ಸಾರಾಂಶ
ರಾಮನಗರ: ದಲಿತ ಯುವ ಮುಖಂಡ ಕೊತ್ತೀಪುರ ಗೋವಿಂದರಾಜು ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಇದಕ್ಕೆ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಅವರ ಬೆಂಬಲಿಗರೆ ಕಾರಣ ಎಂದು ಆರೋಪಿಸಿ ಗೋವಿಂದರಾಜು ನಗರದ ಐಜೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಟ್ಟಣದ ಬಿ.ಎಂ.ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ಹೊರ ಬಂದು ರಾಮಕೃಷ್ಣ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದ ಬೈಕ್ ಅನ್ನು ಹತ್ತಲು ಮುಂದಾದಾಗ ಮಾರಕಾಸ್ತ್ರಗಳೊಂದಿಗೆ ಬಂದ 6 ಮಂದಿ ನನ್ನನ್ನು ಸುತ್ತುವರಿದಿದ್ದಾರೆ.ಶಾಸಕರ ವಿರುದ್ಧ ಮಾತನಾಡುತ್ತೀಯಾ, ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಪತ್ರಿಕಾ ಹೇಳಿಕೆ ನೀಡುತ್ತೀಯಾ ಎಂದು ಧಮಕಿ ಹಾಕಿ ಹಲ್ಲೆ ಮಾಡಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇತ್ತೀಚಿಗೆ ನಡೆದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರು ದಲಿತ ಹೋರಾಟಗಾರರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿದ್ದು, ಮಹಿಳಾ ದಿನಾಚರಣೆಯಲ್ಲಿ ನಡೆದಿದ್ದ ಅವ್ಯವಸ್ಥೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದೆ. ರಾಮನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಸರ್ಕಾರಿ ಕಾಮಗಾರಿಗಳಲ್ಲಿನ ಅಕ್ರಮದ ಬಗ್ಗೆ ಇಡಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲು ಸಿದ್ದವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.ನನ್ನ ಮೇಲೆ 6 ಮಂದಿ ಹಲ್ಲೆ ಮಾಡಿ ರಾಡ್‌ನಿಂದ ಬೆನ್ನಿಗೆ ಹೊಡೆದು ಡ್ರಾಗನ್‌ನಿಂದ ತಿವಿದಿದ್ದು ನನಗೆ ತೀವ್ರಗಾಯಗಳಾಗಿ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಶಾಸಕರ ವಿರುದ್ಧ ಮಾತನಾಡಿದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವ ಗೂಂಡಾಗಳಿಗೆ ಶಾಸಕ ಇಕ್ಬಾಲ್‌ಹುಸೇನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಅನಿಲ್ ಜೋಗಿಂಧರ್ ಮತ್ತು ಮದರ್‌ಸಾಬರ ದೊಡ್ಡಿ ಗ್ರಾಮದ ರವಿಕುಮಾರ್ ಕುಮ್ಮಕ್ಕು ನೀಡಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಗೋವಿಂದರಾಜು ಆರೋಪ ಮಾಡಿದ್ದಾರೆ.
2ಕೆಆರ್ ಎಂಎನ್ 5.ಜೆಪಿಜಿರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ದಲಿತ ಯುವ ಮುಖಂಡ ಕೊತ್ತೀಪುರ ಗೋವಿಂದರಾಜು ಚಿಕಿತ್ಸೆಗೆ ದಾಖಲಾಗಿರುವುದು.