ಸಾರಾಂಶ
ಸಿ.ಎ. ಇಟ್ನಾಳಮಠಕನ್ನಡಪ್ರಭ ವಾರ್ತೆ ಅಥಣಿ
ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿವೆ. ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವುದರಿಮದ ಅಫಘಾತಗಳು ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸಮಸ್ಯೆ ಬಿಗಡಾಯಿಸಿದೆ.ಅಥಣಿ, ಕಾಗವಾಡ ಎರಡು ತಾಲೂಕು ಸೇರಿ 6 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿಯೊಂದು ಕಾರ್ಖಾನೆಗೆ ಪ್ರತಿನಿತ್ಯ 500ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಕಬ್ಬು ಸಾಗಿಸುತ್ತವೆ. ನಿತ್ಯ 6 ಸಕ್ಕರೆ ಕಾರ್ಖಾನೆ ಸೇರಿ 3000ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳು ಸಂಚಾರ ನಡೆಸುತ್ತವೆ. ಇದರ ಹೊರತಾಗಿ ನೆರೆಯ ಮಹಾರಾಷ್ಟ್ರ ಮತ್ತು ಬಾಗಲಕೋಟೆ ಜಿಲ್ಲೆಗಳ ಕಾರ್ಖಾನೆಗಳಿಗೂ ತಾಲೂಕಿನಿಂದ ಕಬ್ಬು ಸಾಗಿಸುವುದರಿಂದ ಸರಾಸರಿ 4000-5000 ಸಾವಿರ ಟ್ರ್ಯಾಕ್ಟರ್‌ಗಳು ಸಂಚಾರ ಇವೆ.
ನಿಯಮ ಏನು ಹೇಳುತ್ತದೆ ?:ಕಾರ್ಖಾನೆಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳು ಯಾವ ಕಾರ್ಖಾನೆಗೆ ವ್ಯಾಪ್ತಿಗೆ ಒಳಪಟ್ಟಿದೆ. ಅದರ ಹೆಸರು ಸಹಿತ ಕೆಂಪು ಬಣ್ಣದ ಬಟ್ಟೆ ಹಾಕಿರಬೇಕು. ಹಿಂದೆ ಹಾಗು ಎರಡೂ ಬದಿಗೆ ಕೆಂಪು ರೇಡಿಯಂ ಹಾಕಿಸಿರಬೇಕು. (ರಾತ್ರಿ ಸಂಚರಿಸುವಾಗ ಹಿಂದೆ ಬರುವ ವಾಹನಗಳಿಗೆ ಕಾಣಿಸುವುದಕ್ಕೆ), ಟೇಪ್ ರೆಕಾರ್ಡರ್ ಹಚ್ಚಿ ವಾಹನ ಚಲಾಹಿಸಬಾರದು. ವೇಗದ ಮಿತಿ ಇರಬೇಕು. ಒಂದು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಕನಿಷ್ಠ 11 ಟನ್, ಗರಿಷ್ಠ 16 ಟನ್ ಮಾತ್ರ ಕಬ್ಬ ಸಾಗಿಸಬೇಕು.
ಕಾನೂನು ಲೆಕ್ಕಕ್ಕಿಲ್ಲ, ಅಪಘಾತಗಳಿಗೆ ತಡೆಯಿಲ್ಲ:ಆದರೆ, ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರು ಎಲ್ಲ ಕಾನೂನು ಗಾಳಿ ತೂರುತ್ತಿದ್ದಾರೆ. ಒಂದೇ ಎಂಜಿನ್‌ಗೆ ಎರಡು ಟ್ರ್ಯಾಲಿಗಳನ್ನು ಜೋಡಿಸಿ 40 ಟನ್‌ವರೆಗೆ ಕಬ್ಬು ಸಾಗಿಸಲಾಗುತ್ತದೆ. ಯಾವುದೇ ಟ್ರ್ಯಾಕ್ಟರ್‌ಗೆ ಕೆಂಪು ಬಣ್ಣದ ಬಟ್ಟೆ, ರೇಡಿಯಂ ಇರುವುದೇ ಇರಲ್ಲ. ಬಹುತೇಕ ಎಲ್ಲ ಟ್ರ್ಯಾಕ್ಟರ್ ಚಾಲಕರು ಟೇಪ್ ರೆಕಾರ್ಡರ್ ಹಚ್ಚಿಕೊಂಡೇ ಸಾಗುತ್ತಾರೆ. ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಸಾಗಿಸುವ ಮಾರ್ಗದಲ್ಲಿ ಇತರೇ ವಾಹನಗಳು ಸಾಗುವುದು ತೀವ್ರ ಕಷ್ಟದಾಯವಾಗಿದೆ. ಟ್ರ್ಯಾಲಿಗೆ ಹೊರಬರುವಂತೆ ಕಬ್ಬು ಹೇರಿರುವುದರಿಂದ ಅವುಗಳನ್ನು ಓವರ್ ಟೇಕ್ ಮಾಡುವುದು ದುಸ್ಸಾಹವಾಗಿಬಿಟ್ಟಿದೆ. ಅಲ್ಲದೆ ಎರಡು ಟ್ರ್ಯಾಲಿಗಳಿದ್ದು, ಟೇಪ್ ರೆಕಾರ್ಡರ್ ಹಚ್ಚುವುದರಿಂದ ಹಿಂದೆ ಬರುವ ವಾಹನ ಸವಾರರು ಎಷ್ಟೇ ಹಾರ್ನ್ ಹಾಕಿದರೂ ಕೇಳಿಸದೇ ತಮ್ಮ ಪಾಡಿಗೆ ತಾವು ಚಲಾಯಿಸುತ್ತಾರೆ. ರಾತ್ರಿ ಸಮಯದಲ್ಲೇ ಈ ಟ್ರ್ಯಾಕ್ಟರ್‌ಗಳು ಹೆಚ್ಚಾಗಿ ಸಂಚರಿಸುವುದರಿಂದ ಹಿಂದಿನ ವಾಹನಗಳಿಗೆ ಎದುರು ಟ್ರ್ಯಾಕ್ಟರ್ ಹೊರಟಿರುವುದು ಗಮನಕ್ಕೆ ಬಾರದೇ ಅನೇಕ ಅಪಘಾತಗಳು ಸಂಭವಿಸಿವೆ. ಹಾರ್ನ್ ಹಾಕಿದರೆ ಸೈಡ್ ತೆಗೆದುಕೊಳ್ಳದಿದ್ದಾಗ ಓವರ್ ಟೇಕ್ ಮಾಡಲು ಯತ್ನಿಸಿ ಎದುರಿನಿಂದ ಬರುವ ವಾಹನಗಳಿಗೆ ಡಿಕ್ಕಿಯಾಗಿ ಅಪಘಾತ ಪ್ರಕರಣ ಹೆಚ್ಚುತ್ತಿವೆ.
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿ ಪ್ರಮುಖ ರಸ್ತೆಗಳಲ್ಲಿ ಊಟ ಮಾಡಲು ರಸ್ತೆ ಬದಿಗೆ ಲೋಡ್ ಹೊಂದಿರುವ ಟ್ರ್ಯಾಕ್ಟರ್ ನಿಲ್ಲಿಸುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ಲಾರಿ, ಕಾರು, ದ್ವಿಚಕ್ರವಾಹನ ಸವಾರರು ಮುಂದೆ ಟ್ರ್ಯಾಕ್ಟರ್ ನಿಂತಿರುವುದು ಗಮನಕ್ಕೆ ಬಾರದೇ ಹಿಂಬದಿಯಿಂದ ಡಿಕ್ಕಿಹೊಡೆದು ಅಪಘಾತ ಸಂಭವಿಸುವ ಪ್ರಕಣಗಳ ಸಂಖ್ಯೆಯೂ ಅಧಿಕವಾಗಿದೆ.ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುವ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳಿಂದ ವರ್ಷದಿಂದ ವರ್ಷಕ್ಕೆ ರಸ್ತೆಗಳ ಅಪಘಾತಗಳ ಸಂಖ್ಯೆ, ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಇಷ್ಟಾದರೂ ಪೊಲೀಸರಲಾಗಲಿ, ಆರ್.ಟಿ.ಒ ಅಧಿಕಾರಿಗಳಾಗಲಿ ಜಾಣಮೌನ ವಹಿಸುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.
ಸಭೆಯನ್ನೇ ನಡೆಸಿಲ್ಲ;ಆರ್‌ಟಿಒ ಅಧಿಕಾರಿಗಳು ಹಾಗೂ ಪೊಲೀಸರು ಪ್ರತಿವರ್ಷ ಕಬ್ಬು ಹಂಗಾಮು ಆರಂಭಕ್ಕೂ ಮುನ್ನ ಕಾರ್ಖಾನೆ ಆಡಳಿತ ಮಂಡಳಿ, ಟ್ರ್ಯಾಕ್ಟರ್ ಮಾಲೀಕರ ಸಭೆ ನಡೆಸಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕಡ್ಡಾಯ ಆದೇಶ ಇದ್ದರೂ ಇಂತಹ ಯಾವುದೇ ಸಭೆಗಳು ನಡೆಯುತ್ತಿಲ್ಲ. ಕಾರ್ಖಾನೆಗಳಿಗೆ ಪ್ರಭಾವಿ ರಾಜಕೀಯ ಮುಖಂಡರು ಅಧ್ಯಕ್ಷರಾಗಿರುವ ಕಾರಣ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಯಾರದೋ ಒತ್ತಡಕ್ಕೆ ಜನಸಾಮಾನ್ಯರ ಜೀವದ ಜೊತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
-----------ವರ್ಷದಿಂದ ವರ್ಷದಕ್ಕೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಸಾರ್ವಜನಿಕರು ಸಂಚರಿವುದು ಹರಸಾಹಸ ಮಾಡುವಂತಾಗಿದೆ. ತಕ್ಷಣ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರು ರಸ್ತೆ ನಿಯಮ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇಲ್ಲದಿದ್ದರೆ ಕರವೇ ಸಂಘಟನೆ ತೀವ್ರ ಹೋರಾಟ ಹಮ್ಮಿಕೊಳ್ಳಲಿದೆ.
-ಜಗನಾಥ ಭಾಮನೆ ಕರವೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ-------------ರಸ್ತೆ ನಿಯಮಗಳನ್ನು ಎಲ್ಲ ಸಕ್ಕರೆ ಕಾರ್ಖಾನೆಗಳು ಪಾಲಿಸಬೇಕು. ಇದರ ಬಗ್ಗೆ ಪೊಲೀಸ್ ಇಲಾಖೆ, ಆರ್‌ಟಿಒ ಜಂಟಿಯಾಗಿ ಕಾರ್ಖಾನೆ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕೆಂದು ಈಗಾಗಲೇ ಎಲ್ಲ ಪೊಲೀಸ್ ಸ್ಟೇಷನ್‌ಗಳಿಗೆ ಆದೇಶ ನೀಡಲಾಗಿದೆ. ಈ ಕುರಿತು ಗಮನ ಹರಿಸಲಾಗುವುದು.
- ಭೀಮಾಶಂಕರ ಗುಳೇದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.