ಜಾತಿ, ಧರ್ಮ ಹಾಗೂ ವರ್ಗಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಪ್ರವೃತ್ತಿಯ ವಿರುದ್ಧ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ.

ಬಳ್ಳಾರಿ: ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ ಮಹಾನ್ ಮಾನವತಾವಾದಿ ಬಸವಣ್ಣನವರ ವಿರುದ್ಧ ಅವಹೇಳನಕಾರಿ ಅಂಶಗಳನ್ನೊಳಗೊಂಡ ಬಸವ ಮಂಟಪ ಕೃತಿ ರಚಿಸಿ ಶರಣ ಪರಂಪರೆಗೆ ಬಹುದೊಡ್ಡ ಅಪಮಾನ ಮಾಡಿದ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮೇಲು-ಕೀಳು ಭಾವನೆ ಹಾಗೂ ಧಾರ್ಮಿಕ ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿದ ಮಹಾನ್ ಸಾಮಾಜಿಕ ಕ್ರಾಂತಿಕಾರಿಯಾಗಿದ್ದಾರೆ. ಕಾಯಕ ಮತ್ತು ದಾಸೋಹದ ತತ್ವಗಳ ಮೂಲಕ ಶ್ರಮದ ಗೌರವ ಎತ್ತಿಹಿಡಿದ ಅವರು, ಅನುಭವ ಮಂಟಪದ ಮೂಲಕ ಎಲ್ಲ ವರ್ಗದ ಜನರಿಗೂ ತಮ್ಮ ವಿಚಾರ ಮುಕ್ತವಾಗಿ ಅಭಿವ್ಯಕ್ತಪಡಿಸುವ ಅವಕಾಶ ಕಲ್ಪಿಸಿದ್ದರು. ಬಸವಣ್ಣನವರ ವಚನಗಳು ಕೇವಲ ಸಾಹಿತ್ಯಿಕ ಅಭಿವ್ಯಕ್ತಿಗಳಲ್ಲ. ಅವು ಮಾನವೀಯತೆ, ಸಮಾನತೆ, ಸಹಬಾಳ್ವೆ, ಕಾಯಕನಿಷ್ಠೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯ ಸಾರುವ ಜೀವನದರ್ಶನಗಳಾಗಿವೆ. ಶತಮಾನಗಳು ಕಳೆದರೂ ಬಸವಣ್ಣನವರ ವಿಚಾರಧಾರೆಗಳು ಸಮಾಜಕ್ಕೆ ದಾರಿದೀಪವಾಗಿವೆ. ಜಾತಿ, ಧರ್ಮ ಹಾಗೂ ವರ್ಗಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಪ್ರವೃತ್ತಿಯ ವಿರುದ್ಧ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಇಂತಹ ಮಹಾನ್ ಶರಣರ ಕುರಿತು ಅವಹೇಳನಕಾರಿ ರೀತಿಯಲ್ಲಿ ಬರೆಯುವುದು ಹಾಗೂ ಶರಣ ಪರಂಪರೆಯ ಘನತೆಗೆ ಧಕ್ಕೆ ತರುವಂತಹ ವಿಚಾರ ಪ್ರತಿಪಾದಿಸುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ದಲಿತ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಎ. ಮಾನಯ್ಯ ಹಾಗೂ ದಲಿತ ಮುಖಂಡ ವಿ.ಎಸ್.ಶಿವಶಂಕರ್ ಅವರು, ಯಾವುದೇ ವ್ಯಕ್ತಿಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದ್ದರೂ, ಅದು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವಂತಿರಬಾರದು.ಇತಿಹಾಸ ಪುರುಷರು ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರರ ಕುರಿತು ಬರೆಯುವಾಗ ವಾಸ್ತವಾಂಶ, ಐತಿಹಾಸಿಕ ದಾಖಲೆ ಮತ್ತು ಸಾಮಾಜಿಕ ಹೊಣೆಗಾರಿಕೆ ಗಮನದಲ್ಲಿಟ್ಟುಕೊಳ್ಳಬೇಕು.

ಬಸವಣ್ಣನವರ ಸಂದೇಶಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅವು ಇಡೀ ಮಾನವ ಸಮಾಜದ ಒಳಿತಿಗಾಗಿ ರೂಪುಗೊಂಡ ಸಾರ್ವಕಾಲಿಕ ಮೌಲ್ಯಗಳಾಗಿವೆ. ಶರಣರು ಪ್ರತಿಪಾದಿಸಿದ ಸಮಾನತೆ ಮತ್ತು ಮಾನವೀಯತೆಯ ಆಶಯ ದುರ್ಬಲಗೊಳಿಸುವ ಯಾವುದೇ ಪ್ರಯತ್ನ ಸಮಾಜದಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತದೆ.ಇಂತಹ ಕೃತಿಗಳಲ್ಲಿನ ಆಕ್ಷೇಪಾರ್ಹ ಅಂಶ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬಸವ ಮಂಟಪ ಕೃತಿಯಲ್ಲಿನ ವಿವಾದಾತ್ಮಕ ಅಂಶಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಬಸವಣ್ಣನವರು ಹಾಗೂ ಶರಣ ಪರಂಪರೆಯ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿರುವುದು ಸಾಬೀತಾದಲ್ಲಿ ಲೇಖಕ ರವಿ ಹಂಜ್ ವಿರುದ್ಧ ಕಾನೂನು ಬದ್ಧ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಕಾಪಾಡಲು ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ದಸಂಸ ಪ್ರಮುಖ ಗಾದಿಲಿಂಗನಗೌಡ, ರಾಮನ್, ಓಂಕಾರಪ್ಪ, ತಳವಾರ್ ದುರುಗಪ್ಪ, ಬಿ. ರಮೇಶ್, ಟಿ.ಎಂ. ಎರಿಸ್ವಾಮಿ, ಹುಲುಗಪ್ಪ ಬೆಳಗಲ್, ಸಂಗನಕಲ್ಲು ವಿಜಯಕುಮಾರ್, ಮಹೇಶ್, ಮಲ್ಲಪ್ಪ, ದೊಡ್ಡಬಸಪ್ಪ, ಎಚ್.ಶಂಕರ್, ಭೀಮಶಂಕರ್, ಗಾದಿಲಿಂಗ, ಗಂಗಾಧರ, ದುರ್ಗದಾಸ್, ಅರ್ಜುನ್, ಶಿವು ಅಸುಂಡಿ, ಹನುಮಂತಪ್ಪ ಕುಡತಿನಿ, ತಿಪ್ಪೇಸ್ವಾಮಿ, ಕೋಳೂರು ಮಲ್ಲಿಕಾರ್ಜುನ, ಕೃಷ್ಣ, ಉಮೇಶ್, ಸುರೇಂದ್ರ, ಜಾನ್ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳು, ದಲಿತ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.