ಸಾರಾಂಶ
ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ, ಉದ್ಘಾಟನೆ
ಕನ್ನಡಪ್ರಭ ವಾರ್ತೆ ಬೇಲೂರುಕ್ಷೇತ್ರದ ಅಭಿವೃದ್ಧಿ ಕೆಲಸವನ್ನು ಪಕ್ಷಭೇದ ಮರೆತು ಕ್ಷೇತ್ರದ ಸಾರ್ವಜನಿಕರು ಮತ್ತು ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಮಾಡುತ್ತೇನೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಹಗರೆ ಗ್ರಾಮ ಪಂಚಾಯಿತಿ ಕಚೇರಿ ಆವರಣ ವೀರಶೈವ ಕಲ್ಯಾಣ ಮಂಟಪ, ಜಲ ಜೀವನ್ ಮಿಷನ್ ಯೋಜನೆ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ರಾಜಕಾರಣವನ್ನು ಚುನಾವಣೆ ಸಂದರ್ಭ ಮಾತ್ರ ಮಾಡಬೇಕು. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಒಂದಾಗಿ ಕೆಲಸ ಮಾಡಿದರೆ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂಬುದು ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುತಿದ್ದೇನೆ. ಹಗರೆ ಸೇರಿದಂತೆ ಈ ಭಾಗದ ಮದ್ಯಮ ವರ್ಗದವರ ಅನುಕೂಲಕ್ಕಾಗಿ ಇಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳು ಶುದ್ಧ ಕುಡಿಯುವ ನೀರು ಕುಡಿಯಬೇಕೆಂಬ ಉದ್ದೇಶದಿಂದ ವಾಟರ್ ಫಿಲ್ಟರ್‌ಗಳನ್ನು ವಿತರಿಸಲಾಗಿದೆ. ತಾಲೂಕಿನ ಜನರಿಗೆ ಶುದ್ಧ ಕುಡಿಯುವ ನೀರು ಕೊಡುವುದಕ್ಕಾಗಿ ಸ್ಥಳೀಯವಾಗಿ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ವಿವಿಧ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕೆಂಬ ನಿಟ್ಟಿನಲ್ಲಿ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರ ವಿಶ್ವಾಸ ಪಡೆದು ಅನುದಾನ ತಂದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಸಲು ಮುಂದಾಗಿದ್ದೇನೆ. ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಗೂ ಅವಕಾಶ ಕೊಡದೇ ಎಚ್ಚರ ವಹಿಸಿ ಕೆಲಸ ಮಾಡಲಾಗುವುದು. ಇಲಾಖೆಗಳಿಗೆ ಬರುವಂತಹ ಅನುದಾನ ಮತ್ತು ಸವಲತ್ತುಗಳ ಸಂಪೂರ್ಣ ವಿವರವನ್ನು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ತಮಗೆ ಬೇಕಾದ ರೀತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿತರಿಸುವ ಕೆಲಸ ಮಾಡಬಾರದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತರುವುದಕ್ಕೆ ಶ್ರಮ ವಹಿಸಿ ಕ್ಷೇತ್ರದ ಹಾಗೂ ಈ ಭಾಗದ ಅಭಿವೃದ್ಧಿಗೆ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡಲಾಗುವುದು ಎಂದರು.ಹಗರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಶಾಂತ್ ಕುಮಾರ್ ಮಾತನಾಡಿ, ಶಾಸಕ ಎಚ್.ಕೆ.ಸುರೆಶ್ ಶಾಸಕರಾದ ಅಲ್ಪ ಅವಧಿಯಲ್ಲೆ ಉತ್ತಮ ಕೆಲಸಗಳನ್ನು ಮಡುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಅಲ್ಲದೆ ಮಾದಿಹಳ್ಳಿ ಹೋಬಳಿ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಶಾಸಕರು ಹೆಚ್ಚಿನ ಶ್ರಮ ವಹಿಸಿ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವುದಕ್ಕೆ ಕ್ರಮ ವಹಿಸಿರುವುದು ಶ್ಲಾಘನೀಯವಾಗಿದೆ. ಮಾದಿಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದ್ದಾರೆ ಎಂದರು.
ಹಗರೆ ಗ್ರಾಪಂ ಅಧ್ಯಕ್ಷೆ ಜಯಮ್ಮ, ಇಬ್ಬೀಡು ಗ್ರಾಪಂ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಆಂದಲೆ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಯಲಹಂಕ ಗ್ರಾಪಂ ಅಧ್ಯಕ್ಷೆ ಆಶಾ, ಸದಸ್ಯರಾದ ಶೇಖರೇಗೌಡ, ಮಂಜುನಾಥ, ರಾಜಯ್ಯ, ಪುಟ್ಟಣ್ಣ, ತಾಪಂ ಇಒ ಸತೀಶ್, ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವರಾಜು, ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಮುಖಂಡ ಛಲವಾದಿ ಪಟ್ಟರಾಜು ಇದ್ದರು. ಬೇಲೂರಿನ ಹಗರೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು.