ಕಿಚ್ಚಾವಾಡಿಯಲ್ಲಿ ದಲಿತರ ದೇವಸ್ಥಾನ ಪ್ರವೇಶಕ್ಕೆ ಅಡ್ಡಿ

| Published : Oct 08 2025, 01:00 AM IST

ಕಿಚ್ಚಾವಾಡಿಯಲ್ಲಿ ದಲಿತರ ದೇವಸ್ಥಾನ ಪ್ರವೇಶಕ್ಕೆ ಅಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಲು ಹೋದಾಗ ಇದು ಖಾಸಗಿ ದೇವಾಲಯ ಎಂದು ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿ ಪೂಜೆಗೆ ನಿರಾಕರಿಸಿರುವ ಘಟನೆ ಕಿಚ್ಚಾವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಲು ಹೋದಾಗ ಇದು ಖಾಸಗಿ ದೇವಾಲಯ ಎಂದು ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿ ಪೂಜೆಗೆ ನಿರಾಕರಿಸಿರುವ ಘಟನೆ ಕಿಚ್ಚಾವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಿಚ್ಚವಾಡಿ ಗ್ರಾಮದಲ್ಲಿ ಚನ್ನಕೇಶವ, ಬಸವೇಶ್ವರ, ಲಕ್ಷ್ಮೀ ದೇವಿ, ಹುಚ್ಚಮ್ಮ ದೇವಿ, ಮಹಾದೇವಿ, ಮಾಸ್ತಮ್ಮ ದೇವಿ, ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಗಳಿವೆ. ಅದರಲ್ಲಿ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಗೋಪಿ ಜಯಪ್ರಕಾಶ್ ಎಂಬುವರು ಜುಲೈ 29ರಂದು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೇವಾಲಯ ಪ್ರವೇಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಈ ಮನವಿ ಆಧಾರಿಸಿ ಡಿವೈಎಸ್‌ ಪಿ ಓಂ ಪ್ರಕಾಶ್, ತಹಸೀಲ್ದಾರ್ ರಶ್ಮಿ, ಪಿಎಸ್ಐ ಪ್ರಶಾಂತ್, ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ದೇವಸ್ಥಾನದಲ್ಲಿ ಎಲ್ಲರಿಗೂ ಮುಕ್ತ ಪ್ರವೇಶಕ್ಕೆ ಅವಕಾಶವಿರಬೇಕು. ದೇವಸ್ಥಾನ ಪ್ರವೇಶಕ್ಕೆ ಯಾರಿಗೂ ಅಡ್ಡಿಪಡಿಸಬಾರದು ಎಂದು ಎಚ್ಚರಿಸಿದರು. ಗ್ರಾಮದ ಮುಖಂಡ ರಾಜಣ್ಣ ಮಾತನಾಡಿ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನ ನಮಗಾಗಿ ಕಟ್ಟಿಕೊಂಡಿದ್ದೇವೆ. ನಮ್ಮ ಅಣ್ಣ ತಮ್ಮಂದಿರಿಗೆ ಸೇರಿದ ದೇವಸ್ಥಾನವಿದು. ಯಾರನ್ನು ಪ್ರವೇಶ ಮಾಡಲು ಬಿಡುವುದಿಲ್ಲ. ಬೇಕಾದರೆ ದೇವಸ್ಥಾನ ಕಿತ್ತುಕೊಂಡು ಹೋಗಿ, ಇಲ್ಲದಿದ್ದರೆ ಪರಿಶಿಷ್ಟ ಜಾತಿ ಜನಾಂಗದವರಿಗೆ ಕೀ ಕೊಟ್ಟುಬಿಡುತ್ತೇನೆ ಅವರೇ ಪೂಜೆ ಮಾಡಿಕೊಳ್ಳಲಿ ಎಂದು ದೇವಸ್ಥಾನ ಪ್ರವೇಶಕ್ಕೆ ನಿರಾಕರಿಸಿದರು. ಇದರಿಂದಾಗಿ ಕೊನೆಗೂ ದಲಿತರಿಗೆ ದೇವಾಲಯ ಪ್ರವೇಶ ಮಾಡಬೇಕೆಂಬ ಕನಸು ನನಸಾಗಲಿಲ್ಲ. ಇನ್ನೂ ಘಟನೆ ಕೂರಿತು ಪ್ರತಿಕ್ರಿಯಿಸಿರುವ ದಲಿತ ಮುಖಂಡರು,ಮುಜುರಾಯಿ ದೇವಸ್ಥಾನವಾಗಲಿ, ಖಾಸಗಿ ದೇವಸ್ಥಾನವಾಗಲಿ. ಗ್ರಾಮದಲ್ಲಿ ಸಾರ್ವಜನಿಕವಾಗಿ ದೇವಸ್ಥಾನ ನಿರ್ಮಾಣ ಮಾಡಿ ಅದ್ಧೂರಿಯಾಗಿ ಹಬ್ಬ ಆಚರಿಸುತ್ತಿರುವಾಗ ದೇವಸ್ಥಾನ ಪ್ರವೇಶ ನಿರಾಕರಿಸುವಂತಿಲ್ಲ. ದೇವಸ್ಥಾನ ಪ್ರವೇಶಕ್ಕೆ ಸರ್ವರಿಗೂ ಸಮಾನವಾದ ಅವಕಾಶ ಮಾಡಿಕೊಡಬೇಕು, ಕೂಡಲೇ ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿದ್ದವರ ವಿರುದ್ಧ ಕ್ರಮ ಕೈಗೊಂಡು ದೇವಸ್ಥಾನ ಪ್ರವೇಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.