ಮಂಡ್ಯದಲ್ಲಿ ಮನೋಜ್ಞವಾಗಿ ಮೂಡಿಬಂದ ನೃತ್ಯೋತ್ಸವ..!

| Published : Oct 23 2024, 12:47 AM IST

ಮಂಡ್ಯದಲ್ಲಿ ಮನೋಜ್ಞವಾಗಿ ಮೂಡಿಬಂದ ನೃತ್ಯೋತ್ಸವ..!
Share this Article
  • FB
  • TW
  • Linkdin
  • Email

ಸಾರಾಂಶ

ನಾಟ್ಯಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಚುರುಕುಗೊಳ್ಳುತ್ತದೆ. ಜೊತೆಗೆ ಬುದ್ಧಿಶಕ್ತಿ ಹೆಚ್ಚುತ್ತದೆ. ಹೆಣ್ಣುಮಕ್ಕಳು ಭರತನಾಟ್ಯವನ್ನು ಕಲಿಯುವುದರೊಂದಿಗೆ ಅರ್ಧಕ್ಕೆ ನಿಲ್ಲಿಸದೆ ನಾಟ್ಯಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಈ ಕ್ಷೇತ್ರದಲ್ಲಿ ಪ್ರತಿಭಾವಂತರಿಗೆ ಉತ್ತಮ ಭವಿಷ್ಯವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಪಿಇಎಸ್‌ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗ ಮಂದಿರದಲ್ಲಿ ಚಿದಂಬರ ನಟೇಶ ನಾಟ್ಯ ಶಾಲೆ ಟ್ರಸ್ಟ್‌ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಚಿದಂಬರ ನೃತ್ಯೋತ್ಸವ ಮನೋಜ್ಞವಾಗಿ ಮೂಡಿಬಂದು ಎಲ್ಲರ ಮೆಚ್ಚುಗೆ ಗಳಿಸಿತು. ಶಾಸ್ತ್ರೀಯ ಭರತನಾಟ್ಯ ಮತ್ತು ಹಿರಿಯ ಕಲಾವಿದರಿಗೆ ಗೌರವ ಸನ್ಮಾನ ನಡೆಯಿತು.

ಮನೋವೈದ್ಯ ಡಾ.ಟಿ.ಎಸ್‌.ಸತ್ಯನಾರಾಯಣರಾವ್‌ ಅವರು, ನಾಟ್ಯಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಚುರುಕುಗೊಳ್ಳುತ್ತದೆ. ಜೊತೆಗೆ ಬುದ್ಧಿಶಕ್ತಿ ಹೆಚ್ಚುತ್ತದೆ. ಹೆಣ್ಣುಮಕ್ಕಳು ಭರತನಾಟ್ಯವನ್ನು ಕಲಿಯುವುದರೊಂದಿಗೆ ಅರ್ಧಕ್ಕೆ ನಿಲ್ಲಿಸದೆ ನಾಟ್ಯಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಈ ಕ್ಷೇತ್ರದಲ್ಲಿ ಪ್ರತಿಭಾವಂತರಿಗೆ ಉತ್ತಮ ಭವಿಷ್ಯವಿದೆ ಎಂದರಲ್ಲದೇ, ವಿದ್ಯಾರ್ಥಿಗಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್‌ ಮಾತನಾಡಿ, ನಾಟ್ಯದಲ್ಲಿ ಪ್ರಾವಿಣ್ಯತೆ ಗಳಿಸಿದರೆ ದೇಶ-ವಿದೇಶಗಳಲ್ಲಿಯೂ ಭರತ ನಾಟ್ಯ ಪ್ರದರ್ಶನ ನೀಡಬಹುದು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಭರತ ನಾಟ್ಯ ಕಲಿಕೆಯು ಓದಿನ ಜೊತೆಯಲ್ಲಿಯೇ ಇದ್ದರೆ ಉತ್ತಮ. ವಿದ್ಯಾರ್ಥಿ ದಿಸೆಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.

ಬಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್‌ ಮಾತ‌ನಾಡಿ, ಇಡೀ ವಿಶ್ವವನ್ನೇ ಭರತನಾಟ್ಯ ಕಲೆ ಆವರಿಸಿಕೊಂಡಿದೆ. ಭರತನಾಟ್ಯಕ್ಕೆ ಅದರದ್ದೇ ಆದ ಸ್ಥಾನಮಾನವಿದೆ. ಶಿವನ ಅವತಾರದಲ್ಲಿಯೂ ಭರತ ನಾಟ್ಯ ಪ್ರದರ್ಶನಗೊಂಡಿರುವುದು ಎಲ್ಲರ ಮನಸ್ಸು ಗೆದ್ದಿದೆ. ಭರತ ನಾಟ್ಯ ಎಂಬುದು ಭಕ್ತಿಯ ಸ್ವರೂಪ. ಅದನ್ನು ಸಾಧನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳಿಗೆ ಭರತ ನಾಟ್ಯ ಕಲಿಯುವ ಅಭ್ಯಾಸ ಮಾಡಿಸಬೇಕು ಎಂದರು.

ಕೊಳಲು ವಾದಕ ಎನ್‌.ಎಸ್‌.ಮಣಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ವಲಯ ಪಾಲಕ ಸಿ.ಪ್ರಶಾಂತ್‌, ಟ್ರಸ್ಟ್‌ನ ಸುನೀತಾ ನಂದಕುಮಾರ್‌, ವಕೀಲರಾದ ಜಿ.ಪ್ರಶೀತಾ ಪ್ರಭಾಕರ್‌, ಕಲಾ ಪೋಷಕ ಬಿ.ಆರ್‌.ಅಲಕಾನಂದ ಭಾಗವಹಿಸಿದ್ದರು.