ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪರಿಕಲ್ಪನೆಯಂತೆ ಗ್ರಾಮಾಭಿವೃದ್ಧಿ ಯೋಜನೆಯು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮತ್ತು ಅವರ ಕುಟುಂಬಗಳಿಗೆ ವಿಮಾ ಭದ್ರತೆ ನೀಡುವ ಸೇವೆಯನ್ನು ಕಳೆದ ಎರಡು ದಶಕಗಳಿಂದ ಮಾಡುತ್ತಾ ಬಂದಿದೆ. ಸಂಪೂರ್ಣ ಸುರಕ್ಷಾ/ ಆರೋಗ್ಯ ರಕ್ಷಾ ವಿಮಾ ಯೋಜನೆ, ಯೋಜನೆಯ ಸದಸ್ಯರ ಸಾಲಗಳಿಗೆ ಭದ್ರತೆಗಾಗಿ ‘ಪ್ರಗತಿ ರಕ್ಷಾ ಕವಚ’, ಎನ್.ಪಿ.ಎಸ್, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಭಾರತೀಯ ಜೀವ ವಿಮಾ ನಿಗಮದ ಸಹಯೋಗದೊಂದಿಗೆ ಜೀವನಮಧುರ / ಭಾಗ್ಯಲಕ್ಷ್ಮೀ , ಮೈಕ್ರೋಬಚತ್ ಮತ್ತು ಭಿಮಾ ಜ್ಯೋತಿ ಮುಂತಾದ ಹಲವಾರು ವಿಮಾ/ಪಿಂಚಣಿ ಸೌಲಭ್ಯಗಳ ಪ್ರಯೋಜನವನ್ನು ಈಗಾಗಲೇ ರಾಜ್ಯದ ಸುಮಾರು 26,20,304 ರಷ್ಟು ಮಂದಿ ಪಡೆದಿರುತ್ತಾರೆ.

ಯೋಜನೆಯ ಸಂಘಗಳ ಸದಸ್ಯರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ 2007 ರಿಂದ ಗ್ರಾಮಾಭಿವೃದ್ಧಿ ಯೋಜನೆಯು ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಕಡಿಮೆ ಪ್ರೀಮಿಯಂನ ವಿಶೇಷ ಪಾಲಿಸಿಗಳನ್ನು ಪರಿಚಯಿಸಲಾಗುತ್ತಿದೆ. ಪ್ರಸ್ತುತ ‘ ಮೈಕ್ರೋಬಚತ್’ ಮತ್ತು ‘ಭಿಮಾ ಜ್ಯೋತಿ’ ಎಂಬ ಹೆಸರಿನ ಎರಡು ಪಾಲಿಸಿಗಳ ಪ್ರಯೋಜನವನ್ನು ಸದಸ್ಯರು ಪಡೆಯುತ್ತಿದ್ದಾರೆ.ಮೈಕ್ರೋಬಚತ್ ಪಾಲಿಸಿಯಡಿ “ವಿಮಾ ಗ್ರಾಮ” ಗಳನ್ನು ಗುರುತಿಸುವ ವಿಶೇಷ ಕಾರ್ಯವನ್ನು ಭಾರತೀಯ ಜೀವ ವಿಮಾ ನಿಗಮವು ಮಾಡುತ್ತಿದೆ. ಈಗಾಗಲೇ ರಾಜ್ಯದಾದ್ಯಂತ 15,92,889 ಮಂದಿ ಮೈಕ್ರೋಬಚತ್ ಪಾಲಿಸಿಗಳನ್ನು ಮಾಡಿಸಿರುತ್ತಾರೆ.ವಿಮಾ ಗ್ರಾಮಪ್ರತಿ ಗ್ರಾಮದ ಜನಸಂಖ್ಯೆ ಮತ್ತು ಅಲ್ಲಿ ಮಾಡಲಾದ ಮೈಕ್ರೋಬಚತ್ ಪಾಲಿಸಿಯ ಆಧಾರದಲ್ಲಿ ವಿಮಾ ಗ್ರಾಮಗಳನ್ನು ಗುರುತಿಸುವ ಕೆಲಸವನ್ನು ಭಾರತೀಯ ಜೀವ ವಿಮಾ ನಿಗಮ ಮಾಡುತ್ತದೆ.ವಿಮಾ ಗ್ರಾಮದ ಸೌಲಭ್ಯ ಪಡೆಯಲು ಮಾನದಂಡಗಳು: ಗ್ರಾಮದ ಜನಸಂಖ್ಯೆ 10,000 ಕ್ಕಿಂತ ಕಡಿಮೆ ಇರಬೇಕು, ಸಂಬಂಧಿತ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ಹೊಸ ಪಾಲಿಸಿಗಳಾಗಿರಬೇಕು, ಸಂಬಂಧಿತ ಆರ್ಥಿಕ ವರ್ಷದಲ್ಲಿ 5,00,000 ರು. ಮೊತ್ತ ಪ್ರೀಮಿಯಂ ಸಂಗ್ರಹವಾಗಿದ್ದಲ್ಲಿ ಕನಿಷ್ಟ 50 ಹೊಸ ಪಾಲಿಸಿಗಳಾಗಿರಬೇಕು.ಈವರೆಗೆ ನೀಡಲಾದ ಸೌಲಭ್ಯಗಳು : ಈಗಾಗಲೇ 2019 ರಿಂದ ರಾಜ್ಯದಾದ್ಯಂತ 365 ವಿಮಾ ಗ್ರಾಮಗಳನ್ನು ಗುರುತಿಸಲಾಗಿದೆ. ಆಯ್ಕೆಯಾದ ಗ್ರಾಮಗಳಿಗೆ ಒಂದು ಘಟಕಕ್ಕೆ 50,000 ರು. ದಿಂದ 1,00,000 ರು. ದವರೆಗಿನ ವೆಚ್ಚದಲ್ಲಿ ಯಾವುದಾದರೂ ಒಂದು ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ಶಾಲೆ / ಗ್ರಾಮ ಪಂಚಾಯತ್/ ದೇವಸ್ಥಾನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ (ನೀರಿನ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ), ಶಾಲೆಗಳಿಗೆ ಶೌಚಾಲಯ ಹಾಗೂ ಪೀಠೋಪಕರಣ, ಸೋಲಾರ್ ದಾರಿದೀಪ ವ್ಯವಸ್ಥೆ ಒಳಗೊಂಡಿದೆ.