ಸಾರಾಂಶ
ಕನ್ನಡ ಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಶಕ್ತಿದೇವತೆ, ಗಡಿ ದೇವರು ಎಂದು ಪ್ರಸಿದ್ಧಿ ಪಡೆದ ದಂಡಿನ ದೇವಸ್ಥಾನದಲ್ಲಿ ದಂಡಿನ ಮಾರಮ್ಮನ ಹಬ್ಬವು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ಮಳವಳ್ಳಿಗೆ ದಂಡೆತ್ತಿ ಬಂದವರಿಂದ ಜನರನ್ನು ರಕ್ಷಿಸಿದ ಪ್ರತೀತಿ ಹೊಂದಿರುವ ಪಟ್ಟಣದ ಹೊರವಲಯದಲ್ಲಿ ನೆಲಸಿರುವ ಶಕ್ತಿ ದೇವತೆ ದಂಡಿನ ಮಾರಮ್ಮನ ಹಬ್ಬದ ಮೂಲಕ ಫೆ.7 ಮತ್ತು 8 ರಂದು ನಡೆಯುವ ಐತಿಹಾಸಿಕ ಪಟ್ಟಲದಮ್ಮನ ಸಿಡಿ ಹಬ್ಬಕ್ಕೆ ಅಧಿಕೃತ ಚಾಲನೆ ದೊರೆತಿದೆ.
ರಾಜರ ಆಳ್ವಿಕೆ ಕಾಲದಲ್ಲಿ ವಿವಿಧ ಪ್ರದೇಶಗಳಿಗೆ ಹೋಗಲು ಮಳವಳ್ಳಿ ಮುಖ್ಯ ಕೇಂದ್ರವಾಗಿದ್ದ ವೇಳೆ ಬೇರೆ ಪ್ರಾಂತ್ಯದ ಸೈನಿಕರ ಮಳವಳ್ಳಿಯ ಮೇಲೆ ಆಗಿಂದಾಗೆ ದಾಳಿ ನಡೆಸುತ್ತಿದ್ದರು. ಸೈನಿಕರ ಉಪಟಳವನ್ನು ತಾಳಲಾರದೇ ಇಲ್ಲಿನ ಜನರು ರಕ್ಷಿಸುವಂತೆ ದಂಡಿನ ಮಾರಮ್ಮ ದೇವರ ಮೊರೆ ಹೋದಾಗ ಪಟ್ಟಣದ ಹೊರಭಾಗದಲ್ಲಿ ನೆಲೆಗೊಂಡು ದಂಡೆತ್ತಿ ಬಂದ ಸೈನಿಕರಿಗೆ ವಾಂತಿ ಭೇದಿ ಕೊಟ್ಟು ವಾಸಪ್ ಹೋಗುವಂತೆ ಮಾಡಲಾಗಿತ್ತು.ಪಾರಂಪರಿಕ ಹಿನ್ನಲೆವುಳ್ಳ ಶಕ್ತಿದೇವತೆ ದಂಡಿನ ಮಾರಮ್ಮ ಮಳವಳ್ಳಿ ಗಡಿಕಾಯುವ ದೇವತೆಯಾಗಿ ರಾಜರ ಕಾಲದಿಂದಲೂ ಪಟ್ಟಣದ ಸಂರಕ್ಷಣೆಗಾಗಿಯೇ ದೊಡ್ಡಕೆರೆಯ ಬಳಿ ನೆಲಿಸಿದ್ದಾಳೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ. ದಂಡೆತ್ತಿ ಬಂದ ಸೈನಿಕರನ್ನು ಹಿಮ್ಮಿಟ್ಟಿಸಿದ ದೇವತೆಗೆ ವಾಡಿಕೆಯಂತೆ ಅಗ್ರಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ.
ದಂಡೆತ್ತರವರಿಂದ ರಕ್ಷಣೆ ಮಾಡಿದ ದಂಡಿನ ಮಾರಮ್ಮ ದೇವಿಗೆ ಅಂದಿನಿಂದ ಇಲ್ಲಿಯವರೆಗೂ ಭಕ್ತಿ ಪ್ರಧಾನವಾಗಿ ಪೂಜಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೊಡ್ಡಕರೆ ಸಮೀಪದ ದಂಡಿನ ಮಾರಮ್ಮನ ದೇವರು ಮಳವಳ್ಳಿ ಹಾಗೂ ಸುತ್ತಮುತ್ತ ಗ್ರಾಮಗಳ ಕುಲದೇವತೆಯಾಗಿದೆ.ಮಳವಳ್ಳಿಯ ಸುತ್ತಮುತ್ತಲಿನ ಭಾಗದಲ್ಲಿ ಶಕ್ತಿ ದೇವರು ಎಂಬ ಪ್ರತೀತಿ ಹೊಂದಿರುವ ದಂಡಿನ ಮಾರಮ್ಮನ ಹಬ್ಬದಲ್ಲಿ ಪಟ್ಟಣದ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು. ಸಿಡಿ ಹಬ್ಬದ ಆಚರಣೆಗೆ ಮೂರು ದಿನಗಳ ಮುನ್ನ ಈ ಹಬ್ಬವನ್ನು ಆಚರಿಸುವ ಸಂಪ್ರದಾಯವಾಗಿದೆ. ಮಂಗಳವಾರ ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದ್ದವು.
ವಿಜೃಂಭಣೆಯಿಂದ ನಡೆದ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ವಿವಿಧ ಬಗೆಯ ಹೂವುಗಳು, ವಿದ್ಯುತ್ ದೀಪಾಲಂಕಾರಗಳು ಮಾಡಲಾಗಿತ್ತು. ಹಸಿರು ತೊರಣಗಳಿಂದ ದೇವಸ್ಥಾನ ಕಂಗೊಳಿಸುತ್ತಿತ್ತು. ಸಿಡಿ ಹಬ್ಬದ ಭಾಗವಾಗಿರುವ ದಂಡಿನ ಮಾರಮ್ಮ ಹಬ್ಬದ ಅಂಗವಾಗಿ ಬೆಳಗಿನ ಜಾವ 3ಗಂಟೆಯಿಂದಲೇ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ವಿಶೇಷವಾಗಿ ಕೋಳಿಗಳನ್ನು ಬಲಿ ನೀಡಿ ಹರಕೆ ತೀರಿಸಿದರು. ಮುತ್ತಿನ ಮಣಿಗಳು ಹಾಗೂ ಹಲವು ಹೂವುಗಳಿಂದ ದೇವರಿಗೆ ಮಾಡಿದ ಅಲಂಕಾರ ಭಕ್ತರ ಗಮನ ಸೆಳೆಯಿತು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು, ಅಧಿಕಾರಿಗಳು ಪೂಜೆ ಸಲ್ಲಿಸಿದರು. ಯಾವುದೇ ಅಹಿಕತರ ಘಟನೆ ನಡೆಯದಂತೆ ಗ್ರಾಮಾಂತರ ಪೊಲೀಸರು ಭದ್ರತೆ ಕಲ್ಪಿಸಿದರು.