ಹುಣಸೂರು ತಾಲೂಕಿನ ಮಠದಕಟ್ಟೆ ಗ್ರಾಮದಲ್ಲಿ ದಲಿತರೇ ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ನಂಜುಂಡಯ್ಯ ಸೇರಿದಂತೆ ಮೂರು ದಲಿತ ಕುಟುಂಬಗಳನ್ನು ಅದೇ ಗ್ರಾಮದ ಇತರ ದಲಿತ ಕುಟುಂಬಗಳು ಬಹಿಷ್ಕಾರ ಹಾಕಿವೆ.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಮಠದಕಟ್ಟೆ ಗ್ರಾಮದಲ್ಲಿ ದಲಿತರೇ ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ನಂಜುಂಡಯ್ಯ ಸೇರಿದಂತೆ ಮೂರು ದಲಿತ ಕುಟುಂಬಗಳನ್ನು ಅದೇ ಗ್ರಾಮದ ಇತರ ದಲಿತ ಕುಟುಂಬಗಳು ಬಹಿಷ್ಕಾರ ಹಾಕಿವೆ ಎಂದು ಇಟ್ನಾ ಗ್ರಾಮದ ದಲಿತ ಮುಖಂಡ ರಾಜಣ್ಣ ಹೇಳಿದರು.

ಪಟ್ಟಣದ ಡಿವೈಎಸ್‌ಪಿ ಕಚೇರಿಯಲ್ಲಿ ಶನಿವಾರ ಡಿವೈಎಸ್‌ಪಿ ರವಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಹುಣಸೂರು ಉಪವಿಭಾಗ ಮಟ್ಟದ ಪ. ಜಾತಿ ಮತ್ತು ಪಂಗಡಗಳ ಸಭೆಯಲ್ಲಿ ದಲಿತ ಮುಖಂಡರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಇದೇ ವೇಳೆ ರಾಜಣ್ಣ ಮಾತನಾಡಿ, ಮನೆ ಗೃಹಪ್ರವೇಶ ಇನ್ನಿತರ ಯಾವುದೇ ಶುಭ ಅಥವಾ ಅಥವಾ ಅಶುಭ ಕಾರ್ಯಗಳಿಗೆ ಈ ಮನೆಗಳಿಗೆ ಇತರ ದಲಿತರು ಬರುತ್ತಿಲ್ಲ, ಇವರಿಗೆ ಆಹ್ವಾನವೂ ಇಲ್ಲ. ಇದ್ಯಾವ ನ್ಯಾಯ. ಈ ಕುಟುಂಬಗಳು ಮಾಡಿರುವ ತಪ್ಪೇನು ಎನ್ನುವುದೇ ಅರ್ಥವಾಗುತ್ತಿಲ್ಲ. ದಯವಿಟ್ಟು ನ್ಯಾಯ ಕೊಡಿಸಿ ಎಂದರು.

ಸಭೆಯಲ್ಲಿ ಎಲ್ಲ ತಾಲೂಕಿನ ಮುಖಂಡರು ಉಪವಿಭಾಗ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದ್ದು, ಅಬಕಾರ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸಿದರು.

ಆದಿಜಾಂಬವ ಸಂಘದ ಅಧ್ಯಕ್ಷ ಶಿವಣ್ಣ ಮಾತನಾಡಿ, ಹುಣಸೂರು ತಾಲೂಕಿನ ಹೆಮ್ಮಿಗೆ ಕಾಲೋನಿ, ಬೀರತಮ್ಮನಹಳ್ಳಿ ಕಾಲೋನಿ ಮತ್ತು ಗಾಣಿಗಕಟ್ಟೆ ಗ್ರಾಮಗಳಿಗೆ ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿಯ (ಗಡಿ ಗ್ರಾಮ) ಮದ್ಯದಂಗಡಿಯಿಂದ ಮದ್ಯ ಸರಬರಾಜು ಆಗುತ್ತಿದೆ ಎಂದು ಆರೋಪಿಸಿದರೆ, ರತ್ನಪುರಿ ಪುಟ್ಟಸ್ವಾಮಿ ಮಾತನಾಡಿ, ರತ್ನಪುರಿ ಗ್ರಾಮದಲ್ಲಿ ಬೆಳಗ್ಗೆ 4ಕ್ಕೆ ಮದ್ಯ ಮಾರಾಟ ಆರಂಭಿಸಿರುತ್ತಾರೆಂದರು.

ಬಿಳಿಕೆರೆ ಚೌಡಪ್ಪ ಮಾತನಾಡಿ, ಅಬಕಾರಿ ಇಲಾಖೆ ಅಕ್ರಮ ಮದ್ಯಮಾರಾಟ ತಡೆಯಲು ಎಲ್ಲೆಲ್ಲಿ ದಾಳಿ ನಡಸಿ ಕ್ರಮವಹಿಸಿದೆ ಎನ್ನುವ ಅಂಕಿ-ಅಂಶಗಳನ್ನು ನೀಡಲಿ ಎಂದು ಆಗ್ರಹಿಸಿದರು.

ಮಹಿಳಾ ದಲಿತ ಸಂಘಟನೆ ಜಿಲ್ಲಾ ಸಂಚಾಲಕಿ ಕಟ್ಟೆಮಳಲವಾಡಿ ಮಹದೇವಮ್ಮ ಮಾತನಾಡಿ, ಕಟ್ಟೆಮಳಲವಾಡಿ ಗ್ರಾಮದಲ್ಲಿ 12-13 ವರ್ಷದ ಬಾಲಕಿಯರು ಗಾಂಜಾ ಸೇವನೆ ಮಾಡುತ್ತಿದ್ದಾರೆ, ತಂಬಾಕು ಬಾರನ್ ಇರುವ ಒಂಟಿ ಮನೆಗಳ ಬಳಿ ತೆರೆಳಿ ಸೇವಿಸುತ್ತಿದ್ದಾರೆ. ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣ ಹೆಚ್ಚಾಗುತ್ತಿದ್ದು, ಅಪ್ರಾಪ್ತರ ವಯಸ್ಸು ಹೆಚ್ಚಿಸಿಕೊಳ್ಳಲು ಆಧಾರ್ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಿಕೊಡುವ ದಂದೆ ಅವ್ಯಾಹತವಾಗಿ ನಡೆದಿದೆ. ಗ್ರಾಮಾಂತರ ಠಾಣೆಗೆ ಈಗಾಗಲೇ ಮಾಹಿತಿ ನೀಡಿದ್ದೇನೆ. ಕ್ರಮವಹಿಸಿದರೆಂದು ಒತ್ತಾಯಿಸಿದರು.

ಫ್ಲೆಕ್ಸ್ ಹಾವಳಿ ತಡೆಯಿರಿ:

ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಉಪವಿಭಾಗ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆಯ ಅನಾಹುತಗಳು ಆಗುವ ಮುನ್ನ ಎಚ್ಚರವಹಿಸಬೇಕಿದೆ. ನಿರ್ಧಿಷ್ಟ ಸ್ಥಳ ಮತ್ತು ರೀತಿ ನೀತಿಯನ್ನು ಅನುಸರಿಸುವುದು ಕಡ್ಡಾಯಗೊಳಿಸಿ. ಅಸ್ಪೃಶ್ಯತೆ ನಿವಾರಣೆಗೆ ಹೋಬಳಿ ಮಟ್ಟದಿಂದ ಆರಂಭಿಸಿ ತಾಲೂಕು ಮಟ್ಟದವರೆಗೆ ಎಲ್ಲರನ್ನೊಳಗೊಂಡು ಅಸ್ಪೃಶ್ಯತಾ ಅರಿವು ಕಾರ್ಯಕ್ರಮ ಆಯೋಜಿಸಬೇಕೆಂದು ಆಗ್ರಹಿಸಿದರು. ಕಿರಂಗೂರು ಸ್ವಾಮಿ ಮಾತನಾಡಿ, ಹನಗೋಡು ಹೋಬಳಿ ಕೇಂದ್ರದಲ್ಲಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಪೊಲೀಸ್ ಚೌಕಿಯನ್ನು ಸ್ಥಳಾಭಾವದಿಂದಾಗಿ ತೆರವುಗೊಳಿಸಲಾಗಿದ್ದು, ಶೀಘ್ರ ಸ್ಥಾಪಿಸಬೇಕು ಹಾಗೂ ಕಾಲೇಜುಗಳು ತೆರೆಯುವ ವೇಳೆ ಪೊಲೀಸ್ ಬೀಟ್ ನಡೆಸುವ ಮೂಲಕ ಪುಂಡರಿಗೆ ಕಡಿವಾಣ ಹಾಕಲು ಕೋರಿದರು.

ಪಟ್ಟಣದ ಸಂವಿಧಾನ ವೃತ್ತದ ಕಂಬಕ್ಕೆ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಂಟಿಂಗ್ಸ್, ಬ್ಯಾನರ್ ಮತ್ತು ದೀಪಾಲಂಕಾರ ಮಾಡುತ್ತಿದ್ದು, ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ಸದಸ್ಯರು ಆಕ್ಷೇಪಿಸಿದಾಗ, ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷವಾಗಲೀ, ಸಂಘಟನೆಗಳಾಗಲೀ ಬಂಟಿಂಗ್ಸ್, ಬ್ಯಾನರ್, ದೀಪಾಲಂಕಾರಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ ಎಂದು ಡಿವೈಎಸ್‌ಪಿ ರವಿ ತಿಳಿಸಿದರು.

ಸಭೆಯಲ್ಲಿ ರಾಮಕೃಷ್ಣ, ದೇವರಾಜ್, ಗಜೇಂದ್ರ, ಶಿವಾನಂದ್, ರುಕ್ಮಿಣಿ, ಗಿರೀಶ್, ಶಿವರಾಜ್, ಇನ್ಸ್‌ ಪೆಕ್ಟರ್‌ ಗಳಾದ ಟಿ.ಎಂ. ಪುನೀತ್, ಸಂತೋಷ್ ಕಶ್ಯಪ್, ಮುನಿಯಪ್ಪ, ಗೋವಿಂದರಾಜು, ಚಿಕ್ಕನಾಯಕ, ಚಂದ್ರಹಾಸನಾಯಕ, ಕಿರಣ್, ಅಬಕಾರಿ ಇಲಾಖೆ ಇನ್ಸ್‌ ಪೆಕ್ಟರ್ ಧರ್ಮರಾಜ್, ಪ. ವರ್ಗಗಳ ಕಲ್ಯಾಣ ಇಲಾಖೆ ಗಂಗಾಧರ್, ವಿ. ಪ್ರಸಾದ್, ಶಿವಣ್ಣ ಇದ್ದರು.