ಸಾರಾಂಶ
ತಾಲೂಕಿನ ಸಾಸ್ವೇಹಳ್ಳಿ ಹೋಬಳಿ ಹತ್ತಿರ 116 ಗ್ರಾಮಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೇಹಳ್ಳಿ ಏತನೀರಾವರಿ ಯೋಜನೆಗೆ ಸಂಬಂಧಿಸಿದ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಎ.ಡಿ.ವಿ.ಎಸ್. ಸಂಸ್ಥೆ ಶಾಲಾ- ಕಾಲೇಜುಗಳ ಕಟ್ಟಡಗಳಿಗೆ ಹಾನಿಯಾಗುವ ಆತಂಕವಿದೆ.
ಹೊನ್ನಾಳಿ : ತಾಲೂಕಿನ ಸಾಸ್ವೇಹಳ್ಳಿ ಹೋಬಳಿ ಹತ್ತಿರ 116 ಗ್ರಾಮಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೇಹಳ್ಳಿ ಏತನೀರಾವರಿ ಯೋಜನೆಗೆ ಸಂಬಂಧಿಸಿದ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಎ.ಡಿ.ವಿ.ಎಸ್. ಸಂಸ್ಥೆ ಶಾಲಾ- ಕಾಲೇಜುಗಳ ಕಟ್ಟಡಗಳಿಗೆ ಹಾನಿಯಾಗುವ ಆತಂಕವಿದೆ. ಈ ಹಿನ್ನೆಲೆ ಇಲಾಖೆ ಅಧಿಕಾರಿಗಳು ಸೂಕ್ತ ನ್ಯಾಯ ಒದಗಿಸಬೇಕು ಎಂದು ಸಂಸ್ಥೆ ಕಾರ್ಯದರ್ಶಿ ಕೃಷ್ಣಮೂರ್ತಿ ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.ಡಿ.ವಿ.ಎಸ್. ಸಂಸ್ಥೆ 30 ವರ್ಷಗಳಿಂದ ಬಡ ಮತ್ತು ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಈ ಸಂಸ್ಥೆಯ ಶಾಲಾ- ಕಾಲೇಜುಗಳ ಕಟ್ಟಡ ಹತ್ತಿರವೇ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಎಲ್ಲ ಕಟ್ಟಡಗಳಿಗೆ ಹಾನಿಯಾಗುವ ಸಂಭವವಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ, ತಮ್ಮ ಸಂಸ್ಥೆಗೆ ನ್ಯಾಯ ನೀಡಬೇಕು ಎಂದರು.
ನೂರಾರು ಹಳ್ಳಿಗಳ ನೂರಾರು ಕೆರೆಗಳಿಗೆ ನೀರು ಒದಗಿಸುವ ಮೂಲಕ ರೈತರಿಗೆ ಅನುಕೂಲವಾದ ಈ ಯೋಜನೆ ಬಗ್ಗೆ ತಮಗೂ ಸಹಮತವಿದೆ. ಆದರೆ, ಯೋಜನೆ ನೆಪದಲ್ಲಿ ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆಗಳು ಇದೇ ಕಾಮಗಾರಿಗಳ ಕಾರಣ ಮುಂದಿಟ್ಟುಕೊಂಡು, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದಾಗಿ ಸಂಸ್ಥೆಯ ಕಟ್ಟಡದ ಅತಿ ಸಮೀಪವೇ ಜಾಕ್‌ವೆಲ್ ನಿರ್ಮಾಣ ಹಾಗೂ ವಿದ್ಯುತ್ ಟವರ್ ಕಂಬ ನಿರ್ಮಾಣ ಮಾಡುತ್ತಿದ್ದಾರೆ. ಹಳೆ ರಾಜಕಾಲುಪೆ ಬಂದ್ ಮಾಡಿದ್ದಾರೆ. ಇದರ ಪರಿಣಾಮ ಮಳೆ ಬಂದರೆ 9.30 ಎಕರೆಗೂ ಹೆಚ್ಚಿನ ಪ್ರದೇಶ ಸಂಪೂರ್ಣ ಜಲಾವೃತವಾಗುತ್ತಿದೆ ಎಂದರು.
ಇದರಿಂದ ಜೌಗು ಹೆಚ್ಚಾಗಿ ಕೋಟಿಗಟ್ಟಲೆ ಬೆಲೆ ಬಾಳುವ ಶಾಲಾ-ಕಾಲೇಜು ಕಟ್ಟಡಗಳು ಶಿಥಿಲಗೊಳ್ಳುವ ಅಪಾಯವಿದೆ. ಇಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕೆಲ ದಶಕಗಳಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕೆಲವಾರು ಕೋಟಿ ಮೌಲ್ಯದ ಕಟ್ಟಡಗಳನ್ನು ಉಳಿಸಿಕೊಡುವ ಕೆಲಸವಾಗಬೇಕಿದೆ ಎಂದು ಅಧಿಕಾರಿಗಳು, ಸರ್ಕಾರಕ್ಕೆ ಮನವಿ ಮಾಡಿದರು.
ಈ ಹಿಂದೆ ಈ ಬಗ್ಗೆ ನೀರಾವರಿ ಇಲಾಖಾ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. ಆಗ ಜೌಗು ಆಗದಂತೆ ತಡೆಯಲು ಕಟ್ಟಡಗಳ ಸುತ್ತಲೂ ಕಾಲುವೆ ನಿರ್ಮಿಸಿ ಎತ್ತರಕ್ಕೆ ಮಣ್ಣು ಹಾಕಿಸುವ ಭರವಸೆ ನೀಡಿದ್ದರು. ಜೊತೆಗೆ ಸರ್ಕಾರದಿಂದ ₹50 ಲಕ್ಷ ಮಂಜೂರು ಕೂಡ ಆಗಿತ್ತು. ಆದರೆ ಈ ಕಾಮಗಾರಿ ಪರಿಪೂರ್ಣವಾಗಿಲ್ಲ
- ಕೃಷ್ಣಮೂರ್ತಿ, ಕಾರ್ಯದರ್ಶಿ