ಸಾರಾಂಶ
ಗದಗ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಕರಾಳ ದಿನಗಳು ಆರಂಭವಾಗಿವೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ನಡಹಳ್ಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಅನುಕೂಲವಾಗುತ್ತಿದ್ದ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸಿದ್ದು, ಇದು ರೈತ ವಿರೋಧಿ ನೀತಿಯಂದರು.ರೈತರ ಜಮೀನುಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿದ್ದ ವಿದ್ಯಾನಿಧಿ ಯೋಜನೆ ಸ್ಥಗಿತಗೊಳಿಸಲಾಗಿದೆ. ಸಿರಿಧಾನ್ಯ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ನೀಡಲಾಗುತ್ತಿದ್ದ ₹ 10 ಸಾವಿರ ಪ್ರೋತ್ಸಾಹಧನ ನಿಲ್ಲಿಸಲಾಗಿದೆ. ರಾಜ್ಯದ 23 ಲಕ್ಷ ರೈತರಿಗೆ ಹೈನುಗಾರಿಕೆಗಾಗಿ ನೀಡಲಾಗುತ್ತಿದ್ದ ₹5 ಪ್ರೋತ್ಸಾಹಧನ ನಿಲ್ಲಿಸುವ ಮೂಲಕ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಸಗೊಬ್ಬರ ವಿತರಣೆಯಲ್ಲಿ ವಿಫಲ: ರಸಗೊಬ್ಬರ ವಿತರಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನಡಹಳ್ಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಯೂರಿಯಾ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇರುವುದಿಲ್ಲ. ಈ ಸಮಯದಲ್ಲಿ ಯೂರಿಯಾ ಖರೀದಿಸಿ ಸಂಗ್ರಹಿಸಬೇಕಿತ್ತು. ಹವಾಮಾನದ ಮುನ್ಸೂಚನೆ ಸರ್ಕಾರದ ಗಮನಕ್ಕೆ 2 ತಿಂಗಳ ಮೊದಲೇ ಇದ್ದರೂ, ರೈತರು ಬೆಳೆಗಳನ್ನು ಬದಲಾವಣೆ ಮಾಡುವ ಬಗ್ಗೆ ಗಮನ ಹರಿಸಬೇಕಾದ ಸರ್ಕಾರ ತನ್ನ ಕರ್ತವ್ಯ ಮರೆತಿದೆ. ಕೃಷಿ ಸಚಿವರು ಜು. 27ರಂದು ರಾಜ್ಯಕ್ಕೆ 6.85 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಅವಶ್ಯಕತೆ ಇದ್ದು, ಕೇಂದ್ರದಿಂದ 8 ಲಕ್ಷ ಟನ್ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಇನ್ನೂ 1 ಲಕ್ಷ ಮೆಟ್ರಿಕ್ ಟನ್ ಅವಶ್ಯಕತೆ ಇದ್ದು, ಕೇಂದ್ರ ನೀಡಬೇಕು ಎಂದು ಹೇಳುತ್ತಾರೆ. ಈ ಹೇಳಿಕೆಗಳಲ್ಲಿಯೇ ವ್ಯತ್ಯಾಸವಿದೆ, ಇದರಿಂದಲೇ ಸ್ಪಷ್ಟವಾಗುತ್ತದೆ ಎಂದರು.ಹಲವು ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಶೇ. 100 ಮಳೆಯಾಗಿರಲಿಲ್ಲ. ಆದರೆ, ಈ ವರ್ಷ ಉತ್ತಮ ಮಳೆಯಾಗಿದೆ. ರೈತರು ಬೆಳೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ಇದರಿಂದ ಯೂರಿಯಾಗೆ ಹೆಚ್ಚು ಬೇಡಿಕೆ ಬಂದಿದೆ. ಆದರೂ, ಕೇಂದ್ರದಿಂದ ಬಂದ ಗೊಬ್ಬರವನ್ನು ಹಂಚುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ನಡಹಳ್ಳಿ ದೂರಿದರು.
ಕೇಂದ್ರದಿಂದ ರಾಜ್ಯಕ್ಕೆ 8 ಲಕ್ಷ 75 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬಂದಿದೆ. ಆದರೆ, ರಾಜ್ಯ ಸರ್ಕಾರ ಸೊಸೈಟಿ ಮೂಲಕ ಕೇವಲ 5 ಲಕ್ಷ 30 ಸಾವಿರ ಮೆಟ್ರಿಕ್ ಟನ್ ಮಾತ್ರ ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರ ಗೊಬ್ಬರ ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ನಡಹಳ್ಳಿ ಹೇಳಿದರು.ರೈತರ ಬಾಯಿಗೆ ಮಣ್ಣು: ಸಿದ್ದರಾಮಯ್ಯ ಸರ್ಕಾರ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ. ಕೃಷಿ ಸಚಿವರು ಗದಗ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಸಭೆ ಮಾಡಿಲ್ಲ. ರೈತರ ಸಮಸ್ಯೆ ಕೇಳಿಲ್ಲ. ಕಳೆದ ಒಂದು ವಾರದಿಂದ ಜಿಲ್ಲೆಯ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೂ, ಸಮರ್ಪಕ ಗೊಬ್ಬರ ವಿತರಿಸುವ ಕೆಲಸ ಮಾಡುತ್ತಿಲ್ಲ ಎಂದು ಎ.ಎಸ್. ನಡಹಳ್ಳಿ ಹಾಗೂ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಾಸಕ ಡಾ. ಚಂದ್ರು ಲಮಾಣಿ, ಎಂ.ಎಸ್. ಕರಿಗೌಡ್ರ, ಬಿ.ಎಸ್. ಚಿಂಚಲಿ, ಬಸವರಾಜ ಇಟಗಿ, ಲಿಂಗರಾಜ ಪಾಟೀಲ, ಸುರೇಶ ಮಾಗಳಪ್ಪನವರ, ಬೂದಪ್ಪ ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.