ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಫೆಂಗಲ್ ಚಂಡಮಾರುತದ ಪರಿಣಾಮದಿಂದಾಗಿ ಸೋಮವಾರ ಸಂಜೆಯಿಂದ ನಿರಂತರವಾಗಿ ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದೆ.ಬಪ್ಪನಾಡು ದುರ್ಗಾಪರಮೇಶ್ವರಿ ದೇವಳ, ಶ್ರೀ ವೆಂಕಟರಮಣ ದೇವಳದ ಹೊರಾಂಗಣದಲ್ಲಿ ನೀರು ನಿಂತಿತ್ತು. ಬಪ್ಪನಾಡು ದೇವಳದಲ್ಲಿ ರಾತ್ರಿಯ ಬಲಿ ಉತ್ಸವ ಸಂದರ್ಭದಲ್ಲಿ ನೆರೆ ನೀರಿನಲ್ಲೇ ಬಲಿ ಉತ್ಸವ ನಡೆಸಲಾಯಿತು. ಎಲ್ಲ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರ ಅಸ್ಯವ್ಯಸ್ತಗೊಂಡಿತ್ತು.
ಭಾರೀ ಮಳೆಗೆ ಶಿಮಂತೂರು ದೇವಸ್ಥಾನದ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದ್ದು ಶಿಮಂತೂರು- ಮೂಲ್ಕಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು.ಶಿಮಂತೂರು ಬಳಿ ಅಣೆಕಟ್ಟಿಗೆ ಹಲಗೆ ಹಾಕಿದ್ದರಿಂದ ದಿಢೀರ್ ಸುರಿದ ಭಾಲಿ ಮಳೆಗೆ ಕೃತಕ ನೆರೆ ಉಂಟಾಯಿತು. ಮೂಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಪಕ್ಷಿಕೆರೆ, ಕಟೀಲು ಪರಿಸರದಲ್ಲಿ ಗುಡುಗು, ಸಿಡಿಲಿನ ಆರ್ಭಟ ಜೋರಾಗಿದ್ದು ಸಂಜೆ ಕಡಿತಗೊಂಡ ವಿದ್ಯುತ್ ಸಂಪರ್ಕ ಮಂಗಳವಾರ ಮಧ್ಯಾಹ್ನ ಸರಿಯಾಗಿದೆ. ಮೆಸ್ಕಾಂಗೆ ಹೆಚ್ಚಿನ ಹಾನಿ ಸಂಭವಿಸಿದೆ.
ಗದ್ದೆಗಳು ಜಲಾವೃತ: ಸೋಮವಾರ ಸುರಿದ ಭಾರಿ ಮಳೆಗೆ ಕಿನ್ನಿಗೋಳಿ, ಶಿಬರೂರು, ಕಿಲೆಂಜೂರು ಸುತ್ತಮುತ್ತ ಹೊಲ ಗದ್ದೆಗಳಲ್ಲಿ ನೀರು ತುಂಬಿದೆ. ಶಾಂಭವಿ ಮತ್ತು ನಂದಿನಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು ನದಿ ತೀರಗಳ ಗದ್ದೆಗಳಲ್ಲಿ ನೀರು ತುಂಬಿದೆ. ಹಲವು ಕಡೆ ಅಣೆಕಟ್ಟೆಗೆ ಬಾಗಿಲು ಹಾಕಿದ ಪರಿಣಾಮ, ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗಿದೆ.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪುಚ್ಚಾಡಿ ಅಣೆಕಟ್ಟು ಬಾಗಿಲು ಹಾಕಿದ ಪರಿಣಾಮ ಮುಳುಗಡೆಯಾಗಿದ್ದು, ಕೆಲವು ಹಲಗೆ ತೆಗೆದರೂ ನೀರಿನ ಮಟ್ಟ ಏರಿಕೆಯಾದ ಕಾರಣ ಮುಳುಗಿ ಹರಿಯುತ್ತಿದೆ. ತೋಟಕ್ಕೆ ನೀರು ನುಗ್ಗಿದ ಪರಿಣಾಮ ಅಡಕೆ ನೀರುಪಾಲಾಗುತ್ತಿದ್ದು, ಕೃಷಿಕರು ಅಡೆಕೆಯನ್ನು ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಗೋಳಿಜೋರದಲ್ಲಿ ಬಿರುಸಿನ ಮಳೆಗೆ ಶಯನ್ ಶೆಟ್ಟಿಗಾರ್ ಎಂಬವರ ಮನೆಯ ಆವರಣ ಗೋಡೆ ಸಂಪೂರ್ಣ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಗುತ್ತಕಾಡು ರಸ್ತೆ ಸೇಡಿಗುರಿಯಲ್ಲಿ ರೋಹಿತ್ ಕುಲಾಲ್ ಹಾಗೂ ಶಿಮಂತೂರು ಗ್ರಾಮದ ನಿವಾಸಿ ನಝೀರ್ ಎಂಬವರ ಮನೆಗಳ ಆವರಣ ಗೋಡಿ ಕುಸಿದು ನಷ್ಟ ಉಂಟಾಗಿದೆ.