ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ದಲಿತರು ಅಂಬೇಡ್ಕರ್ ಚಿಂತನೆ ಅಳವಡಿಸಿಕೊಂಡು ಒಗ್ಗಟ್ಟಾಗಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ, ನಮ್ಮನ್ನು ಸಂವಿಧಾನ ರಕ್ಷಿಸುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.ವಿಜಯನಗರ ಜಿಲ್ಲಾ ಚಲವಾದಿ ಮಹಾಸಭಾದಿಂದ ನಗರದ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಸಂವಿಧಾನದ ಪೂರ್ವ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ೧೦೧ ಜಾತಿಗಳಿವೆ. ಈ ಜಾತಿಗಳಲ್ಲಿ ಒಗ್ಗಟ್ಟು ಇರಬೇಕು. ನಾವು ಎಡ, ಬಲ, ಮಧ್ಯಮ ಎನ್ನದೇ ಎಲ್ಲರೂ ಕೂಡಿ ಬಾಳಬೇಕು ಎಂದು ಸಚಿವ ಡಾ.ಮಹಾದೇವಪ್ಪ ಕರೆನೀಡಿದರು.ದೇಶದಲ್ಲಿ ೪೦ ಕೋಟಿ ದಲಿತರಿದ್ದಾರೆ. ಈ ದೇಶದ ಮೂಲ ನಿವಾಸಿಗಳು ನಾವಿಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯಬಂದು ೭೬ ವರ್ಷ ಕಳೆದರೂ ಇಂದಿಗೂ ನಾವು ಸ್ವಂತ ಮನೆಗಳನ್ನು ಕಟ್ಟಿಕೊಳ್ಳಲು ಪರದಾಡುವ ಸ್ಥಿತಿ ಇದೆ. ನಾವೆಲ್ಲರೂ ಅಂಬೇಡ್ಕರ್ ಅವರನ್ನು ಅರಿತುಕೊಂಡು ಪ್ರಶ್ನಿಸುವ ಗುಣದೊಂದಿಗೆ ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ ಎಂದರು.
ಶ್ರೇಣಿಕೃತ ಸಮಾಜವನ್ನು ಬಯಸುವವರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ದಲಿತರಲ್ಲಿ ಒಡಕುಂಟು ಮಾಡುತ್ತಾರೆ. ಹಾಗಾಗಿ ಅಂಬೇಡ್ಕರ್ ಅವರನ್ನು ಓದಿಕೊಂಡರೆ ನಾವು ಒಗ್ಗಟ್ಟಾಗಿ ಇರುತ್ತೇವೆ. ಅಂಬೇಡ್ಕರ್ ಅವರು ಆಗಿನ ಕಾಲದಲ್ಲೇ ಮಹಾತ್ಮ ಗಾಂಧೀಜಿ ಅವರನ್ನು ಪ್ರಶ್ನೆ ಮಾಡಿದ್ದರು. ಆದರೆ, ಈಗ ನಾವೇ ಆ ಜಾತಿ, ಈ ಜಾತಿ ಎಂದು ಗುರುತಿಸಿಕೊಳ್ಳುತ್ತಿದ್ದೇವೆ ಎಂದರು.ದಲಿತ ಸಮಾಜಕ್ಕೆ ನಾಯಕತ್ವದ ಕೊರತೆ ಇದೆ. ಯಾವ ಸಮಾಜಕ್ಕೆ ನಾಯಕತ್ವ ಕೊರತೆ ಇರುತ್ತದೆಯೋ ಆ ಸಮಾಜ ಅನಾಥ ಸಮಾಜ ಆಗುತ್ತದೆ. ದಲಿತರು, ಹಿಂದುಳಿದವರು, ಮುಸ್ಲಿಮರು ಸಂಘಟನಾತ್ಮಕ ಹೋರಾಟ ನಡೆಸಿ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ಕೇಂದ್ರದ ಸಚಿವರೊಬ್ಬರು ನಾವು ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸುಮ್ಮನಾಗುತ್ತಾರೆ. ವೋಟಿನ ರಾಜಕಾರಣ ಮಾಡದೇ, ಸಂವಿಧಾನದ ಆಶಯ ಉಳಿಸುವ ಕೆಲಸ ಮಾಡಬೇಕು. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ಕಾಲಘಟ್ಟದಲ್ಲಿ ನಾವು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಂಬುದನ್ನು ಅರಿತುಕೊಂಡು ಶ್ರಮಪಟ್ಟು ಓದಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದರು.ಅಂಬೇಡ್ಕರ್ ಅವರಿಗೆ ಯಾರೂ ಸರಿಸಾಟಿಯಲ್ಲ. ವಿಶ್ವಸಂಸ್ಥೆ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಣೆ ಮಾಡುತ್ತದೆ. ನಾವೆಲ್ಲರೂ ಸಂವಿಧಾನದ ಆಶಯದಂತೆ ಮುನ್ನಡೆಯಬೇಕು ಎಂದರು.
ಮಾಜಿ ಶಾಸಕ ನೆಹರು ಓಲೇಕಾರ್ ಮಾತನಾಡಿ, ಕರ್ನಾಟಕ ಸರ್ಕಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೬೦ ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು. ಜತೆಗೆ ಒಂದು ಸಾವಿರ ಎಕರೆ ಪ್ರದೇಶ ಮೀಸಲಿಟ್ಟು ದಲಿತರ ಉದ್ಧಾರಕ್ಕಾಗಿ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಮಾಡಬೇಕು. ಈ ಮೂಲಕ ದಲಿತರ ಶ್ರೇಯೋಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದರು.ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿ, ದಲಿತರು ಒಂದುಗೂಡಿದರೆ, ಸಂವಿಧಾನ ಉಳಿಯುತ್ತದೆ. ಇಂತಹ ಚಿಂತನಾ ಕಾರ್ಯಕ್ರಮಗಳನ್ನು ಚಲವಾದಿ ಮಹಾಸಭಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕನ್ನಡ ವಿವಿ ಪ್ರಾಧ್ಯಾಪಕ ಡಾ. ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಾಜಿ ಶಾಸಕ ಸಿರಾಜ್ ಶೇಕ್, ಮುಖಂಡರಾದ ರಾಜಶೇಖರ್ ಹಿಟ್ನಾಳ್, ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ಎ. ಮಾನಯ್ಯ, ಮುಂಡ್ರಗಿ ನಾಗರಾಜ, ಗುಜ್ಜಲ ನಾಗರಾಜ, ಸಯ್ಯದ್ ಮೊಹಮ್ಮದ್, ಕೆ. ರವಿಕುಮಾರ, ನರಸಪ್ಪ, ಸಿದ್ದಯ್ಯ, ಕೊಟ್ರಪ್ಪ, ಸುಭಾಷ್ ನಾಟಿಕರ್, ಚಲುವರಾಜ್, ಶಿವಕುಮಾರ, ನಿಂಬಗಲ್ ರಾಮಕೃಷ್ಣ, ಬಸವರಾಜ, ಈರಮ್ಮ, ಮಾಳಗಿ ಅಸ್ಲಾಂ, ಈರಮ್ಮ ಮತ್ತಿತರರಿದ್ದರು. ಸೋಮಶೇಖರ್ ಬಣ್ಣದಮನೆ, ಯಲ್ಲಪ್ಪ ಭಂಡಾರ್‌ದಾರ್ ನಿರ್ವಹಿಸಿದರು.
ಅದ್ಧೂರಿ ಮೆರವಣಿಗೆ:ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಸಾರೋಟದಲ್ಲಿ ಕೂರಿಸಿ ದಲಿತ ಸಮುದಾಯ ಭವ್ಯ ಮೆರವಣಿಗೆ ನಡೆಸಿತು.