ಕನ್ನಡಪ್ರಭ ವಾರ್ತೆ ದಾಂಡೇಲಿ
ರಸ್ತೆ, ಚರಂಡಿ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಬೀದಿ ದೀಪ ನಿರ್ವಹಣೆ, ನಗರ ಸ್ವಚ್ಛತಾ ಕಾರ್ಯಗಳಿಗೆ ಆದ್ಯತೆ ಸೇರಿದಂತೆ ನಗರಸಭೆಯಲ್ಲಿ ಒಟ್ಟು ₹೬೨,೯೫,೮೬,೧೯೩ ಜಮಾ ಮತ್ತು ಒಟ್ಟು ₹೬೨,೭೫,೨೪,೯೩೩ ಖರ್ಚು ಸೇರಿದಂತೆ ₹೨೦,೬೧,೭೬೦ ಉಳಿತಾಯ ಬಜೆಟ್‌ನ್ನು ಮಂಡಿಸಲಾಗಿದೆ.ಶಾಸಕ ಆರ್.ವಿ. ದೇಶಪಾಂಡೆ ಉಪಸ್ಥಿತಿಯಲ್ಲಿ ಪೌರಾಯುಕ್ತ ವಿವೇಕ ಬನ್ನೆ ೨೦೨೬-೨೭ನೇ ಸಾಲಿನ ನಗರಸಭೆಯ ಆಯವ್ಯಯ ಮಂಡಿಸಿ, ಈ ಬಜೆಟ್‌ಗೆ ನಗರಸಭೆಯ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿ ಸಮ್ಮತಿ ಪಡೆಯಲಾಗಿದೆ ಎಂದು ತಿಳಿಸಿದರು.
ಅಂದಾಜು ಆದಾಯ ಮೂಲ:ಸಿಬ್ಬಂದಿ ವೇತನ ಅನುದಾನ ₹೪.೫ ಕೋಟಿ, ಎಸ್‌ಎಫ್‌ಸಿ ವಿದ್ಯುತ್ ಬಿಲ್ಲ ಅನುದಾನ ₹೬ ಕೋಟಿ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ ಅನುದಾನ ₹೧.೩೫ ಕೋಟಿ, ಸಿಎಂಐಡಿಪಿ ಅನುದಾನ ₹೧೧,೪೮,೧೦,೦೦೦, ೧೬ನೇ ಹಣಕಾಸು ಅನುದಾನ ₹೩ ಕೋಟಿ, ಸ್ವಚ್ಛ ಭಾರತ ಮಿಷನ್ (೨.೦) ಅನುದಾನ ₹೫ ಕೋಟಿ, ಅಮೃತ (೨.೦) ಅನುದಾನ ₹೧ ಕೋಟಿ, ಆಸ್ತಿ ತೆರಿಗೆ ₹೩.೫ ಕೋಟಿ, ನೀರಿನ ಕಂದಾಯ ₹೨.೫ ಕೋಟಿ, ವಾಣಿಜ್ಯ ಮಳಿಗೆ ಬಾಡಿಗೆ ₹೭೫ ಲಕ್ಷ, ಯುಜಿಡಿ ತೆರಿಗೆ ₹೩೫ ಲಕ್ಷ, ಟ್ರೇಡ್ ಲೈಸನ್ಸ್ ಫೀ ₹೧೫ ಲಕ್ಷ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನ ₹೧೫ ಲಕ್ಷ, ಎಸ್‌ಎಫ್‌ಸಿ, ಎಸ್‌ಸಿಎಸ್‌ಪಿ ಅನುದಾನ ₹೨೦ ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಅನುದಾನ ₹೧೨ ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನ ₹೮೫ ಲಕ್ಷ ಸೇರಿದಂತೆ ಒಟ್ಟು ₹೬೨,೯೫,೮೬,೧೯೬ಗಳ ಆದಾಯದ ಮೂಲ ತೋರಿಸಲಾಗಿದೆ.
ಅಂದಾಜು ಖರ್ಚು ವಿವರ:
ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕೆ ₹೨ ಕೋಟಿ, ರಸ್ತೆಗಳ ನಿರ್ಮಾಣ ಮತ್ತು ನವೀಕರಣಕ್ಕೆ ₹೮ ಕೋಟಿ, ರಸ್ತೆ ಬದಿಯ ಚರಂಡಿ ನಿರ್ಮಾಣ, ನಿರ್ವಹಣೆ ಮತ್ತು ಸ್ಲ್ಯಾಬ್ ಅಳವಡಿಕೆಗೆ ₹೮ ಕೋಟಿ, ನಗರ ವ್ಯಾಪ್ತಿಯಲ್ಲಿ ಹೊಸ ಬೀದಿ ದೀಪಗಳ ಅಳವಡಿಕೆಗೆ ₹೪೦ ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಮತ್ತು ಹೊಸ ಯಂತ್ರೋಪಕರಣಗಳ ಖರೀದಿಗೆ ₹೨ ಕೋಟಿ, ನೀರು ಸರಬರಾಜು ಸಂಬಂಧಿಸಿದ ಕಾಮಗಾರಿಗಳಿಗೆ ₹೯೦ ಲಕ್ಷ, ಯುಜಿಡಿ ನಿರ್ವಹಣೆ ಮತ್ತು ದುರಸ್ತಿಗೆ ₹೭೦ ಲಕ್ಷ, ಹೊಸ ವಾಹನಗಳ ಖರೀದಿಗೆ ₹೭೦ ಲಕ್ಷ ಸೇರಿ ₹೬೨,೭೫,೨೪,೯೩೩ ಗಳ ಒಟ್ಟು ಖರ್ಚನ್ನು ತೋರಿಸಲಾಗಿದೆ.
ಪ.ಜಾತಿ, ಪಂಗಡಗಳ ಮತ್ತು ಇತರೆ ಬಡ ಜನಾಂಗ ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಒಟ್ಟು ₹೩೮,೩೩,೦೧೮ಗಳನ್ನು ಮೀಸಲಿರಿಸಲಾಗಿದೆ. ಜೊತೆಗೆ ನಗರದ ಸೌಂದರ್ಯೀಕರಣಕ್ಕಾಗಿ ₹೨೫ ಲಕ್ಷ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಾಗಿ ₹ ೨೦ ಲಕ್ಷ ಕಾಯ್ದಿರಿಸಲಾಗಿದೆ ಎಂದು ಪೌರಾಯುಕ್ತ ವಿವೇಕ ಬನ್ನೆ ತಿಳಿಸಿದರು.