ದಾಂಡೇಲಿಯ ವಸತಿ ಶಾಲೆ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

| Published : Aug 28 2024, 12:49 AM IST

ದಾಂಡೇಲಿಯ ವಸತಿ ಶಾಲೆ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಎಪಿಜೆ ಅಬ್ದುಲ್ ಕಲಾಂ ವಸತಿಶಾಲೆಯ ಪ್ರಾಚಾರ್ಯ ವಿಶ್ವನಾಥ ಹುಲಸದಾರ ವರ್ಗಾವಣೆಗೊಂಡರೂ ಚಾರ್ಜ್ ನೀಡದೆ ಹೋಗಿರುವ ಮತ್ತು ಅವರ ಅವಧಿಯಲ್ಲಿ ಆಗಿರುವ ಅನೇಕ ತಪ್ಪುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.

ದಾಂಡೇಲಿ: ಹಲವಾರು ವಿಚಾರಗಳಲ್ಲಿ ಮಕ್ಕಳಿಗೆ ತೊಂದರೆ ಕೊಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ವರ್ಗಾವಣೆಗೊಂಡಿದ್ದ ಇಲ್ಲಿನ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ವಿಶ್ವನಾಥ ಹುಲಸದಾರ ಅವರು ಮರಳಿ ಅದೇ ಜಾಗಕ್ಕೆ ವರ್ಗ ಮಾಡಿಸಿಕೊಂಡು ಬಂದಿದ್ದು, ಪ್ರಾಂಶುಪಾಲರ ವಿರುದ್ಧ ಮಂಗಳವಾರ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಡಾ. ಎಪಿಜೆ ಅಬ್ದುಲ್ ಕಲಾಂ ವಸತಿಶಾಲೆಯ ಪ್ರಾಚಾರ್ಯ ವಿಶ್ವನಾಥ ಹುಲಸದಾರ ವರ್ಗಾವಣೆಗೊಂಡರೂ ಚಾರ್ಜ್ ನೀಡದೆ ಹೋಗಿರುವ ಮತ್ತು ಅವರ ಅವಧಿಯಲ್ಲಿ ಆಗಿರುವ ಅನೇಕ ತಪ್ಪುಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.

ಅವರ ವರ್ಗಾವಣೆಯ ನಂತರ ಮಕ್ಕಳಿಗೆ ಸರಿಯಾದ ಊಟ, ಇತರ ವ್ಯವಸ್ಥೆ ಸಿಗುತ್ತದೆ ಎಂದು ವಿದ್ಯಾರ್ಥಿಗಳು ಕೂಡ ಸಂತಸವನ್ನು ಹಂಚಿಕೊಂಡಿದ್ದರು. ಸುಮಾರು ೨೫ ದಿನಗಳ ನಂತರ ಅವರು ಮತ್ತೆ ಅದೇ ಶಾಲೆಯ ಪ್ರಾಂಶುಪಾಲರಾಗಿ ಆಗಮಿಸಿದ್ದಾರೆ. ಮಾಧ್ಯಮಗಳಿಗೆ ಸಿಕ್ಕ ಮಾಹಿತಿ ಪ್ರಕಾರ ವರ್ಗಾವಣೆಗೆ ತಾತ್ಕಾಲಿಕ ತಡೆ ತಂದಿದ್ದಾರೆಂದು ತಿಳಿದುಬಂದಿದೆ. ಆದರೆ ಈ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಸೋಮವಾರ ಸಂಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಬಂದ ಪ್ರಾಂಶುಪಾಲ ವಿಶ್ವನಾಥ ಹುಲಸದಾರ ಅವರು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸತ್ತ ಸುಮಾರು ೩೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮಂಗಳವಾರ ತರಗತಿಯನ್ನು ಬಹಿಷ್ಕರಿಸಿ ಹಠಾತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಅಷ್ಪಾಕ ಶೇಖ್, ಉಪಾಧ್ಯಕ್ಷ ಶಿಲ್ಪಾ ಕೋಡೆ, ಸದಸ್ಯರಾದ ಯಾಸ್ಮಿನ್ ಕಿತ್ತೂರ್, ಸಂಜಯ ನಂದ್ಯಾಳಕರ, ಸರಸ್ವತಿ ರಜಪೂತ ಸೇರಿದಂತೆ ನಗರಸಭಾ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪತ್ರಕರ್ತರು- ಪೊಲೀಸರ ವಾಗ್ವಾದಪ್ರತಿಭಟನೆಯ ಸುದ್ದಿ ತಿಳಿದು ಸಿಪಿಐ ಭೀಮಣ್ಣ ಸೂರಿ, ಪಿಎಸ್‌ಐ ಐ.ಆರ್. ಗಡ್ಡೆಕರ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು.

ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದರು. ವಿದ್ಯಾರ್ಥಿಗಳ ಮೇಲಿನ ಪ್ರಾಂಶುಪಾಲರ ದೌರ್ಜನ್ಯ ಸಹಿಸುವುದಿಲ್ಲವೆಂದರು. ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದವಾಯಿತು.

ಸ್ಥಳಕ್ಕೆ ತಹಸೀಲ್ದಾರ್ ಶೇಲೇಶ ಪರಮಾನಂದ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಪ್ರಾಚಾರ್ಯರ ಗೈರುಹಾಜರಿಯನ್ನು ದಾಖಲಿಸಿದ್ದಾರೆ.