ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ದಂಡಾವತಿ ನೀರಾವರಿ ಯೋಜನೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸು. ಹಾಗಾಗಿ ನನೆಗುದಿಗೆ ಬಿದ್ದಿರುವ ಯೋಜನೆಯನ್ನು ಪುನಃ ಪ್ರಾರಂಭಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಬುಧವಾರ ಪಟ್ಟಣದ ಶ್ರೀ ರೇಣುಕಾಂಬಾ ಸಭಾ ಭವನದಲ್ಲಿ ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಬಿ.ವೈ. ರಾಘವೇಂದ್ರ ಹಾಗೂ ಡಾ.ಧನಂಜಯ ಸರ್ಜಿ ಅವರಿಗೆ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
೨೦೧೦ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಂಡಾವತಿ ಯೋಜನೆಗಾಗಿ ೮೨ ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಕೆಲವರ ವಿರೋಧದಿಂದ ಯೋಜನೆ ನನೆಗುದಿಗೆ ಬಿದ್ದಿದೆ. ರೈತ ಸಮೂಹಕ್ಕೆ ನೆರವಾಗುವ ಯೋಜನೆಯನ್ನು ಮತ್ತೆ ಪ್ರಾರಂಭಿಸುವ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದ ಅವರು, ಸೊರಬ ಕ್ಷೇತ್ರದಿಂದ ಬಿಜೆಪಿಗೆ ಅಧಿಕ ಮತಗಳ ನೀಡುವುದರ ಮೂಲಕ ತಮಗೆ ಜವಾಬ್ದಾರಿಯನ್ನು ಹೆಚ್ಚಿಸಿ ಜನರ ಸೇವೆ ಮಾಡಲು ಅವಕಾಶವಾಗಿದ್ದು, ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.ಮಾಜಿ ಶಾಸಕ ಕುಮಾರ ಬಂಗಾರಪ್ಪ ಮಾತನಾಡಿ, ಕಾಂಗ್ರೆಸ್ ನಾಯಕರ ಅಧಿಕಾರದ ದರ್ಪ ಹಾಗೂ ಹಣಬಲ ಲೋಕಸಭಾ ಚುನಾವಣೆಯಲ್ಲಿ ನಡೆಯಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಜವಾದ ಅಭಿವೃದ್ಧಿ ಎಂದು ಭಾವಿಸಿರುವ ರಾಜ್ಯ ಸರ್ಕಾರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯುತ್ತೇವೆ ಎನ್ನುವ ಹಗಲುಗನಸು ಕಂಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದರೆ, ಕಾಂಗ್ರೆಸ್ ಸರ್ಕಾರ ದ್ವೇಷಕ್ಕೆ ಶಿಕ್ಷಣ ನೀತಿ ಬದಲಾವಣೆ ಮಾಡಿದೆ. ಇದರಿಂದ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಸೋಲನ್ನು ಅರಗಿಸಿ ಕೊಳ್ಳಲಾಗದ ಕಾಂಗ್ರೆಸ್ ನಾಯಕರು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ ಎಂದು ಲೇವಡಿ ಮಾಡಿದರು.
ತಾಲ್ಲೂಕಿನ ಉದ್ದೇಶಿತ ದಂಡಾವತಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಅನುದಾನ ತರಲು ಸಂಸದರಲ್ಲಿ ಮನವಿ ಮಾಡಲಾಗಿದೆ. ಯೋಜನೆ ಕಾರ್ಯಗತಗೊಂಡರೆ ೨೭ ಸಾವಿರ ಹೆಕ್ಟೇರ್ ರೈತರ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ತಾಳಗುಪ್ಪ ರೈಲ್ವೆ ಮಾರ್ಗದಿಂದ ಸೊರಬ, ತಡಸ ಮೂಲಕ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸಲು ಸಂಸದರಿಗೆ ಮನವಿ ಮಾಡಿದರು.ಗ್ಯಾರಂಟಿ ಯೋಜನೆಯ ಫಲಾನುಭವವನ್ನು ಹೊಂದಿದ ಮತದಾರರೂ ತಮಗೆ ಮತ ನೀಡದೆ ವಿಕೃತ ಮನಸ್ಥಿಯನ್ನು ತೋರಿಸಿದ್ದಾರೆ ಎಂದು ಕಾಂಗ್ರೇಸ್‌ನ ನಾಯಕರು ರಾಜ್ಯದ ಜನತೆಯನ್ನು ತೆಗೆಳುವ ಮೂಲಕ ತಮ್ಮ ಮನಸ್ಥಿತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ತಾಲೂಕು ಸೇರಿದಂತೆ ಯಾವುದೆ ರಸ್ತೆ ಹಾಗೂ ಬಿಜೆಪಿ ಆಡಳಿತದಲ್ಲಿ ಮಂಜೂರಾದ ಕಾಮಗಾರಿಗಳನ್ನೂ ಸಹ ಅಭಿವೃಧಿಪಡಿಸಲಾಗದ ಸ್ಥಿತಿಗೆ ಬಂದು ತಲುಪಿದೆ ಎಂದು ಟೀಕಿಸಿದರು.
ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮತದಾರರು ಡಾ.ರಾಜಕುಮಾರ್ ಹಾಗೂ ಬಂಗಾರಪ್ಪ ಕುಟುಂಬದ ಬಗ್ಗೆ ಅಭಿಮಾನ ಹೊಂದಿದ್ದರೂ, ಬಿಜೆಪಿಯ ವಿಕಸಿತ ಭಾರತದ ಕಲ್ಪನೆಗೆ ಅರ್ಥ ಬರುವ ರೀತಿಯಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸಿದ್ದಾರೆ. ತಾಲೂಕಿನಲ್ಲಿ ಇದುವರೆಗೂ ಬಗರ್‌ಹುಕುಂ ಸಮಿತಿ ನಿರ್ಮಾಣ ವಾಗಿಲ್ಲ. ನಮ್ಮ ಕಾಲದಲ್ಲಿ ನಿರ್ಮಾಣವಾಗಿರುವ ಸೇತುವೆಗಳನ್ನಾದರೂ ಉದ್ಘಾಟನೆ ಮಾಡುವ ಮೂಲಕ ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಪರೋಕ್ಷವಾಗಿ ಮಧು ಬಂಗಾರಪ್ಪನವರನ್ನು ಟೀಕಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಎಂ.ಬಿ.ಭಾನುಪ್ರಕಾಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಡಸೂರು, ಪ್ರಕಾಶ್ ಅಗಸನಹಳ್ಳಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಗಣಪತಿ ಟಿ.ಜಿ.ಕೊಪ್ಪ, ಮುಖಂಡರಾದ ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ದೇವೇಂದ್ರಪ್ಪ ಚನ್ನಾಪುರ, ಎಂ.ಡಿ.ಉಮೇಶ್, ಗುರುಕುಮಾರ್ ಪಾಟೀಲ್ ಇದ್ದರು.