿಷಯವಾಗಿ ಮಾಧ್ಯಮದ ಮುಂದೆ ಯತ್ನಾಳ್ ಮಾತನಾಡುವಾಗ ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದ ಮಹಿಳೆಯರು ಮಾತ್ರ ಪೂಜೆ ಸಲ್ಲಿಸಬೇಕೆ ಹೊರತು ಸಾಮಾನ್ಯ ದಲಿತ ಮಹಿಳೆಗೂ ಪೂಜೆಗೂ ಅವಕಾಶವಿಲ್ಲ ಎಂದು ದಲಿತ ಮಹಿಳೆಯರನ್ನು ಸಾರ್ವಜನಿಕವಾಗಿ ಅವಮಾನಿಸಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.ಮದ್ದೂರಿಗೆ ಆಗಮಿಸಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಹೇಳಿಕೆ ನೀಡಿ ಈ ದಲಿತ ಮಹಿಳೆ ವಿರುದ್ಧ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಸನಾತನ ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿದ್ದಾರೆ ಎಂದು ದೂರಿದರು.
ಯತ್ನಾಳ್ ನಿತ್ಯ ಒಂದಿಲ್ಲೋಂದು ಪ್ರಚೋದನಕಾರಿ ಕೋಮು ಸಂಘರ್ಷ ಹೇಳಿಕೆ ನೀಡುತ್ತಿರುವುದರಿಂದ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ಆದರೂ ನ್ಯಾಯಾಲಯ ಅವರಿಗೆ ಬಲವಂತದ ಕ್ರಮ ಬೇಡ ಎಂದು ಆದೇಶ ಹೊರಡಿಸಿದೆ. ಕೂಡಲೇ ಯತ್ನಾಳ್ ಅವರನ್ನು ಬಂಧಿಸಿ, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸ್ಪೀಕರ್‌ಗೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮೂಲಕ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಪ್ರಕಾಶ್, ಶೇಖರ್, ವೆಂಕಟೇಶ್, ರಾಚಯ್ಯ, ಚಿದಾನಂದ, ಶಿವಲಿಂಗಯ್ಯ, ರಾಜೇಂದ್ರ, ಸಿದ್ದರಾಜು, ಕುಮಾರ್, ರಾಜು, ಮಹೇಶ್, ಚಿಕ್ಕಯ್ಯ, ನಾರಾಯಣ, ಮಂಜುನಾಥ್ ಮತ್ತಿತರರು ಇದ್ದರು.