ಹಂಪಿಯಲ್ಲಿ ಹಾಳಾದ ವಿಜಯವಿಠ್ಠಲ ದೇಗುಲ ರಸ್ತೆ

| Published : May 19 2024, 01:47 AM IST

ಹಂಪಿಯಲ್ಲಿ ಹಾಳಾದ ವಿಜಯವಿಠ್ಠಲ ದೇಗುಲ ರಸ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವವಿಖ್ಯಾತ ಹಂಪಿಯಲ್ಲಿ ಜಿ-20 ಶೃಂಗಸಭೆ ವೇಳೆ ದುರಸ್ತಿ ಮಾಡಲಾಗಿದ್ದ ರಸ್ತೆ ಈಗ ಹಾಳಾಗಿದೆ. ಈ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಮಾತ್ರ ಓಡಾಡುತ್ತವೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಜಿ-20 ಶೃಂಗಸಭೆ ವೇಳೆ ದುರಸ್ತಿ ಮಾಡಲಾಗಿದ್ದ ರಸ್ತೆ ಈಗ ಹಾಳಾಗಿದೆ. ಈ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಮಾತ್ರ ಓಡಾಡುತ್ತವೆ. ಅಂತಹದರಲ್ಲಿ ಒಂದು ಸಣ್ಣ ಮಳೆಗೆ ಈ ರಸ್ತೆ ಹಾಳಾಗಿದ್ದು, ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಲ್ಲಿ ಭಾರತೀಯ ಪುರಾತತ್ವ ಇಲಾಖೆ ಎಡವಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳುವ ರಸ್ತೆ ಇದು. ಬ್ಯಾಟರಿ ವಾಹನಗಳಲ್ಲಿ ಪ್ರವಾಸಿಗರು ಈ ರಸ್ತೆಯಲ್ಲಿ ತಿರುಗಾಡುತ್ತಾರೆ. ಇನ್ನು ಹಲವು ಪ್ರವಾಸಿಗರು ನಡೆದುಕೊಂಡೇ ವಿಜಯವಿಠ್ಠಲ ದೇವಸ್ಥಾನ, ಕಲ್ಲಿನತೇರು, ಪುರಂದರದಾಸರ ಮಂಟಪ, ರಾಜರ ತುಲಾಭಾರ ಸ್ಮಾರಕಗಳ ವೀಕ್ಷಣೆ ಮಾಡುತ್ತಾರೆ. ಆದರೆ, ಈಗ ಈ ರಸ್ತೆಯೇ ಕಳಪೆ ಕಾಮಗಾರಿಯಿಂದ ಹಾಳಾಗಿದೆ.

ಹಂಪಿಗೆ ವಾರ್ಷಿಕ 25 ಲಕ್ಷಕ್ಕೂ ಅಧಿಕ ದೇಶಿ ಪ್ರವಾಸಿಗರು ಹಾಗೂ ಒಂದು ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಹಂಪಿಗೆ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ಕಳಪೆ ಗುಣಮಟ್ಟದ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಿ-20 ಶೃಂಗಸಭೆ ವೇಳೆ ದುರಸ್ತಿ: ಹಂಪಿಯಲ್ಲಿ 2023ರ ಜುಲೈ ತಿಂಗಳಿನಲ್ಲಿ ನಡೆದ ಜಿ-20 ಶೃಂಗಸಭೆ ವೇಳೆ ಭಾರತೀಯ ಪುರಾತತ್ವ ಇಲಾಖೆಯಿಂದ ಈ ರಸ್ತೆ ದುರಸ್ತಿ ಮಾಡಲಾಗಿತ್ತು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ, ಅನುದಾನದ ದುರ್ಬಳಕೆ ಮಾಡಿಕೊಂಡಿದ್ದಾರೆಯೇ? ಎಂಬ ಅನುಮಾನವೂ ದಟ್ಟೈಸಿದೆ.

ಶೃಂಗಸಭೆ ವೇಳೆ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿತ್ತು. ಆಗ ಈ ರಸ್ತೆ ಮೇಲೆ ಬೆಂಚುಕಲ್ಲು ಮತ್ತು ಮುರಂ ಹಾಕಿ ರಸ್ತೆ ಮಾಡಿದರು. ಆದರೆ ಕೇವಲ ಸಣ್ಣ ಮಳೆಗೆ ಈ ರಸ್ತೆ ಹಾಳಾಗಿದೆ. ಈ ರಸ್ತೆಯಲ್ಲಿ ಪ್ರವಾಸಿಗರು ನಡೆದುಕೊಂಡು ತಿರುಗಾಡಿದರೆ ಖಂಡಿತ ಕಾಲಿಗೆ ಕಲ್ಲುಗಳು ಚುಚ್ಚುತ್ತವೆ. ದೇಶ, ವಿದೇಶಿ ಪ್ರವಾಸಿಗರು ಆಗಮಿಸುವ ಹಂಪಿಯಲ್ಲೇ ಈ ರೀತಿ ಕಳಪೆ ರಸ್ತೆ ನಿರ್ಮಾಣ ಮಾಡಿರುವುದು ಸರಿಯಲ್ಲ ಎಂಬ ಆಕ್ರೋಶ ಪ್ರವಾಸಿಗರ ವಲಯದಿಂದ ಕೇಳಿ ಬಂದಿದೆ.

ಹಂಪಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಕೂಡ ಈ ರಸ್ತೆಯಲ್ಲೇ ಓಡಾಡುತ್ತವೆ. ಈ ರಸ್ತೆಯಲ್ಲಿ ಬ್ಯಾಟರಿ ಚಾಲಿತವಾಹನಗಳು ಓಡಾಡಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಸಂಭಾವ್ಯ ಅನಾಹುತ ತಪ್ಪಿಸಲು ರಸ್ತೆ ದುರಸ್ತಿ ಮಾಡಬೇಕು. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಪ್ರವಾಸಿಗರು.

ಹಂಪಿಯಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆಯುತ್ತಿರುವುದು ತುಂಬ ಆತಂಕಕಾರಿ ಬೆಳವಣಿಗೆ. ಕಳಪೆ ಕಾಮಗಾರಿ ಮಾಡಿದ ಭ್ರಷ್ಟರನ್ನು ಶಿಕ್ಷಿಸಬೇಕು. ಮುಂದಿನ ದಿನಗಳಲ್ಲಿ ಈ ಕುರಿತು ಹೋರಾಟ ನಡೆಸಲಾಗುವುದು ಎನ್ನುತ್ತಾರೆ ಹವಾಮ ವ್ಯಾಪ್ತಿಯ ಗ್ರಾಮಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಂಡಿಹಟ್ಟಿ ಮಹೇಶ್.

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯವಿಠಲ ದೇವಸ್ಥಾನಕ್ಕೆ ತೆರಳುವ ರಸ್ತೆ ಹಾಳಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ರಸ್ತೆ ದುರಸ್ತಿಪಡಿಸಲಾಗುವುದು. ರಾಣಿಸ್ನಾನಗೃಹದ ರಸ್ತೆಯೂ ದುರಸ್ತಿ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಕ್ರಮ ವಹಿಸಲಾಗಿದೆ. ಹಂಪಿಯಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುವುದು ಎನ್ನುತ್ತಾರೆ ಭಾರತೀಯ ಪುರಾತತ್ವ ಇಲಾಖೆ ಹಂಪಿ ವಲಯದ ಅಧೀಕ್ಷಕ ನಿಹಿಲ್‌ ದಾಸ್‌.