ಸಾರಾಂಶ
ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಬಸ್ತಿಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟೆ ಮೇಲೆಯೇ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಆದರೆ, ಈ ಅವೈಜ್ಞಾನಿಕ ನಿರ್ಧಾರದಿಂದ ಮಕ್ಕಳ ಜೀವಕ್ಕೆ ಕುತ್ತು ಉಂಟಾಗಲಿದೆ ಎಂಬ ವಿಚಾರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಚಂದ್ರಗುತ್ತಿ ಗ್ರಾಪಂ ವ್ಯಾಪ್ತಿಯ ಬಸ್ತಿಕೊಪ್ಪ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ಒಂದೇ ಕಾಂಪೌಂಡ್‌ನಲ್ಲಿವೆ. 1ರಿಂದ 5ನೇ ತರಗತಿವರೆಗೆ 8 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ 3 ಮಕ್ಕಳ ದಾಖಲಾತಿ ಇದೆ.
ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪ್ರತಿನಿತ್ಯ ಈ ಟ್ಯಾಂಕ್ ನೀರನ್ನು ಕುಡಿಯಲು ಮತ್ತು ಅಡುಗೆಗೆ ಬಳಸಲಾಗುತ್ತಿದೆ. ಈ ನೀರಿನ ಟ್ಯಾಂಕ್‌ಗೆ ಮಕ್ಕಳು ಪದೇಪದೆ ಇಣುಕುವುದು, ಮಲಿನ ಕೈ ಅದ್ದುವುದು ಸಾಮಾನ್ಯವಾಗಿದೆ. ಹುಳುಗಳು ಬಿದ್ದು ನೀರು ಕಲುಷಿತಗೊಳ್ಳುತ್ತದೆ. ಇದೇ ನೀರನ್ನು ಬಿಸಿಯೂಟ ತಯಾರಿಕೆಗೆ ಬಳಕೆ ಮಾಡುತ್ತಿದ್ದು, ಆಗಾಗ ಮಕ್ಕಳ ಆರೋಗ್ಯ ಸ್ಥಿತಿಯೂ ಹದಗೆಡುತ್ತಿದೆ.ಟ್ಯಾಂಕ್‌ಗೆ ಇಣುಕುವ ಮಕ್ಕಳು ನೀರಿಗೆ ಬೀಳುವ ಅಪಾಯವೂ ಇರುವುದು ಗಮನೀಯ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಪ್ರತಿನಿತ್ಯ ಮಕ್ಕಳು ಟ್ಯಾಂಕ್‌ನತ್ತ ಸುಳಿಯದಂತೆ ಕಾಯುವುದೇ ಕಾಯಕವಾಗಿದೆ.
ಈ ಹಿಂದೆ ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಈ ನೀರಿನ ಟ್ಯಾಂಕ್ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಕಾರ್ಯೋನ್ಮುಖರಾಗುವಂತೆ ಸೂಚಿಸಿದ್ದರು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂದು ತಿಳಿದುಬಂದಿದೆ.ಟ್ಯಾಂಕ್ ಅಳವಡಿಕೆ ಕಾಮಗಾರಿಗೆ ಬಿಡುಗಡೆಯಾದ ಹಣ ದುರುಪಯೋಗವಾಗಿದೆ ಎಂದೂ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಕಳೆದ ಎರಡು ತಿಂಗಳಿನಿಂದ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ನಾಳೆ, ನಾಡಿದ್ದು ಎಂದು ಸಬೂಬು ಹೇಳುತ್ತ ಕಾಮಗಾರಿ ನಿರ್ಲಕ್ಷಿಸಿದ್ದಾರೆ.
- - -ಬಾಕ್ಸ್ ₹4 ಲಕ್ಷ ಬಿಡುಗಡೆ, ಕಾಮಗಾರಿ ಅಪೂರ್ಣ ಕಳೆದ ವರ್ಷ ಜಿ.ಪಂ. ವತಿಯಿಂದ ಶಾಲಾ ದುರಸ್ತಿ, ಮೇಲ್ಛಾವಣಿ, ಕುಡಿಯುವ ನೀರು ಮತ್ತು ಸುಣ್ಣ-ಬಣ್ಣಕ್ಕೆ ₹4 ಲಕ್ಷ ಬಿಡುಗಡೆಯಾಗಿದೆ. ನಿರ್ಮಿತಿ ಕೇಂದ್ರದಿಂದ ನಿರ್ವಹಿಸಿರುವ ಕಾಮಗಾರಿ ಗುತ್ತಿಗೆದಾರರಿಂದ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ. ನೀರಿನ ಟ್ಯಾಂಕ್ ಅಳವಡಿಸಲು ಸುಮಾರು 8 ಅಡಿ ಎತ್ತರದ ಸಿಮೆಂಟ್ ಕಾಂಕ್ರೀಟ್ ಕಂಬಗಳನ್ನು ನಿರ್ಮಿಸುವ ಬದಲು, ಕೇವಲ 2 ಅಡಿಗಳಷ್ಟು ಎತ್ತರದ ಕಾಮಗಾರಿ ನಡೆಸಿ, ಹಾಗೆಯೇ ಬಿಡಲಾಗಿದೆ. ಆದರೆ ಎಸ್‌ಡಿಎಂಸಿ ಅಧ್ಯಕ್ಷರ ನಿರಾಕ್ಷೇಪಣಾ ಪತ್ರವನ್ನು ಪಡೆಯದೇ ಗ್ರಾಪಂ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಿದೆ. ನೀರಿನ ಟ್ಯಾಂಕ್ ಮಾತ್ರ ಶಾಲೆ ಕಟ್ಟೆ ಮೇಲೆ ಸ್ಥಾಪಿಸಿ, ಕೈ ತೊಳೆದುಕೊಂಡಿದ್ದಾರೆ.
- - -ಕೋಟ್ ಶಾಲಾ ದುರಸ್ತಿಗೆ ಬಿಡುಗಡೆ ಆಗಿರುವ ₹4 ಲಕ್ಷ ದುರುಪಯೋಗವಾಗಿದೆ. ಶಾಲೆ ನೀರಿನ ಟ್ಯಾಂಕ್ ಅಳವಡಿಸಲು ನಿರ್ಮಿಸುವ ಕಂಬಗಳನ್ನು ಸಂಪೂರ್ಣ ಮಾಡಿಲ್ಲ. ಕಟ್ಟೆಯ ಮೇಲೆಯೇ ಟ್ಯಾಂಕ್ ಅಳವಡಿಸಿದ್ದಾರೆ. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ. ಇತ್ತೀಚೆಗೆ ಮಕ್ಕಳಿಗೆ ಅಲರ್ಜಿಯೂ ಆಗಿದ್ದರಿಂದ ತೆರೆದ ಬಾವಿಯಿಂದ ನೀರನ್ನು ಪೂರೈಸಲಾಗುತ್ತಿದೆ. ಎಸ್.ಡಿ.ಎಂ.ಸಿ. ಅಧ್ಯಕ್ಷರ ಶಿಫಾರಸು ಲೆಟರ್ ಪಡೆಯದೇ ಗ್ರಾಪಂ ಬಿಲ್ ಪಾಸ್ ಮಾಡಿ ಲೋಪವೆಸಗಿದ್ದಾರೆ
– ಮಂಜುನಾಥ ಬಡಿಗೇರ್, ಅಧ್ಯಕ್ಷ, ಎಸ್.ಡಿ.ಎಂ.ಸಿ- - -
-31ಕೆಪಿಸೊರಬ01: ಬಸ್ತಿಕೊಪ್ಪ ಸರ್ಕಾರಿ ಶಾಲೆಯ ಅವೈಜ್ಞಾನಿಕ ನೀರಿನ ಟ್ಯಾಂಕ್.