ಹಾಳಾದ ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿಗಳು: ಸಂಚಾರಕ್ಕೆ ತೊಂದರೆ

| Published : Dec 05 2024, 12:31 AM IST

ಸಾರಾಂಶ

ಕುಮಟಾ ಬಡಾಳ ಸಿದ್ದಾಪುರ ರಾಜ್ಯ ಹೆದ್ದಾರಿ, ಅಂಕೋಲಾ ಯಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ, ಅಂಕೋಲಾ ಅಚವೆ ಯಾಣ ಶಿರಸಿ ರಾಜ್ಯ ಹೆದ್ದಾರಿ ಬಹುತೇಕ ಕಡೆ ಗುಂಡಿ ಬಿದ್ದಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ.

ಕಾರವಾರ: ರಸ್ತೆ ಕಾಮಗಾರಿಗಾಗಿ ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ ೭೬೬(ಇ) ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದು, ಜಿಲ್ಲಾಡಳಿತ ಸೂಚಿಸಿದ ಪರ್ಯಾಯ ಮಾರ್ಗಗದಲ್ಲಿ ವಾಹನಗಳ ಸಂಚಾರವೇ ದುಸ್ತರವಾಗಿದೆ. ಕುಮಟಾ ಬಡಾಳ ಸಿದ್ದಾಪುರ ರಾಜ್ಯ ಹೆದ್ದಾರಿ, ಅಂಕೋಲಾ ಯಲ್ಲಾಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ, ಅಂಕೋಲಾ ಅಚವೆ ಯಾಣ ಶಿರಸಿ ರಾಜ್ಯ ಹೆದ್ದಾರಿ ಬಹುತೇಕ ಕಡೆ ಗುಂಡಿ ಬಿದ್ದಿದ್ದು, ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಯಿದೆ. ಪರ್ಯಾಯ ಮಾರ್ಗಗಳನ್ನು ಸರಿಯಾಗಿ ಗುಂಡಿ ತುಂಬದೇ, ದುರಸ್ತಿ ಮಾಡಿಕೊಳ್ಳದೇ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನ ಓಡಿಸುವುದೇ ಚಾಲಕರಿಗೆ ಸವಾಲಿನ ಕೆಲಸವಾಗಿದೆ.ಕುಮಟಾ ಬಡಾಳ ಸಿದ್ದಾಪುರ ರಾಜ್ಯ ಹೆದ್ದಾರಿ ಗುಂಡಿಗಳಿಂದ ತುಂಬಿದೆ. ಈ ರಸ್ತೆ ತೀರಾ ಕಿರಿದಾಗಿದ್ದು, ಅದರ ನಡುವೆ ರಸ್ತೆ ಅಕ್ಕಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ರಸ್ತೆಯನ್ನು ಆವರಿಸಿಕೊಂಡಿವೆ. ಇದರಿಂದ ಎದುರಿನಿಂದ ಬರುವ ವಾಹನಗಳೇ ಕಾಣದಷ್ಟು ಸಮಸ್ಯೆ ಉದ್ಭವಿಸಿದೆ. ಸಿದ್ದಾಪುರ ತಾಲೂಕಿನ ದೊಡ್ಮನೆ ಘಟ್ಟದಲ್ಲಿ ಮಳೆಗಾಲದಲ್ಲಿ ಕುಸಿದು ಬಿದ್ದ ಮಣ್ಣು ಹೆದ್ದಾರಿಯಿಂದ ಇನ್ನೂ ಪೂರ್ತಿಯಾಗಿ ತೆಗೆದಿಲ್ಲ. ಚರಂಡಿಗಳು ಮುಚ್ಚಿ ಮಳೆನೀರು ರಸ್ತೆ ಮೇಲೆಯೇ ಹರಿದ ಕಾರಣ ಹಲವೆಡೆ ಕೊರಕಲು ಬಿದ್ದು ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿಯಿದೆ. ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿರುವ ಅಂಕೋಲಾ ಅಚವೆ ಯಾಣ ಶಿರಸಿ ರಾಜ್ಯ ಹೆದ್ದಾರಿ ಚನಗಾರ ಹಾಗೂ ಯಾಣದ ಬಳಿ ಹದಗೆಟ್ಟಿದೆ. ಈ ರಸ್ತೆಯಲ್ಲೇ ಕಾರವಾರದಿಂದ ಶಿರಸಿ ಮೂಲಕ ಹೊರ ಜಿಲ್ಲೆಗೆ ತೆರಳುವ ಸಾರಿಗೆ ಸಂಸ್ಥೆ ಬಸ್ ಓಡಿಸಲಾಗುತ್ತಿದೆ. ಕಾರವಾರಕ್ಕೆ ಬರುವ ಅಥವಾ ಕಾರವಾರದಿಂದ ಶಿರಸಿಗೆ ತೆರಳುವ ಬಸ್‌ಗಳಿಗೆ ಸಿದ್ದಾಪುರ, ಯಲ್ಲಾಪುರ ಮಾರ್ಗದಲ್ಲಿ ಬಂದರೆ ಸಾಕಷ್ಟು ಸುತ್ತುವರಿದಂತಾಗುತ್ತದೆ. ಹೀಗಾಗಿ ಈ ಮಾರ್ಗವೇ ಸಂಚಾರಕ್ಕೆ ಸಮೀಪವಾಗಿದ್ದು, ಇಂಧನ ಹಾಗೂ ಸಮಯ ಎರಡೂ ಉಳಿತಾಯವಾಗಲಿದೆ.

ಯಾಣ, ವಿಭೂತಿ ಫಾಲ್ಸ್ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳುವ ಖಾಸಗಿ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಹೊಂಡಗಳಲ್ಲಿ ನೀರು ನಿಂತು ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಅಂಕೋಲಾ ಯಲ್ಲಾಪುರ ಹೆದ್ದಾರಿ ಕೂಡಾ ಗುಂಡಿಯಿಂದ ಹೊರತಾಗಿಲ್ಲ. ಭಾರಿ ಮಳೆಯಿಂದಾಗಿ ಅರೆಬೈಲ ಘಟ್ಟದಲ್ಲಿ ಈಗಾಗಲೇ ಭೂಕುಸಿತ ಉಂಟಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾಕಷ್ಟು ವಾಹನಗಳು ಸಂಚಾರ ಮಾಡುತ್ತವೆ. ಶಿರಸಿ ರಸ್ತೆ ಬಂದ್ ಆದಾ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳ ಸಂಖ್ಯೆ ದುಪ್ಪಟ್ಟಾಗಿದೆ. ಹಲವಾರು ತಿಂಗಳ ಮೊದಲಿನಿಂದಲೇ ಕುಮಟಾ ಶಿರಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸುವ ಪ್ರಸ್ತಾಪವಿದ್ದರೂ ಜಿಲ್ಲಾಡಳಿತ ಗುಂಡಿ ಮುಚ್ಚಲು ಕ್ರಮವಹಿಸದೇ ಏಕಾಏಕಿ ಸಂಚಾರ ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ಅವಕಾಶ ನೀಡಿರುವುದು ವಾಹನ ಸವಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.