ನೃತ್ಯ ಕಲೆಯು ಮನಃಶಾಂತಿಯನ್ನು ನೀಡಬಲ್ಲದು: ಡಾ. ಕೆ.ಎಸ್. ಪವಿತ್ರಾ

| Published : Mar 15 2024, 01:22 AM IST

ಸಾರಾಂಶ

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ಆಶ್ರಯದಲ್ಲಿ ‘ನೃತ್ಯ ಮತ್ತು ಶಾಂತಿ ಕಲಾವಿದೆ ಮತ್ತು ಮನೋವೈದ್ಯೆಯ ಒಳನೋಟ’ ಎಂಬ ವಿಷಯದ ಕುರಿತು ಉಪನ್ಯಾಸ - ನೃತ್ಯ ಪ್ರದರ್ಶನ ನಡೆಯಿತು. ಖ್ಯಾತ ಮನೋವೈದ್ಯೆ, ನೃತ್ಯ ಕಲಾವಿದೆ, ಲೇಖಕಿ ಡಾ. ಕೆ.ಎಸ್. ಪವಿತ್ರಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲನೃತ್ಯ ಕಲೆಯು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಮನಃಶಾಂತಿಗೆ ಕಾರಣವಾಗಲು ಸಾಧ್ಯ ಎಂದು ಖ್ಯಾತ ಮನೋವೈದ್ಯೆ, ನೃತ್ಯ ಕಲಾವಿದೆ, ಲೇಖಕಿ ಡಾ. ಕೆ.ಎಸ್. ಪವಿತ್ರಾ ಅಭಿಪ್ರಾಯಪಟ್ಟಿದ್ದಾರೆ.ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ಆಶ್ರಯದಲ್ಲಿ ನಡೆದ ‘ನೃತ್ಯ ಮತ್ತು ಶಾಂತಿ ಕಲಾವಿದೆ ಮತ್ತು ಮನೋವೈದ್ಯೆಯ ಒಳನೋಟ’ ಎಂಬ ವಿಷಯದ ಕುರಿತು ಉಪನ್ಯಾಸ - ನೃತ್ಯ ಪ್ರದರ್ಶನವನ್ನು ಪ್ರಸ್ತುತಪಡಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ನೃತ್ಯವು ಶಾಂತಿಯ ಮಾಧ್ಯಮವಾಗಬಹುದು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಹುದು, ಸ್ವಾತಂತ್ರ್ಯದ ಅನುಭೂತಿಯನ್ನು ಉಂಟು ಮಾಡಬಹುದು. ಆದಾಗ್ಯೂ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕೇವಲ ನೃತ್ಯ ಪ್ರಕಾರದ ಸರಳವಾದ ಮತ್ತು ಯಾಂತ್ರಿಕ ಅನ್ವಯಿಕೆಯನ್ನು ಮಾಡಬಾರದು ಎಂದು ಅವರು ಹೇಳಿದರು.

ತಾತ್ವಿಕ ಸಾಹಿತ್ಯದ ಚೌಕಟ್ಟನ್ನು ತೆಗೆದುಕೊಂಡು, ಅನ್ನಮಯ, ಆನಂದಮಯ, ಪ್ರಾಣಮಯ, ಮನೋಮಯ ಮತ್ತು ವಿಜ್ಞಾನಮಯ ಕೋಶಗಳ ನಡುವೆ ನೃತ್ಯ ಹೇಗೆ ಆನಂದಕ್ಕೆ ಕಾರಣವಾಗಬಲ್ಲವು ಎಂಬುದನ್ನು ಅವರು ವಿವರಿಸಿದರು.ನಂತರ ದ.ರಾ.ಬೇಂದ್ರೆ, ವೈದೇಹಿ, ಕನಕದಾಸ, ಆದಿಕವಿ ಪಂಪ ಅವರ ಆಯ್ದ ಕವನ - ಕಾವ್ಯಗಳಿಗೆ ನೃತ್ಯ ಮಾಡುವ ಮೂಲಕ ಆ ಕವಿತೆಗಳಲ್ಲಿ ವ್ಯಕ್ತವಾಗುವ ಭಾವವನ್ನು ನೃತ್ಯವು ಹೇಗೆ ಹೊರತರುತ್ತದೆ ಎಂಬುದನ್ನು ಪ್ರದರ್ಶಿಸಿದರು. ಬೇಂದ್ರೆಯವರ ‘ಗಂಗಾವತರಣ’, ವೈದೇಹಿಯವರ ‘ಶಿವನ ಮೀಯಿಸುವ ಹಾಡು’ ಮತ್ತಿತರ ಕಾವ್ಯ-ನರ್ತನ ಗಮನ ಸೆಳೆದವು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಅವರು ಎಕೋಸೊಫಿ, ಎಸ್ತೆಟಿಕ್ಸ್, ಪೀಸ್(ಶಾಂತಿ), ಆರ್ಟ್ ಮೀಡಿಯಾ(ಕಲಾಮಾಧ್ಯಮ) ಗಾಂಧಿಯನ್ ಸೆಂಟರ್‌ನ ಮುಖ್ಯ ಅಧ್ಯಯನ ವಿಷಯಗಳಾಗಿವೆ ಎಂದರು.

ನೃತ್ಯ ಕಲಾವಿದೆ ಡಾ.ಭ್ರಮರಿ ಶಿವಪ್ರಕಾಶ್ ಹಾಗೂ ಅಪೂರ್ವ ಕಾರ್ಯಕ್ರಮ ಸಂಯೋಜಿಸಿದರು.