ಅಪಾಯ ಆಹ್ವಾನಿಸುತ್ತಿರುವ ರಸ್ತೆ : ಬ್ಯಾರಿಕೇಡ್ ಅಳವಡಿಸಲು ಆಮ್ ಆದ್ಮಿ ಪಾರ್ಟಿ ಒತ್ತಾಯ

| Published : Nov 07 2025, 03:00 AM IST

ಅಪಾಯ ಆಹ್ವಾನಿಸುತ್ತಿರುವ ರಸ್ತೆ : ಬ್ಯಾರಿಕೇಡ್ ಅಳವಡಿಸಲು ಆಮ್ ಆದ್ಮಿ ಪಾರ್ಟಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಮರಳಿನ ತಡೆಗೋಡೆ ಅಪಾಯಕಾರಿ ಸ್ಥಿತಿಯಲ್ಲಿದ್ದು ಬ್ಯಾರಿಕೇಡ್‌ ಅಳವಡಿಸಬೇಕು ಎಂದು ಮುಕ್ಕಾಟಿರ ಅಪ್ಪಯ್ಯ ಒತ್ತಾಯಿಸಿದ್ದಾರೆ.

ಮಡಿಕೇರಿ : ಮಡಿಕೇರಿ ನಗರದಿಂದ ವಿರಾಜಪೇಟೆಗೆ ತೆರಳುವ ರಸ್ತೆಯಲ್ಲಿ ಮೂರನೇ ಮೈಲು ಭಾಗದಲ್ಲಿ ಮರಳಿನ ತಡೆಗೋಡೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಬ್ಯಾರಿಕೇಡ್ ಅಳವಡಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಅವರು ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ್ದ ಅವರು ರಸ್ತೆಯ ಸ್ಥಿತಿಗತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ನಿರಂತರ ಮಳೆಯಿಂದ ರಸ್ತೆ ಕುಸಿದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಮರಳಿನ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಆದರೆ ಈ ಅಪಾಯಕಾರಿ ತಿರುವಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಕಿರಿದಾದ ರಸ್ತೆಯಲ್ಲಿ ಸಾಗುವ ವಾಹನಗಳು ನಿಯಂತ್ರಣ ತಪ್ಪಿ ಉರುಳುವ ಸಾಧ್ಯತೆ ಇದೆ. ರಾತ್ರಿ ವೇಳೆ ಮತ್ತು ದಟ್ಟ ಮಂಜು ಕವಿದ ವಾತಾವರಣದಲ್ಲಿ ಅಪಾಯ ಎದುರಾಗಬಹುದು. ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತಾತ್ಕಾಲಿಕ ಕ್ರಮವಾಗಿ ತುರ್ತಾಗಿ ಬ್ಯಾರಿಕೇಡ್ ಅಳವಡಿಸಬೇಕು ಎಂದು ಆಗ್ರಹಿಸಿದರು.ಈಗಾಗಲೇ ಮಳೆ ಸಂಪೂರ್ಣವಾಗಿ ನಿಂತು ಹೋಗಿದ್ದು, ತಕ್ಷಣ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಬೇಕು. ತಡೆಗೋಡೆ ಶಾಶ್ವತ ಪರಿಹಾರವಾಗುವುದರಿಂದ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರುಗಳು ಆಸಕ್ತಿ ತೋರಬೇಕು. ಕೊಡಗಿನ ಬಹುತೇಕ ಭಾಗಗಳಲ್ಲಿ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ ಮತ್ತು ಬರೆಗಳು ಕುಸಿದಿವೆ. ಜಿಲ್ಲೆಯಲ್ಲಿ ಮಳೆಗಾಲ ಮುಗಿದಿದ್ದು, ಬಿಸಿಲಿನ ವಾತಾವರಣ ಮೂಡಿದೆ. ಇನ್ನಾದರು ರಸ್ತೆಗಳ ಅಭಿವೃದ್ಧಿ ಮತ್ತು ತಡೆಗೋಡೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಕ್ಕಾಟಿರ ಅಪ್ಪಯ್ಯ ಒತ್ತಾಯಿಸಿದರು.