ಜಿ.ಎಸ್.ಶಿವರುದ್ರಪ್ಪ ಅವರದು ಜೀವನವನ್ನು ಒಳಗೊಂಡ ಸಾಹಿತ್ಯ: ಡಾ.ಜಿ.ಎಸ್. ಜಯದೇವ

| Published : Mar 15 2024, 01:22 AM IST

ಜಿ.ಎಸ್.ಶಿವರುದ್ರಪ್ಪ ಅವರದು ಜೀವನವನ್ನು ಒಳಗೊಂಡ ಸಾಹಿತ್ಯ: ಡಾ.ಜಿ.ಎಸ್. ಜಯದೇವ
Share this Article
  • FB
  • TW
  • Linkdin
  • Email

ಸಾರಾಂಶ

ಜಿಎಸ್ಎಸ್ ಅವರ ಕವಿತೆಗಳಲ್ಲಿ ಪ್ರೀತಿ, ಬೆಳಕು ಹಾಗೂ ಪ್ರೀತಿಯೆಂಬುದು ಜೀವನದ ಪ್ರಮುಖ ಘಟ್ಟವಾಗಿ ಹೇಗೆ ಮುಖ್ಯ ಎಂಬುದನ್ನು ತಿಳಿಯಬಹುದು. ಜಗತ್ತು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕಾದರೆ ಪ್ರತಿಯೊಬ್ಬರಲ್ಲಿಯೂ ಅರಿವಿನ ಜ್ಞಾನಾರ್ಜನೆ ಮುಖ್ಯವಾಗಿರುತ್ತದೆ. ಜಿಎಸ್ಎಸ್ ಅವರಿಗೆ ಕಲೆ ಮತ್ತು ಸಾಹಿತ್ಯದ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇತ್ತು.

ಕನ್ನಡಪ್ರಭ ವಾರ್ತೆ ಮೈಸೂರುರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರದು ಜೀವನಕ್ಕೆ ಹೊರತಾದ ಸಾಹಿತ್ಯವಲ್ಲ, ಜೀವನವನ್ನು ಒಳಗೊಂಡ ಸಾಹಿತ್ಯ. ಅವರ ಸಾಹಿತ್ಯ ಮತ್ತು ಜೀವನ ಒಂದೆಯಾಗಿತ್ತು ಎಂದು ದೀನ ಬಂಧು ಮಕ್ಕಳ ಮನೆಯ ಸಂಸ್ಥಾಪಕರಾದ ಜಿಎಸ್‌ಎಸ್ ಪುತ್ರ ಡಾ.ಜಿ.ಎಸ್. ಜಯದೇವ ತಿಳಿಸಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಗುರುವಾರ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಎಸ್‌ಎಸ್ ಅವರು ಬದುಕಿನ ಕೊನೆಯ ದಿನಗಳವರೆಗೂ ಓದಿನಲ್ಲಿ ತಲ್ಲೀನರಾಗಿದ್ದರು. ಪುಸ್ತಕಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಬೆಳಗ್ಗೆ ಸಂದರ್ಭದಲ್ಲಿ ಕೋಣೆಯ ಬಾಗಿಲನ್ನು ಹಾಕಿ ಬರವಣಿಗೆಯಲ್ಲಿ ಮಗ್ನರಾಗುತ್ತಿದ್ದರು ಎಂದರು.

ಜಿಎಸ್ಎಸ್ ಅವರ ಕವಿತೆಗಳಲ್ಲಿ ಪ್ರೀತಿ, ಬೆಳಕು ಹಾಗೂ ಪ್ರೀತಿಯೆಂಬುದು ಜೀವನದ ಪ್ರಮುಖ ಘಟ್ಟವಾಗಿ ಹೇಗೆ ಮುಖ್ಯ ಎಂಬುದನ್ನು ತಿಳಿಯಬಹುದು. ಜಗತ್ತು ಕತ್ತಲಿನಿಂದ ಬೆಳಕಿನೆಡೆಗೆ ಸಾಗಬೇಕಾದರೆ ಪ್ರತಿಯೊಬ್ಬರಲ್ಲಿಯೂ ಅರಿವಿನ ಜ್ಞಾನಾರ್ಜನೆ ಮುಖ್ಯವಾಗಿರುತ್ತದೆ. ಜಿಎಸ್ಎಸ್ ಅವರಿಗೆ ಕಲೆ ಮತ್ತು ಸಾಹಿತ್ಯದ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇತ್ತು ಎಂದರು.

ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಪ್ರಭಾವಕ್ಕೆ ಜಿಎಸ್‌ಎಸ್ ಒಳಗಾಗಿದ್ದರು. ಪ್ರಭಾವಕ್ಕೆ ಒಳಗಾದಷ್ಟು ಅವರದೇ ಬರವಣಿಗೆ ಶೈಲಿಯಲ್ಲಿ ಬರೆಯುತೀರಾ. ಹೀಗಾಗಿ ಕುವೆಂಪು ಪ್ರಭಾವದಿಂದ ಹೊರ ಬನ್ನಿ ಎಂದು ಸ್ನೇಹಿತರಾದ ಕವಿ ಚೆನ್ನಾವೀರ ಕಣವಿ ಅವರು ಜಿಎಸ್‌ಎಸ್‌ಗೆ ಸಲಹೆ ನೀಡಿದ್ದರು. ಆದರೆ, ಕುವೆಂಪು ಪ್ರಭಾವದಿಂದ ಹೊರ ಬರಲು ಬಹಳ ಕಷ್ಟ ಪಟ್ಟರು ಎಂದು ಅವರು ವಿದ್ಯಾರ್ಥಿನಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಎಸ್ಎಸ್ ವಿದ್ಯಾರ್ಥಿಗಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ಹೆಸರು, ಕೀರ್ತಿ, ಪ್ರಶಸ್ತಿಗಳಿಗೆ ಅವರೆಂದು ಬೆಲೆ ಕೊಡಲಿಲ್ಲ. ಮೌಲ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ಹೀಗಾಗಿ, ಸ್ವಜನ- ಸ್ವಜಾತಿಯ ವ್ಯಾಮೋಹ ಇರಲಿಲ್ಲ. ಧರ್ಮ ಮುಕ್ತವಾಗಿ ನನ್ನ ಸಂಸ್ಕಾರ ಮಾಡಬೇಕು ಎಂದ ನನಗೆ ಹೇಳಿದ್ದರು. ಅದರಂತೆ ಸಾಹಿತಿಕ ವಿದಾಯವೆಂದು ಪಂಪ, ರನ್ನ, ಕುವೆಂಪು ಸೇರಿದಂತೆ ಇತರೆ ಕವಿಗಳ ಉದಾತ ಸಾಲುಗಳನ್ನು ಗಮಕ ಮಾಡಿಸಿ ಬೀಳ್ಕೊಡುಗೆ ನೀಡಲಾಯಿತು. ಅಂತ್ಯ ಸಂಸ್ಕಾರವನ್ನು ಬಹಳ ದೊಡ್ಡದಾಗಿ ನಡೆಯಿತು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಡಾ.ಜಿ. ಪ್ರಸಾದಮೂರ್ತಿ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಎಂ.ಎಸ್. ಸಂಧ್ಯಾರಾಣಿ ಇದ್ದರು. ನಿಹಾರಿಕಾ ಮತ್ತು ಅಕ್ಷಿತಾ ಪ್ರಾರ್ಥಿಸಿದರು. ರಾಧಿಕಾ ಸ್ವಾಗತಿಸಿದರು. ಮೇಘ ನಿರೂಪಿಸಿದರು. ಪವಿತ್ರ ದಾಸ್ ವಂದಿಸಿದರು. ಇಂದಿನ ಯುವ ಜನಾಂಗವನ್ನು ದೂರ ಸಂಪರ್ಕ ಮಾಧ್ಯಮಗಳು ದಿಕ್ಕು ತಪ್ಪಿಸುತ್ತಿದ್ದು, ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಲು ಕಾರಣವಾಗುತ್ತಿದೆ. ಮನುಷ್ಯ ಜೀವನ ಚೆನ್ನಾಗಿರಬೇಕಾದರೆ ಪ್ರತಿಯೊಂದು ನಡಿಗೆಯಲ್ಲೂ ವೈಚಾರಿಕ ಸ್ಪಷ್ಟತೆ ಇರಬೇಕು. ಆಧುನಿಕ ಜಗತ್ತಿನಲ್ಲಿ ಹಣದ ಕೊರತೆ ಇಲ್ಲ. ಬದಲಿಗೆ ಅಂತಃಕರಣದ ಕೊರತೆ ಇದೆ.

- ಡಾ.ಜಿ.ಎಸ್. ಜಯದೇವ್, ಸಂಸ್ಥಾಪಕರು, ದೀನಬಂಧು ಮಕ್ಕಳ ಮನೆ