ಸಿದ್ದಿ ಮಹಿಳೆಯರ ಜೀವನೋಪಾಯಕ್ಕೆ ದಮಾಮಿ ಕಮ್ಯೂನಿಟಿ ಸ್ಟೇ

| Published : Feb 09 2024, 01:48 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಸಿದ್ದಿ ಸಮುದಾಯದ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ಮಹಾತ್ವಾಕಾಂಕ್ಷೆಯ ಉದ್ದೇಶದಿಂದ ದಮಾಮಿ ಸಮುದಾಯ ವಾಸ್ತವ್ಯ ವ್ಯವಸ್ಥೆಯನ್ನು ಸರ್ಕಾರದ ಅನುದಾನದ ನೆರವಿನಿಂದ ರೂಪಿಸಲಾಗಿದೆ.

ಯಲ್ಲಾಪುರ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಸಿದ್ದಿ ಸಮುದಾಯದ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ಮಹಾತ್ವಾಕಾಂಕ್ಷೆಯ ಉದ್ದೇಶದಿಂದ ದಮಾಮಿ ಸಮುದಾಯ ವಾಸ್ತವ್ಯ ವ್ಯವಸ್ಥೆಯನ್ನು ಸರ್ಕಾರದ ಅನುದಾನದ ನೆರವಿನಿಂದ ರೂಪಿಸಲಾಗಿದೆ ಎಂದು ಜಿಪಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ ಕಲ್ಮನೆ ಹೇಳಿದರು.ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಲಿಂಗದಬೈಲಿನಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ ಸೀತಾರಾಮ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ ₹ ೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ದಮಾಮಿ ಕಮ್ಯೂನಿಟಿ ಸ್ಟೇ (ದಮಾಮಿ ಸಮುದಾಯ ವಾಸ್ತವ್ಯ)ನಲ್ಲಿ ಯೋಜನೆಯ ಕುರಿತಾಗಿ ಮಾಹಿತಿ ನೀಡಿದರು.

ಪರಿಸರ ಪ್ರವಾಸೋದ್ಯಮದ ಅಂಗವಾದ ಇಲ್ಲಿನ ಯೋಜಿತ ಕಾರ್ಯಕ್ರಮ, ಸಮುದಾಯದ ಸಂಸ್ಕೃತಿ, ಕಲೆ, ಜೀವನ ಪದ್ದತಿ ಒಳಗೊಂಡಿದ್ದು, ಇದರ ಪ್ರಯೋಜನ ಒಕ್ಕೂಟದ ೧೫ ಮಹಿಳಾ ಸದಸ್ಯರಿಗೆ ಸೀಮಿತವಾಗಿರದೇ, ಸಮುದಾಯದ ಸಹಭಾಗಿತ್ವದಲ್ಲಿ ಆಸಕ್ತ ಪಾಲುದಾರರಿಗೆ ಕೂಡ ಸಿಗುವಂತಿದೆ ಎಂದರು.

ಸದಸ್ಯರಿಗೆ ಆನ್‌ಲೈನ್ ಮಾರ್ಕೆಟಿಂಗ್ ಕುರಿತಾದ ಮಾರ್ಗದರ್ಶನ ನೀಡುವ ಜತೆಗೆ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನೂ ನೀಡಲಾಗುವುದು. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಊಟ, ವಸತಿ, ಮತ್ತಿತರ ಎಲ್ಲ ಬಗೆಯ ಸವಲತ್ತು ಕಲ್ಪಿಸಲಾಗುತ್ತದೆ. ಪರಿಸರ ಕಾಳಜಿ ಗಮನದಲ್ಲಿಟ್ಟುಕೊಂಡು ಪರಿಸರಕ್ಕೆ ಧಕ್ಕೆ ಬಾರದಂತೆ ಇಲ್ಲಿನ ಪ್ರಕ್ರಿಯೆ ನಡೆಯಲಿದೆ ಎಂದು ವಿವರಿಸಿದರು. ಈ ವ್ಯವಸ್ಥೆಗಳಿಗಾಗಿ ಯೋಗ್ಯ ಸ್ವರೂಪದ ನಿಗದಿತ ದರ ಸ್ವೀಕರಿಸಲಾಗುತ್ತಿದ್ದು, ಪ್ರವಾಸಿಗರನ್ನು ಸಾಂಪ್ರದಾಯಿಕ ಕಲೆ ಮತ್ತು ನೃತ್ಯಗಳ ಮೂಲಕ ಸ್ವಾಗತಿಸಲಾಗುವುದು. ಅಲ್ಲದೇ ಇಚ್ಛಿಸಿದರೆ ತಾಲೂಕಿನ ಇನ್ನಿತರ ಪ್ರವಾಸಿ ತಾಣಗಳ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುತ್ತಿದ್ದು, ಇಲ್ಲಿಗೆ ಬರಬಹುದಾದ ಅಧ್ಯಯನಕಾರರಿಗೆ ಪ್ರತ್ಯೇಕ ವ್ಯವಸ್ತೆ, ದರ ನಿಗದಿಪಡಿಸಲಾಗಿದೆ ಎಂದರು.

ಸೀತಾರಾಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಜೋಶಿ ಮಾತನಾಡಿ, ಹಿಂದುಳಿದ ಜನಾಂಗದವರನ್ನು, ಸಿದ್ದಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲೇಬೇಕೆಂಬ ಮಹಾತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯೋಜನೆಯನ್ನು ಆರಂಭಿಸಲಾಗಿದ್ದು, ಅವರ ಕಲೆ, ಸಂಸ್ಕೃತಿ, ಸಂರಕ್ಷಣೆಗೆ ಪೂರಕ ನೆರವು ನೀಡಲಾಗುತ್ತದೆ ಎಂದರು.

ಸಮುದಾಯ ಪ್ರವಾಸೊದ್ಯಮದ ಮಾರ್ಗದರ್ಶಕ ಮಂಜುನಾಥ ಸಿದ್ದಿ ಮಾತನಾಡಿ, ತಾಲೂಕಿನ ವಿವಿಧ ಪ್ರವಾಸಿ ತಾಣಗಳ ಮತ್ತು ಜೀವ ವೈವಿಧ್ಯದ ಕುರಿತಾಗಿ ಮಾಹಿತಿ ನೀಡಿದರು.

ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಂಜಣ್ಣ ಬಿ., ವಲಯ ಮೇಲ್ವಿಚಾರಕ ರಾಜಾರಾಮ ವೈದ್ಯ, ತಾಪಂ ಅಧಿಕಾರಿಗಳಾದ ಧನಂಜಯ ನಾಯ್ಕ, ರವಿಶಂಕರ ಕೆ.ಎಂ., ಯೋಗೇಶ ಮಡಿವಾಳ, ವೀರಣ್ಣ ಕೆ. ಇಡಗುಂದಿ ಪಿಡಿಒ ಚನ್ನವೀರಪ್ಪ ಕುಂಬಾರ, ಜಿಲ್ಲಾ ವ್ಯವಸ್ಥಾಪಕ ಸಚಿನ್ ಹೆಗಡೆ ಹಾಗೂ ನಿಸರ್ಗ ಸ್ಪರ್ಶ ಸ್ವ ಸಹಾಯ ಸಂಘದ ಸದಸ್ಯೆಯರು ಇದ್ದರು. ಇದೇ ಸಂದರ್ಭದಲ್ಲಿ ಚಾರಣ ಮತ್ತು ಸಾಂಪ್ರದಾಯಿಕ ನೃತ್ಯದ ಪರಿಚಯ ಮಾಡಿಕೊಡಲಾಯಿತು.