ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಕಳೆದ ನಾಲ್ಕೈದು ದಿನಗಳಿಂದ ಮಾದಿಗ ಸಮುದಾಯದ ಕಾಲೋನಿಗೆ ಬಳಕೆ ನೀರು ಪೂರೈಕೆಯಲ್ಲಿ ತಾರತಮ್ಯ ಮಾಡುವ ಕಾರಣ ನೀರಿಗಾಗಿ ಪರದಾಟ ಸೃಷ್ಟಿಯಾಗಿದ್ದು, ವಿಚಾರಿಸುತ್ತಿದ್ದ ವೇಳೆ ವಾಟರ್ ಮ್ಯಾನ್ ಬೆಂಬಲಿಗರು ದಲಿತ ಯುವಕ ಗೋವಿಂದಪ್ಪನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ತಾಲೂಕಿನ ಕೊಡಮೊಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಮಲಕುಂಟೆ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ಬಳಕೆ ನೀರಿನ ಅಭಾವ ಸೃಷ್ಡಿಯಾಗಿದ್ದು, ನೀರು ಪೂರೈಕೆಯಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ತಾರತಮ್ಯ ಮಾಡುತ್ತಿರುವ ಪರಿಣಾಮ ಮಹಿಳೆಯರು ನಿತ್ಯ ನೀರಿಗಾಗಿ ಪರದಾಟ ನಡೆಸುತ್ತಿದ್ದರು. ಇದೇ ವಿಚಾರವಾಗಿ ಕೊಳಾಯಿಗೆ ನೀರು ಪೂರೈಕೆ ತಾರತಮ್ಯ ಕುರಿತು ದಲಿತ ಯುವಕ ಗೋವಿಂದಪ್ಪ ಮನೆಯ ಬಳಿ ತೆರಳಿ ಸಂಪರ್ಕಿಸಿ ವಿಚಾರಿಸಲು ಹೋದ ವೇಳೆ ವಾಟರ್ ಮ್ಯಾನ್ ಇಲ್ಲದ ಕಾರಣ ಅವರ ಪುತ್ರನಿಗೆ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ. ಈ ವೇಳೆ ನೀನು ಯಾರು ಇದನ್ನು ಕೇಳುವುದಕ್ಕೆ ಎಂದು ಏಕವಚನದಲ್ಲಿ ಪುತ್ರ ಉಢಾಪೆ ಉತ್ತರ ನೀಡಿದ್ದು ಈತನ ಬೆಂಬಲಕ್ಕೆ ನಿಂತ ಎಸ್‌ಟಿ ಸಮುದಾಯಕ್ಕೆ ಸೇರಿದ ಇತರೆ 5 ಮಂದಿ ಏಕಾಏಕಿ ತಿರುಗಿ ಬಿದ್ದು ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಹಲ್ಲೆಗೆ ಒಳಗಾದ ದಲಿತ ಯುವಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಪಟ್ಟಂತೆ ಹಲ್ಲೆಗೆ ಒಳಗಾದ ಗೋವಿಂದಪ್ಪ ಮಾತನಾಡಿ, ನಮ್ಮ ಸ್ವಗ್ರಾಮ ಕಡಮಲಕುಂಟೆ ಗ್ರಾಮದ ಪರಿಶಿಷ್ಟ ಜಾತಿ (ಮಾದಿಗರ) ಕಾಲೋನಿಯಲ್ಲಿ ಬಳಕೆ ನೀರಿನ ಅಭಾವ ಸೃಷ್ಟಿಯಾಗಿತ್ತು. ನೀರಿಗಾಗಿ ದಲಿತ ಮಹಿಳೆಯರು ಪರದಾಟ ನಡೆಸುತ್ತಿದ್ದ ಹಿನ್ನಲೆಯಲ್ಲಿ ಸಮಸ್ಯೆ ಕುರಿತು ನಿಯಮನುಸಾರ ಕಾನೂನುಬದ್ಧವಾಗಿ ವಾಟರ್ ಮ್ಯಾನ್ ಪುತ್ರನ ಬಳಿ ವಿವರಿಸುತ್ತಿದ್ದ ವೇಳೆ ಇದೇ ಗ್ರಾಮದ ಎಸ್ ಟಿ ಸಮಾಜದ ವಕೀಲ ಹನುಮಂತರಾಯಪ್ಪ, ರಾಮಮೂರ್ತಿ, ಮಂಜು, ಪವನ್, ಅನಂತಮ್ಮ, ಎಂಬುವರು ಇದನ್ನು ಕೇಳಲು ನೀನು ಯಾರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುತ್ತಾರೆಂದು ಅಳಲು ತೋಡಿಕೊಂಡರು.ಘಟನೆ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ಮನವಿ ಮಾಡಿದ್ದೇನೆ. ಇದೇ ರೀತಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ನ್ಯಾಯ ಕೇಳಲು ಹೋದ ಪರಿಶಿಷ್ಟ ಜಾತಿ ಯುವಕರ ಮೇಲೆ ಹಲ್ಲೆಗಳು ನಡೆಸುವವರ ಮೇಲೆ ತನಿಖೆ ನಡೆಸಿ ದೌರ್ಜನ್ಯ ತಡೆಗಟ್ಟುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
;Resize=(128,128))
;Resize=(128,128))