ಸಾರಾಂಶ
ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು, ಮಲ್ಪೆಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸಿಕ್ಕಿ ಬೀಳುತ್ತಿರುವುದು, ಅವರಿಗೆಲ್ಲ ಕರ್ನಾಟಕವು ಅತ್ಯಂತ ಸುರಕ್ಷಿತ ತಾಣವಾಗಿ ಮಾರ್ಪಾಡಾಗಿದೆ. ಸರ್ಕಾರ ಇಂಥವರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುವ ಬದಲು ಓಲೈಕೆ ರಾಜಕಾರಣ ಮಾಡಿದರೂ ಅಚ್ಚರಿಯಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವು ಓಲೈಕೆ ರಾಜಕಾರಣದ ಪರಮಾವಧಿಯಾಗಿದ್ದು, ಇದರಿಂದ ರಾಜ್ಯಕ್ಕೆ ಎದುರಾಗಲಿರುವ ಗಂಡಾಂತರದ ನೇರ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ ನಡೆಸಿದ್ದಾರೆ.ಹುಬ್ಬಳ್ಳಿಯಲ್ಲಿ ಭಾರೀ ದೊಡ್ಡ ಕೋಮು ಗಲಭೆಗೆ ಸಂಚು ರೂಪಿಸಿ ನೂರಾರು ಜನ ಮತಾಂಧರು ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದು, ಪೊಲೀಸರ ಕೊಲೆಗೆ ಯತ್ನಿಸಿದ್ದು ಸೇರಿದಂತೆ ಹಲವು ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ (ಯುಎಪಿಎ) ಕಾಯ್ದೆಯಡಿ ಗಲಭೆಕೋರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್‌ಐಎ ಪ್ರಕರಣದ ತನಿಖೆ ನಡೆಸುತ್ತಿದ್ದು, ಕೆಲವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೂಡ ತಿರಸ್ಕರಿಸಿದೆ. ಅಂತಹ ಗಂಭೀರ ಪ್ರಕರಣವನ್ನು ಕೇವಲ ಓಲೈಕೆ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಹಿಂಪಡೆದಿರುವುದು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನೇ ಕುಸಿಯುವಂತೆ ಮಾಡಿರುವುದು ಮಾತ್ರವಲ್ಲದೆ, ಇಡೀ ರಾಜ್ಯದ ಪಾಲಿಗೆ ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಮುಡಾ ಹಗರಣದಲ್ಲಿ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗುತ್ತಿದ್ದಂತೆ ಗಲಭೆಕೋರರ ಕೇಸ್ ವಾಪಸ್ ಪಡೆದು ಮೂಡಾ ಹಗರಣದ ದಿಕ್ಕು ತಪ್ಪಿಸಲು ಇಂತಹ ಮಟ್ಟಕ್ಕೆ ಇಳಿದಿರುವುದು ದುರಂತ. ಈ ನಡುವೆ ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು, ಮಲ್ಪೆಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸಿಕ್ಕಿ ಬೀಳುತ್ತಿರುವುದು, ಅವರಿಗೆಲ್ಲ ಕರ್ನಾಟಕವು ಅತ್ಯಂತ ಸುರಕ್ಷಿತ ತಾಣವಾಗಿ ಮಾರ್ಪಾಡಾಗಿದೆ. ಸರ್ಕಾರ ಇಂಥವರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುವ ಬದಲು ಓಲೈಕೆ ರಾಜಕಾರಣ ಮಾಡಿದರೂ ಅಚ್ಚರಿಯಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.