ಹೆದ್ದಾರಿಯಲ್ಲಿ ಕಗ್ಗತ್ತಲು

| Published : Jan 08 2024, 01:45 AM IST

ಸಾರಾಂಶ

ಕಲಘಟಗಿ ಪಟ್ಟಣದ ಸೌಂದರ್ಯ ಹೆಚ್ಚಿಸಲು ಹಾಗೂ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಬೆಳಕಿನ ವ್ಯವಸ್ಥೆಗಾಗಿ ರಸ್ತೆ ಮಧ್ಯೆ ಲಕ್ಷಾಂತರ ಹಣ ಖರ್ಚು ಮಾಡಿ ಅಳವಡಿಸಿರುವ ವಿದ್ಯುತ್ ಕಂಬಗಳು ವಿದ್ಯುತ್‌ ಬೆಳಗುತ್ತಿಲ್ಲ.

- ಬೆಳಗದ ಹುಬ್ಬಳ್ಳಿ-ಕಾರವಾರ ಹೆದ್ದಾರಿ ವಿದ್ಯುತ್‌ ದೀಪಗಳು

ರಮೇಶ ಸೋಲಾರಗೊಪ್ಪ

ಕನ್ನಡಪ್ರಭ ವಾರ್ತೆ ಕಲಘಟಗಿ

ಪಟ್ಟಣದ ಮೂಲಕ ಹಾದು ಹೋಗಿರುವ ಹುಬ್ಬಳ್ಳಿ-ಕಾರವಾರ ರಾಷ್ಟ್ರಿಯ ಹೆದ್ದಾರಿ-63ರಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ಭೌತಿಕವಾಗಿವಿಯೇ ಹೊರತು ರಸ್ತೆ ಸ್ಪಷ್ಟವಾಗಿ ಕಾಣುವಂತೆ ಬೆಳಕು ನೀಡುತ್ತಿಲ್ಲ. ದೀಪಗಳು ಬೆಳಗದೆ ಸೈಕಲ್ ಸವರಾರು, ಪಾದಚಾರಿಗಳು ಕತ್ತಲಿನಲ್ಲಿ ಸಂಚಾರ ಮಾಡುವಂತಾಗಿದೆ.

ಐದು ವರ್ಷಗಳ ಹಿಂದೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ-ಕಾರವಾರ 4 ಕಿಮೀ ರಸ್ತೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದಿಂದ ₹ 37 ಕೋಟಿ ಅನುದಾನದಲ್ಲಿ ಅಗಲೀಕರಣವಾಗಿದೆ. ಪಟ್ಟಣದ ಸೌಂದರ್ಯ ಹೆಚ್ಚಿಸಲು ಹಾಗೂ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಬೆಳಕಿನ ವ್ಯವಸ್ಥೆಗಾಗಿ ರಸ್ತೆ ಮಧ್ಯೆ ಲಕ್ಷಾಂತರ ಹಣ ಖರ್ಚು ಮಾಡಿ ಅಳವಡಿಸಿರುವ ವಿದ್ಯುತ್ ಕಂಬಗಳು ವಿದ್ಯುತ್‌ ಬೆಳಗುತ್ತಿಲ್ಲ. ಸಾರ್ವಜನಿಕರು ನಿತ್ಯ ಮೊಬೈಲ್ ಟಾರ್ಜ್‌ ಹಿಡಿದು ಓಡಾಡುವ ಪರಿಸ್ಥಿತಿ ಇದೆ. ಜನದಟ್ಟನೆಯ ಕೇಂದ್ರದಲ್ಲಿ ರಾತ್ರಿ ವೇಳೆ ಕತ್ತಲು ಆವರಿಸುವಂತಾಗಿದೆ.

ಇದೆಲ್ಲ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಗೊತ್ತಿದ್ದರೂ ತಮಗೆ ಸಂಬಂಧವಿಲ್ಲದಂತೆ ಮೌನವಾಗಿದ್ದಾರೆ. ಕೆಲವು ಕಂಬಗಳಲ್ಲಿನ ದೀಪಗಳು ಕಿತ್ತು ಬಿದ್ದಿವೆ. ಇಲ್ಲಿ ಕತ್ತಲು ಆವರಿಸುತ್ತಿರುವುದರಿಂದ ಅಪಘಾತಗಳಾಗುತ್ತಿವೆ. ಆದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಪಟ್ಟಣದ ಜನರ ಆರೋಪವಾಗಿದೆ.

ಈ ರಸ್ತೆಯಲ್ಲಿ ಜನರು ಭಯದಲ್ಲಿ ಸಂಚರಿಸುತ್ತಿದ್ದಾರೆ. ರಸ್ತೆ ಮಧ್ಯೆ ಹುಲ್ಲು, ಕಸ ಬೆಳೆದು ಸ್ವಚ್ಛತೆ ಇಲ್ಲದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಪಟ್ಟಣದ ಯುವ ಮುಖಂಡ ಮಂಜುನಾಥ್ ಭೋವಿ ಆಗ್ರಹಿಸಿದ್ದಾರೆ.

ಈಗಾಗಲೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವಿದ್ಯುತ್ ದೀಪಗಳು ಹಾಗೂ ಸ್ವಚ್ಛತೆ ಕೈಗೊಳ್ಳಲ್ಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರಿಯ ಹೆದ್ದಾರಿ ವಿಭಾಗದ ಎಂಜಿನಿಯರ್‌ ಹರೀಶ್ ಬಂಡಿವಡ್ಡರ ತಿಳಿಸಿದ್ದಾರೆ.