ಸಾರಾಂಶ
- ಗೇರುಮರಡಿ ಗ್ರಾಮಕ್ಕೆ ದಲಿತ ಮುಖಂಡರ ಭೇಟಿ
- ಬೀಗ ಒಡೆದು ದೇಗುಲ ಪ್ರವೇಶಿಸಿದ ದಲಿತ ಮುಖಂಡರು- ಯುವಕನ ಕೈಯಿಂದಲೇ ಪೂಜೆ ಮಾಡಿಸಿದ ಮುಖಂಡರುಕನ್ನಡಪ್ರಭ ವಾರ್ತೆ, ತರೀಕೆರೆ(ಚಿಕ್ಕಮಗಳೂರು)
ಸವರ್ಣೀಯರ ಕಾಲೊನಿಗೆ ಪ್ರವೇಶಿಸಿದ್ದಕ್ಕಾಗಿ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ಥಳಿತಕ್ಕೊಳಗಾಗಿದ್ದ ದಲಿತ ಯುವಕನಿಂದಲೇ ಮಂಗಳವಾರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಘಟನೆ ನಡೆದಿದೆ.ದೇವಾಲಯಕ್ಕೆ ಹಾಕಲಾಗಿದ್ದ ಬೀಗ ಒಡೆದು ಬಾಗಿಲು ತೆಗೆದು ದೇವಾಲಯದೊಳಗೆ ಪ್ರವೇಶಿಸಿದ ದಲಿತ ಮುಖಂಡರು ಹಾಗೂ ಸಮುದಾಯದವರು ದಲಿತ ಯುವಕನ ಕೈಯಿಂದ ಪೂಜೆ ಮಾಡಿಸಿದರು. ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನೂ ಪಠಿಸಿದರು.
ಜ.1ರಂದು ಗೇರುಮರಡಿ ಗ್ರಾಮದಲ್ಲಿ ಎಂ.ಸಿ.ಹಳ್ಳಿಯ ದಲಿತ ಯುವಕ ಮಾರುತಿ ಜೆಸಿಬಿ ಮೂಲಕ ಕಟ್ಟಡ ಕೆಲಸ ಮಾಡುತ್ತಿದ್ದಾಗ ಡಿಶ್ ಕೇಬಲ್ ತುಂಡಾಗಿತ್ತು. ಆಗ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿ 2,200 ರು. ದಂಡ ವಸೂಲಿ ಮಾಡಿದ್ದರು. ಗಾಯಗೊಂಡಿದ್ದ ಮಾರುತಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ಗೇರುಮರಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯದ ಅರ್ಚಕ ಅಪ್ಪು ಸೇರಿ 15 ಮಂದಿ ವಿರುದ್ಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ದೇಗುಲದ ಬಾಗಿಲು ಓಪನ್: ಜ.1 ರಂದು ಬೆಳಗ್ಗೆ ಕಂಬದ ರಂಗನಾಥಸ್ವಾಮಿ ದೇವಾಲಯದಲ್ಲಿ ಅರ್ಚಕ ಅಪ್ಪು ಪೂಜೆ ಮಾಡಿ ಬಾಗಿಲಿಗೆ ಬೀಗ ಹಾಕಿದ್ದರು. ಮಧ್ಯಾಹ್ನದ ನಂತರ ಚಾಲಕ ಮಾರುತಿ ಮೇಲಿನ ಹಲ್ಲೆ ಪ್ರಕರಣದಲ್ಲಿ ತನ್ನ ಹೆಸರು ಇರುವುದು ಗೊತ್ತಾಗುತ್ತಿದ್ದಂತೆ ನಾಪತ್ತೆಯಾಗಿದ್ದರು.ಅಪ್ಪು ತಮ್ಮೊಂದಿಗೆ ದೇವಸ್ಥಾನದ ಬೀಗವನ್ನೂ ತೆಗೆದುಕೊಂಡು ಹೋಗಿದ್ದ ಹಿನ್ನೆಲೆಯಲ್ಲಿ ಅಂದಿನಿಂದ ದೇವಾಲಯದಲ್ಲಿ ಪೂಜೆ ನಡೆದಿರಲಿಲ್ಲ. ಇದೀಗ ದಲಿತ ಸಂಘಟನೆ ಸ್ವಾಭಿಮಾನಿ ಒಕ್ಕೂಟದ ಸಂಚಾಲಕ ಪ್ರೊ. ಹರಿರಾಮ್, ಡಾ. ಕೋದಂಡರಾಮ್, ಕೆ.ಜಿ. ನಾಗರಾಜ್ ನೇತೃತ್ವದಲ್ಲಿ ದಲಿತ ಮುಖಂಡರು ತರೀಕೆರೆ ತಾಲೂಕು ಕಚೇರಿ ಎದುರು ಧರಣಿ ನಡೆಸಿ, ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ರಾಜೀವ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಗೇರುಮರಡಿ ಗ್ರಾಮಕ್ಕೆ ತೆರಳಿದ ದಲಿತ ಮುಖಂಡರು ದೇವಾಲಯಕ್ಕೆ ತೆರಳಿ ಬೀಗ ಒಡೆದರು. ತರುುವಾಯ ತಮ್ಮೊಂದಿಗಿದ್ದ ಚಾಲಕ ಮಾರುತಿ ಅವರಿಂದಲೇ ದೇವಾಲಯದಲ್ಲಿ ಪೂಜೆ ಮಾಡಿಸಿದರು. ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಿ, ಕೆಲ ಹೊತ್ತು ಸ್ಥಳದಲ್ಲಿಯೇ ಇದ್ದು ನಂತರ ಗೇರುಮರಡಿ ಗ್ರಾಮದಿಂದ ವಾಪಸ್ ತೆರಳಿದರು.ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್, ಡಿವೈಎಸ್‌ಪಿ ಹಾಲಮೂರ್ತಿರಾವ್, ತಹಸೀಲ್ದಾರ್ ರಾಜೀವ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
9 ಕೆಸಿಕೆಎಂ 6ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಕಂಬದ ರಂಗನಾಥಸ್ವಾಮಿ ದೇವಾಲಯದ ಬೀಗ ಒಡೆದು ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ದಲಿತ ಮುಖಂಡರಿದ್ದರು.