ಸ್ಮಶಾನಕ್ಕೆ ಆಗ್ರಹಿಸಿ ದಲಿತರ ಧರಣಿ

| Published : Mar 31 2024, 02:04 AM IST

ಸಾರಾಂಶ

ಹಿರಿಯೂರು ತಾಲೂಕಿನ ಗುಳಗೊಂಡನಹಳ್ಳಿಯಲ್ಲಿ ದಲಿತರಿಗೆ ಸ್ಮಶಾನವಿಲ್ಲವೆಂದು ಧರಣಿ ಕುಳಿತ ಸ್ಥಳಕ್ಕೆ ತಹಶೀಲ್ದಾರ್ ರಾಜೇಶ್ ಕುಮಾರ್ ಭೇಟಿ ನೀಡಿ ಸ್ಮಶಾನ ಮಂಜೂರು ಮಾಡುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಗುಳಗೊಂಡನಹಳ್ಳಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನವಿಲ್ಲದೇ ಇರುವುದರಿಂದ ಶುಕ್ರವಾರ ನಿಧನ ಹೊಂದಿದ್ದ ಗುಡದಪ್ಪ ಎಂಬುವವರನ್ನು ಹೂಳಲು ಜಾಗವಿಲ್ಲದ ಕಾರಣ ತಾಲೂಕು ಕಚೇರಿ ಮುಂದೆ ಶವವಿರಿಸಿ ಪ್ರತಿಭಟನೆ ನಡೆಸುವ ಸುಳಿವು ದೊರೆತ ಹಿನ್ನೆಲೆಯಲ್ಲಿ ತಹಶೀಲ್ದಾರ್ ರಾಜೇಶ್ ಕುಮಾರ್ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಗ್ರಾಮದ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ದಾಖಲೆಗಳನ್ನು ಪರಿಶೀಲನೆ ನಡೆಸಿ ಬಳಿಕ ತಹಶೀಲ್ದಾರ್ ರಾಜೇಶ್ ಕುಮಾರ್‌ ಮಾತನಾಡಿ, ಈಗಾಗಲೇ ಗುಳಗೊಂಡನಹಳ್ಳಿ ಗ್ರಾಮಕ್ಕೆ ಸ್ಮಶಾನ ಮಂಜೂರು ಆಗಿದ್ದು, ಸದರಿ ಜಾಗದಲ್ಲಿ ಸರ್ಕಾರಿ ಶಾಲೆ ಮತ್ತು ಮನೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಈಗ ಪಹಣಿಯಲ್ಲಿ ಬರುತ್ತಿರುವ ಸ್ಮಶಾನ ಭೂಮಿಯನ್ನು ರದ್ದು ಮಾಡಿ, ಹೊಸದಾಗಿ ಗ್ರಾಮದ ಪಕ್ಕದಲ್ಲಿ ಸ್ಮಶಾನ ಭೂಮಿಯನ್ನು ಏಪ್ರಿಲ್ ಮೊದಲ ಅಥವಾ ಎರಡನೇ ವಾರದೊಳಗೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್‌ ಭರವಸೆಯ ಬಳಿಕ ಶವ ಸಂಸ್ಕಾರ ನೆರವೇರಿತು. ಇನ್ನು, ಗ್ರಾಮದ ಸವರ್ಣಿಯರು ಅವರ ಜಮೀನಿನಲ್ಲಿಯೇ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟದ್ದರಿಂದ ಭಾದಸಂಸ ಸಂಘಟನೆ ಪದಾಧಿಕಾರಿಗಳು ಹೋರಾಟವನ್ನು ವಾಪಸ್ ಪಡೆದರು.

ಈ ಸಂದರ್ಭದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಕೆ.ತಿಮ್ಮರಾಜು, ಮಹಾನಾಯಕ ದಲಿತಸೇನೆ ರಾಜ್ಯ ಕಾರ್ಯಾಧ್ಯಕ್ಷ ಕೆ.ಪಿ. ಶ್ರೀನಿವಾಸ್, ರಾಜ್ಯ ಕಾರ್ಯದರ್ಶಿ ಓಂಕಾರ್, ಭಾರತೀಯ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಅಧ್ಯಕ್ಷ ಆರ್ ರಾಘವೇಂದ್ರ, ಕಾರ್ಯದರ್ಶಿಗಳಾದ ಕೆಂಚಪ್ಪ, ಮಂಜುನಾಥ್, ಸಂದೀಪ್, ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.