ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ದಲಿತರನ್ನು ಕಾಂಗ್ರೆಸ್ ಅಗ್ರಿಮೆಂಟ್ ಮಾಡಿಕೊಂಡಿಲ್ಲ. ಕ್ಷೇತ್ರದಲ್ಲಿ ದಲಿತರಿಗೆ ಜೆಡಿಎಸ್‌ನಿಂದ ಹೆಚ್ಚು ಅಧಿಕಾರ ಸಿಕ್ಕಿದೆಯೇ ಹೊರತು ಕಾಂಗ್ರೆಸ್ ನಿಂದಲ್ಲ ಎಂದು ಜೆಡಿಎಸ್ ಎಸ್ಸಿ ವಿಭಾಗದ ಅಧ್ಯಕ್ಷ ಬೊಮ್ಮರಾಜು ಕಾಂಗ್ರೆಸ್ ನ ಕೆ.ಬಿ.ರಾಮು ಹೇಳಿಕೆಗೆ ತಿರುಗೇಟು ನೀಡಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಜಯಂತಿಗೆ ಜನರು ಸ್ವಯಂ ಪ್ರೇರಿತವಾಗಿ ಆಗಮಿಸುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿನ ದಲಿತ ಮುಖಂಡರು ರಾಜಕಾರಣಿಗಳಿಂದ ಹಣಪಡೆದು ಜನರನ್ನು ಕರೆತಂದು ಅಂಬೇಡ್ಕರ್ ಜಯಂತಿ ಮಾಡಿದ್ದಾರೆ ಎಂದರು.
ಜೆಡಿಎಸ್ ಪಕ್ಷದ ಎಸ್ಸಿ ವಿಭಾಗದಿಂದ ದಲಿತ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದೇವೆ, ಅದನ್ನು ಸಹಿಸಲಾಗದೆ ಕಾಂಗ್ರೆಸ್‌ನವರು ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ಕಾರ್ಯಕರ್ತರ ಸಭೆಗೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಕೆ.ಬಿ.ರಾಮು ಅವರು ಒಬ್ಬ ಪಕ್ಷಾಂತರಿ. ಜೆಡಿಎಸ್‌ನಲ್ಲಿದ್ದಾಗ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿದ್ದೀಯಾ. ಇದೀಗ ಅವರ ವಿರುದ್ಧವೇ ಮಾತನಾಡುತ್ತಿದ್ದೀಯ. ತಾಲೂಕಿನಲ್ಲಿ ದಲಿತರು ಏನಾದರೂ ರಾಜಕೀಯವಾಗಿ ಅಧಿಕಾರ ಅನುಭವಿಸಿದ್ದಾರೆ ಎಂದರೆ ಅದು ಜೆಡಿಎಸ್ ಪಕ್ಷ, ಸಿ.ಎಸ್.ಪುಟ್ಟರಾಜು ಅವರಿಂದ ಎಂದು ಕಾಂಗ್ರೆಸ್‌ನ ಬೆಂಬಲಿತ ದಲಿತ ನಾಯಕರ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಒಂದು ಕೋಮುವಾದಿ ಪಕ್ಷ. ಅಂಬೇಡ್ಕರ್ ಸಾವನಪ್ಪಿದಾಗ ಅವರ ಅಂತ್ಯಕ್ರಿಯೆಗೆ ಜಾಗನೀಡಲಿಲ್ಲ. ಚುನಾವಣೆಯಲ್ಲಿ ಸೋಲಿಸಿ ಅಧಿಕಾರದಿಂದ ವಂಚಿಸಿದರು. ಆ ಪಕ್ಷ ಬೆಂಕಿ ಹತ್ತಿ ಉರಿಯುತ್ತಿರುವ ಮನೆ. ಆ ಮನೆಗೆ ದಲಿತರು ಹೋಗಬೇಡಿ ಎಂದು ಅಂಬೇಡ್ಕರ್ ಅವರೇ ಹೇಳಿದ್ದಾರೆ. ಹಾಗಾಗಿ ದಲಿತರು ಕಾಂಗ್ರೆಸ್ ಗೆ ಮತಹಾಕಬೇಡಿ ಎಂದು ಮನವಿ ಮಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು, ಒಕ್ಕಲಿಗರ ವಿರೋಧಿಯಾಗಿದ್ದಾರೆ. ದಲಿತರಿಗೆ ಅಧಿಕಾರ ನೀಡದೆ ವಂಚಿಸಿದ್ದಾರೆ. ತಾಕತ್ತಿದ್ದರೆ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿ ಕೇಂದ್ರದಲ್ಲಿ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ನಾವು ಕಾಂಗ್ರೆಸ್ ಗೆ ಮತಹಾಕುತ್ತೇವೆ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಅರ್ಚನಚಂದ್ರು, ತಾಪಂ ಮಾಜಿ ಸದಸ್ಯ ಗೋವಿಂದಯ್ಯ, ಟಿಎಪಿಸಿಎಂಎಸ್ ನಿರ್ದೇಶಕ ಕಣಿವೆ ಯೋಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಎಸ್.ಜಗದೀಶ್, ಪುರಸಭೆ ಸದಸ್ಯರಾದ ಶಿವಕುಮಾರ್, ಚಂದ್ರು, ಜೆಡಿಎಸ್ ಎಸ್ಸಿ ಘಟಕದ ಕಾರ್ಯಾಧ್ಯಕ್ಷ ಟೌನ್ ಚಂದ್ರು, ರಾಚಯ್ಯ, ಪ್ರಶಾಂತ್ ಸೇರಿದಂತೆ ಹಲವರು ಹಾಜರಿದ್ದರು.