ಸರ್ಕಾರದಿಂದಲೇ ದಲಿತರ ಹಣ ಲೂಟಿ

| Published : Jul 26 2024, 01:36 AM IST

ಸಾರಾಂಶ

ಪ.ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಹಗಲು ದರೋಡೆ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಶಿರಾ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತ, ಶೋಷಿತ, ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಪ.ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ಹಗಲು ದರೋಡೆ ಮಾಡುತ್ತಿದೆ. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವೆಂಕಟಗಿರಿಯಯ್ಯ ಅವರು ಒತ್ತಾಯಿಸಿದರು.ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರೊ. ಬಿ.ಕೃಷ್ಣಪ್ಪ ಅವರ 86ನೇ ಜನ್ಮದಿನೋತ್ಸವ ಮತ್ತು ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ದುರಾಡಳಿತ ವ್ಯವಸ್ಥೆಯನ್ನು ಖಂಡಿಸಿ, ತಾಲೂಕಿನಾದ್ಯಂತ ಕೃಷಿ ಭೂಮಿ, ವಸತಿ ಮತ್ತು ನಿವೇಶನ, ಸ್ಮಶಾನ ಹಾಗೂ ನಗರ ಪ್ರದೇಶದಲ್ಲಿ ದಲಿತ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯಕ್ಕಾಗಿ ಸಂಘರ್ಷ ರ್ಯಾ ಲಿಯಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ವಚನ ಭ್ರಷ್ಟ ಮುಖ್ಯಮಂತ್ರಿಯಾಗಿದ್ದಾರೆ. 12 ಬಾರಿ ಬಜೆಟ್ ಮಂಡಿಸಿ ಆರ್ಥಿಕ ಶಿಸ್ತನ್ನು ಉಳಿಸಿಕೊಳ್ಳಲು ಆಗದೆ. ಶೋಷಿತ ಸಮುದಾಯಗಳ ಹಣವನ್ನು ಮನಸೋ ಇಚ್ಚೆ ಲೂಟಿ ಮಾಡುವ ಮೂಲಕ ಸರ್ಕಾರ ದಲಿತ ವಿರೋಧಿಯಾಗಿದೆ ಎಂದು ಗುಡುಗಿದರು.ಶಿರಾ ನಗರಸಭೆಯಲ್ಲಿ ಪ.ಜಾತಿ ಮಹಿಳೆ ಅಧ್ಯಕ್ಷೆಯಾಗಿದ್ದು ಈ ಮಹಿಳೆಯನ್ನು ಅತ್ಯಂತ ನಿರ್ಲಕ್ಷ್ಯಮಾಡಿ ಕಾನೂನು ಪ್ರಕಾರ ಸಿಗಬೇಕಾದ ಗೌರವವನ್ನು ನೀಡದೆ, ನಗರಸಭೆ ಅಧ್ಯಕ್ಷರ ಮಾತನ್ನು ಪೌರಾಯುಕ್ತರು ಉದಾಸೀನ ಮಾಡುತ್ತಿದ್ದಾರೆ. ದಲಿತರು ನಮ್ಮ ರಾಜಕೀಯ ಹಕ್ಕನ್ನು ಚಲಾಯಿಸಲು ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆರೋಪಿಸಿದರು. ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಟೈರ್ ರಂಗನಾಥ್ ಮಾತನಾಡಿ, ಶಿರಾ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಶಾಸಕ ಟಿ.ಬಿ.ಜಯಚಂದ್ರ ಅವರು ಚುನಾವಣೆಗೂ ಮುನ್ನಾ ಚಿಕ್ಕಚೆನ್ನಯ್ಯ ಅವರ ಕಾಲದಲ್ಲಿ ನೀಡಿರುವ ಸಾಗುವಳಿ ಜಮೀನುಗಳಿಗೆ ದುರಸ್ತು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಚುನಾವಣೆ ಆಗಿ ಒಂದು ವರ್ಷ ಕಳೆದರೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಜಯಚಂದ್ರ ಅವರು ಎಸ್.ಸಿ. ಎಸ್ಟಿ ಮತಗಳಿಂದ ಗೆದ್ದಿದ್ದಾರೆ. ಇದುರವೆಗೂ ಹಲವರಿಗೆ ನಿವೇಶನ ಇಲ್ಲ, ಮನೆ ಇಲ್ಲ ಹೀಗಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶಿರಾ ನಗರದ ಸುತ್ತಮುತ್ತ ಜಮೀನು ಕಳೆದುಕೊಂಡಿರುವ ಎಸ್ಸಿ ಸಮುದಾಯದವರಿಗೆ ಬೇರೆಡೆ ಜಮೀನು ನೀಡಬೇಕು. ಶಾಸಕರು ಕೂಡಲೇ ಎಚ್ಚೆತ್ತುಕೊಂಡು ದಲಿತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಖಜಾಂಚಿ ರಾಜು, ಶಿವಾಜಿ ನಗರ ತಿಪ್ಪೇಸ್ವಾಮಿ, ಲಾವಣ್ಯ, ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಗಣೇಶ್, ಕೃಷ್ಣಮೂರ್ತಿ, ಗೋಪಾಲ್, ಶ್ರೀಧರ್, ಕೋದಂಡರಾಮ, ಭೂತೇಶ್, ಕಾರ್ತಿಕ್, ತಿಪ್ಪೇಶ್.ಕೆ.ಕೆ, ಜೈರಾಜ್, ಕಾರೇಳ್ಳಪ್ಪ, ಲಕ್ಷ್ಮಿಕಾಂತ್, ರಂಗನಾಥ್ ಮೌರ್ಯ, ದಿನೇಶ್, ಸೋಮಶೇಖರ್, ಶ್ರೀರಂಗಪ್ಪ, ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.