ಶಾಸಕರ ನಿರ್ಲಕ್ಷ್ಯದಿಂದ ಕತ್ತಲೆ ಭಾಗ್ಯ: ಆರ್‌.ಡಿ. ಹೆಗಡೆ ಜಾನ್ಮನೆ

| Published : Jul 31 2024, 01:04 AM IST

ಶಾಸಕರ ನಿರ್ಲಕ್ಷ್ಯದಿಂದ ಕತ್ತಲೆ ಭಾಗ್ಯ: ಆರ್‌.ಡಿ. ಹೆಗಡೆ ಜಾನ್ಮನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ೧೫ ದಿನಗಳಿಂದ ಸುರಿದ ಗಾಳಿ- ಮಳೆಗೆ ಬಹಳಷ್ಟು ಹಾನಿಯಾಗಿದೆ. ಮುನ್ನೆಚ್ಚರಿಕಾ ಕ್ರಮ ವಹಿಸದ ಕಾರಣ ವಿದ್ಯುತ್ ಕಂಬಗಳು ಉರಿಳಿದೆ.

ಶಿರಸಿ: ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕತ್ತಲೆ ಭಾಗ್ಯದಿಂದ ಜನತೆ ಸಂಕಷ್ಟ ಎದುರಿಸುವಂತಾಗಿದ್ದು, ಪ್ರಕೃತಿ ವಿಕೋಪದ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆಡಳಿತ ವ್ಯವಸ್ಥೆಯು ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಕೋರ್ ಕಮಿಟಿ ಸದಸ್ಯ ಆರ್.ಡಿ. ಹೆಗಡೆ ಜಾನ್ಮನೆ ಆರೋಪಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೧೫ ದಿನಗಳಿಂದ ಸುರಿದ ಗಾಳಿ- ಮಳೆಗೆ ಬಹಳಷ್ಟು ಹಾನಿಯಾಗಿದೆ. ಮುನ್ನೆಚ್ಚರಿಕಾ ಕ್ರಮ ವಹಿಸದ ಕಾರಣ ವಿದ್ಯುತ್ ಕಂಬಗಳು ಉರಿಳಿದೆ. ವಿದ್ಯುತ್ ಕಂಬಗಳ ಮೇಲೆ ವಾಲಿದ ಮರಗಳನ್ನು ಮಳೆಗಾಲದ ಪೂರ್ವದಲ್ಲಿ ಕಟಾವು ಮಾಡಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಹಾನಿ ಸಂಭವಿಸುತ್ತಿರಲಿಲ್ಲ. ಹೆಸ್ಕಾಂನಲ್ಲಿ ಸಿಬ್ಬಂದಿ ಕೊರತೆಯಿಂದ ಜನರಿಗೆ ಸಮರ್ಪಕ ಸೇವೆ ನೀಡಲು ತೊಂದರೆಯಾಗುತ್ತಿದೆ ಎಂದರು.

ಶಾಸಕರು ಇದರ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿತ್ತು. ಹವಾಮಾನದ ವೈಪರೀತ್ಯದಿಂದ ಅಡಕೆ ಹಾನಿಯಾಗಿದೆ. ತೋಟಗಾರಿಕಾ ಅಧಿಕಾರಿಗಳು ಅಡಿಕೆ ತೋಟಕ್ಕೆ ಭೇಟಿ ನೀಡಿಲ್ಲ. ಸಬ್ಸಿಡಿ ದರದಲ್ಲಿ ಮೈಲುತುತ್ತ ಪೂರೈಕೆಯಾಗಿಲ್ಲ. ಸಬ್ಸಿಡಿ ಯೋಜನೆಗಳು ಸ್ಥಗಿತಗೊಂಡಿವೆ. ಕೃಷಿ ಯಂತ್ರಧಾರೆ ಯೋಜನೆ ಸ್ಥಗಿತಗೊಳಿಸಿದ್ದಾರೆ. ಲೋಕೊಪಯೋಗಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಮಳೆಗಾಲದ ಹೊಂಡ ತುಂಬಲು ಅನುದಾನ ಬಂದಿಲ್ಲ. ಕಳೆದ ೩ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ. ಗ್ಯಾರಂಟಿ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿಯೇ ಎಂದು ಪ್ರಶ್ನಿಸಿದರು.ಶಿರಸಿ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಚರಂಡಿಯಲ್ಲಿ ನೀರು ಹರಿಯುವ ಬದಲು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ರಸ್ತೆಗೆಲ್ಲವೂ ಹೊಂಡಮಯವಾಗಿದೆ. ಹೊಂಡ ಮುಕ್ತ ರಸ್ತೆ ಮಾಡಲು ಶಾಸಕರು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಿಕಟಪೂರ್ವ ಅಧ್ಯಕ್ಷ ನರಸಿಂಹ ಹೆಗಡೆ ಬಕ್ಕಳ, ಪ್ರಮುಖರಾದ ಆರ್.ವಿ. ಹೆಗಡೆ ಚಿಪಗಿ, ಶ್ರೀರಾಮ ನಾಯ್ಕ, ರವಿಚಂದ್ರ ಶೆಟ್ಟಿ ಇದ್ದರು.ಬಡವರು ಜೋಪಡಿಯಲ್ಲಿ ವಾಸಿಸುವಂತಾಗಿದೆವಿಶ್ವೇಶ್ವರ ಹೆಗಡೆ ಕಾಗೇರಿ ಸಭಾಧ್ಯಕ್ಷರಾಗಿದ್ದ ವೇಳೆ ಶಿರಸಿ- ಸಿದ್ದಾಪುರ ಕ್ಷೇತ್ರಕ್ಕೆ ಸುಮಾರು ೫ ಸಾವಿರ ವಸತಿ ಯೋಜನೆಯಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಮನೆಗಳನ್ನು ಮಂಜೂರಿ ಮಾಡಿದ್ದರು. ನಂತರ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದಕ್ಕೆ ಆದೇಶ ಪತ್ರ ವಿತರಿಸಲು ಸಾಧ್ಯವಾಗಿಲ್ಲ. ಬದಲಾದ ಸರ್ಕಾರ ಶಾಸಕರು ಆದೇಶ ಪತ್ರವನ್ನು ವಿತರಿಸಿದ್ದಾರೆ. ಮನೆ ಮಂಜೂರಿಯಾಗಿದೆ ಎಂದು ಫಲಾನುಭವಿಗಳು ಇದ್ದ ಹಳೆಯ ಮನೆಯನ್ನು ಕೆಡವಿ ಹೊಸ ಮನೆಗೆ ಅಡಿಪಾಯ ಹಾಕಿದ್ದಾರೆ. ಸರ್ಕಾರದಿಂದ ಹಣ ಬಿಡುಗಡೆಯಾಗದಿರುವುದರಿಂದ ಮನೆ ನಿರ್ಮಾಣ ಮುಂದುವರಿಸಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಅವರು ಜೋಪಡಿಯಲ್ಲಿ ವಾಸಿಸುವಂತಾಗಿದೆ. ಉರ್ದು ಶಾಲೆ ಸೋರುತ್ತಿದೆ ಎಂದು ಶಾಲೆ ಭೇಟಿ ನೀಡಿದ್ದಾರೆ. ಅದೇ ರೀತಿ ಬಡವರ ಮನೆಯೂ ಸೋರುತ್ತಿದೆ. ಅವರ ಮನೆಗೆ ಶಾಸಕರು ಯಾಕೆ ತೆರಳುತ್ತಿಲ್ಲ. ವಸತಿ ಯೋಜನೆಯ ಹಣ ಬಿಡುಗಡೆಯಾಗುವಂತೆ ಸರ್ಕಾರದ ಮೇಲೆ ಒತ್ತಡ ತರಲು ಶಾಸಕರು ಇಚ್ಛಾಶಕ್ತಿ ಪ್ರದರ್ಶಿಸಲಿ ಎಂದು ಆರ್.ಡಿ. ಹೆಗಡೆ ಆಗ್ರಹಿಸಿದರು.