ಶುಚಿ ಜೇನುತುಪ್ಪದ ಉತ್ಪಾದನೆಗೆ ಆದ್ಯತೆ ನೀಡಿ ಡಾ.ರಾಮಚಂದ್ರ

| Published : Jan 10 2024, 01:46 AM IST

ಸಾರಾಂಶ

ಜೇನು ಸಾಕಾಣಿಕೆ ಮತ್ತು ನಿರ್ವಹಣೆ ಸಮಗ್ರ ಕೃಷಿ ಪದ್ಧತಿಯ ಒಂದು ಅವಿಭಾಜ್ಯ ಅಂಗವಾಗಿದ್ದು, ಶುಚಿ ಜೇನುತುಪ್ಪದ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಾಗೇನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ರಾಮಚಂದ್ರ ತಿಳಿಸಿದರು.

ಕೆವಿಕೆ ವತಿಯಿಂದ ಆಯೋಜಿಸಿದ್ದ ಜೇನು ಕೃಷಿ ತರಬೇತಿ । ಜೇನು ಕೃಷಿ ಮಾಹಿತಿಯ ಸಂಪೂರ್ಣ ವಿವರಣೆ ನೀಡಿದ ವಿಜ್ಞಾನಿಗಳು

ಕನ್ನಡಪ್ರಭ ವಾರ್ತೆ ಚಾಮರಾಜನಗರ ಜೇನು ಸಾಕಾಣಿಕೆ ಮತ್ತು ನಿರ್ವಹಣೆ ಸಮಗ್ರ ಕೃಷಿ ಪದ್ಧತಿಯ ಒಂದು ಅವಿಭಾಜ್ಯ ಅಂಗವಾಗಿದ್ದು, ಶುಚಿ ಜೇನುತುಪ್ಪದ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಾಗೇನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ರಾಮಚಂದ್ರ ತಿಳಿಸಿದರು. ಚಾಮರಾಜನಗರ ಕೆವಿಕೆ ವತಿಯಿಂದ ಬುಡಕಟ್ಟು ಉಪಯೋಜನೆಯಡಿ ಜೇನು ಕೃಷಿ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು, ಬೂದಿಪಡಗ ಮತ್ತು ಮುನೇಶ್ವರ ಕಾಲೋನಿಯ ಬುಡಕಟ್ಟು ಜನಾಂಗದ ರೈತರಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಬೆಳೆ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಂಡು ವೈವಿಧ್ಯತೆ ಕಾಪಾಡಿಕೊಳ್ಳುವುದರಿಂದ ನಿರಂತರ ಆದಾಯ ಗಳಿಸಿಕೊಂಡು ಕೃಷಿ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ವೈಜ್ಞಾನಿಕವಾಗಿ ಜೇನು ಸಂಸ್ಕರಣೆ ಮಾಡುವುದರಿಂದ ಉತ್ತಮ ಗ್ರಾಹಕ ನೆಲೆ ಕಂಡುಕೊಂಡು, ಮಾರುಕಟ್ಟೆ ವಿಸ್ತರಣೆ ಹಾಗೂ ಧಾರಣೆ ಹೆಚ್ಚಿ ಅಧಿಕ ಲಾಭ ಗಳಿಸಬಹುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತೋಟಗಾರಿಕಾ ವಿಜ್ಞಾನಿ ಡಾ. ಮೋಹನ್‌ಕುಮಾರ್, ಎ.ಬಿ. ಬೆಳೆ ಉತ್ಪಾದನೆಗೆ ಜೇನು ಸಾಕಾಣಿಕೆಯು ಒಂದು ಸರಪಳಿಯ ಕೊಂಡಿ ಇದ್ದಂತೆ, ಇದನ್ನು ಸರಿಯಾಗಿ ನಿರ್ವಹಿಸಿದರೆ ಬೆಳೆ ಪರಿಸರವು ಸಮತೋಲನವಾಗಿ, ಆರೋಗ್ಯದಾಯಕ ಮತ್ತು ಲಾಭದಾಯಕ ಉತ್ಪಾದನೆ ಕಾಯ್ದುಕೊಳ್ಳಬಹುದೆಂದು ತಿಳಿಸಿದರು.

ತರಬೇತಿಯಲ್ಲಿ ಜೇನು ಸಾಕಾಣಿಕೆಯ ತಾಂತ್ರಿಕ ಮಾಹಿತಿ ಒದಗಿಸಿ, ಜೇನು ಪೆಟ್ಟಿಗೆಯಲ್ಲಿ ಜೇನುಹುಳುಗಳ ಸಮೂಹ ನಿರ್ವಹಣೆಯ ಮಾಹಿತಿ ಒದಗಿಸಲಾಗುವುದು, ಇದನ್ನು ರೈತರು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಯೋಗೇಶ್‌ ಜಿ.ಎಸ್. ಜೇನು ಸಾಕಾಣಿಕೆಯಿಂದ ಬೆಳೆ ಉತ್ಪಾದನೆಯಲ್ಲಿ ದೊರೆಯುವ ಲಾಭಗಳನ್ನು ತಿಳಿಸಿ ಪುಷ್ಪ ಬೇಸಾಯಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು. ಈ ಒಂದು ಚಟುವಟಿಕೆಯಿಂದ ರೈತರು ಬೆಳೆ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುವುದು, ಕೃಷಿ ಅರಣ್ಯ ಪದ್ಧತಿ ಯಶಸ್ವಿಯಾಗಿ ಅಳವಡಿಸಿಕೊಳ್ಳಬಹುದು, ಸಾವಯವ ಕೃಷಿಯನ್ನು ವ್ಯವಸ್ಥಿತವಾಗಿ ಕೈಗೊಂಡು ಬೀಜೋತ್ಪಾದನಾ ಚಟುವಟಿಕೆಯಲ್ಲಿ ಲಾಭ ಕಂಡುಕೊಳ್ಳಬಹುದೆಂದು ತಿಳಿಸಿದರು.

ಇದಲ್ಲದೇ, ಕಾಲಕ್ಕನುಸಾರವಾಗಿ ಜೇನು ಸಾಕಾಣಿಕಾ ಪೆಟ್ಟಿಗೆಗಳನ್ನು ಬಾಡಿಗೆ ಆಧಾರಿತವಾಗಿ ಇತರೆ ರೈತರಿಗೆ ಒದಗಿಸಿ ಇಳುವರಿ ಹೆಚ್ಚಿಸಲು ಸಹಕಾರಿಯಾಗಿ ಆದಾಯ ಗಳಿಸಿಕೊಳ್ಳಬಹುದು ಮತ್ತು ಜೇನುತುಪ್ಪ ಉತ್ಪಾದಕರ ಸಂಸ್ಥೆ ಸ್ಥಾಪಿಸಿ, ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಬೆಂಬಲದೊಂದಿಗೆ ಉತ್ಪಾದನೆ ಮಾಡಿ, ಅದನ್ನು ಒಂದು ನಿರ್ದಿಷ್ಟ ಮುದ್ರೆಯೊಂದಿಗೆ ಮಾರುಕಟ್ಟೆ ಮಾಡಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹತ್ತಿ ಬೆಳೆ ಸಂಶೋಧನಾ ಪ್ರಾಯೋಜನೆಯ ಕೀಟಶಾಸ್ತ್ರ ವಿಜ್ಞಾನಿ ಡಾ.ನಾವಿ ಎಸ್.ಎಸ್. ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆಯ ಬಗ್ಗೆ ವಿವರಣೆ ನೀಡಿದರು. ಜೇನು ಸಮೂಹದ ವರ್ಗಗಳು, ಅವುಗಳ ಕಾರ್ಯ ವೈಖರಿಗಳು, ಜೇನು ನೊಣಗಳ ಶತ್ರುಗಳು, ಜೇನು ಹುಳುಗಳ ಒಗ್ಗೂಡಿಸುವಿಕೆ, ಪಾಲಾಗುವಿಕೆ ತಡೆಗಟ್ಟುವುದು, ವಿವಿಧ ಋತುಗಳಿಗನುಸಾರವಾಗಿ ಜೇನುಗೂಡು ನಿರ್ವಹಣೆ, ಅವಶ್ಯಕ ಸಸ್ಯ ಸಂಕುಲಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದಲ್ಲಿ ನಿರ್ವಹಿಸುತ್ತಿರುವ ಜೇನು ಸಾಕಾಣಿಕೆ ಪೆಟ್ಟಿಗೆ ಮತ್ತು ಜೇನುಹುಳು ಸಮೂಹಗಳ ಪ್ರಾತ್ಯಕ್ಷಿಕೆಯನ್ನು ತರಬೇತಿಯಲ್ಲಿ ಭಾಗವಹಿಸಿದ್ದ ರೈತರಿಗೆ ನಿದರ್ಶಿಸಿ ಮನವರಿಕೆ ಮಾಡಿಕೊಡಲಾಯಿತು.ಕೇಂದ್ರದ ತಾಂತ್ರಿಕ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಜೇನು ಕೃಷಿ ಉದ್ಯಮ ನಿರ್ವಹಿಸಿತ್ತಿರುವ ನಾಗುವಳ್ಳಿಯ ಶ್ರೀ. ರಾಜುರವರು ಪ್ರಾತ್ಯಕ್ಷಿಕೆಯ ವಿವರಣೆ ನೀಡಿ ತಮ್ಮ ಜೇನು ಕೃಷಿಯ ಅಮೂಲ್ಯ ಅನುಭವಗಳನ್ನು ತರಬೇತಿಯಲ್ಲಿ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವನ್ನು ವಿಸ್ತರಣಾ ವಿಜ್ಞಾನಿ ಸುಪ್ರಿಯ ಎನ್.ಎಸ್. ಪ್ರಸ್ತುತ ಪಡಿಸಿದರು, ಗೃಹ ವಿಜ್ಞಾನಿ ಡಾ. ದೀಪ, ಜೆ, ಮನುಷ್ಯರಿಗೆ ಜೇನಿನಿಂದ ದೊರೆಯುವ ಆರೋಗ್ಯದ ಲಾಭಗಳ ಬಗ್ಗೆ ತಿಳಿಸಿ ವೈಜ್ಞಾನಿಕ ಪ್ಯಾಕಿಂಗ್, ಬ್ರ್ಯಾಂಡಿಗ್ ಮತ್ತು ಲೇಬಲ್ಲಿಂಗ್ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಹತ್ತಿ ಬೆಳೆ ಯೋಜನೆಯ ವಿಜ್ಞಾನಿ ಡಾ.ಶಶಿಕುಮಾರ್, ಸಿ. ಕೇಂದ್ರದ ಹವಾಮಾನ ವೀಕ್ಷಕ ಶ್ರೀ ಆದರ್ಶ್, ಎನ್, ಯೋಜನಾ ಸಹಾಯಕ ನವೀನ್‌ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ರೈತರಿಗೆ ಕೇಂದ್ರದಲ್ಲಿ ನಿರ್ವಹಿಸುತ್ತಿರುವ ಜೇನು ಸಂಸ್ಕರಣಾ ಘಟಕದಲ್ಲಿ ಜೇನು ತೆಗೆಯುವ ಮೂಲಕ ವೈಜ್ಞಾನಿಕಾ ಜೇನು ಸಂಸ್ಕರಣೆ ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಡಲಾಯಿತು.