ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ ಪ್ರಯುಕ್ತ ಸೋಮವಾರ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ ನೆರವೇರಿತು. ಬಳಿಕ ಶ್ರೀ ದೇವರ ಉತ್ಸವಮೂರ್ತಿಯ ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ಹಾಗೂ ಧ್ವಜಮರ ಅವರೋಹಣ ವಿಧಿವಿಧಾನಗಳೊಂದಿಗೆ ಉತ್ಸವಮೂರ್ತಿಯು ಗರ್ಭಗುಡಿಗೆ ಪ್ರವೇಶಿಸುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಸೇವೆಗಳು ಮತ್ತು ಉತ್ಸವಗಳು ಸಮಾಪ್ತಿಗೊಂಡವು.ಕಾರ್ತಿಕ ಮಾಸದ ದೀಪೋತ್ಸವದೊಂದಿಗೆ ಎಂದಿನಂತೆ ವಿಶೇಷ ಸೇವೆಗಳು ಹಾಗೂ ಉತ್ಸವಗಳು ಪುನರಾರಂಭಗೊಳ್ಳಲಿವೆ. ಸೋಮವಾರದ ಕಾರಣ ಕ್ಷೇತ್ರದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಊರು-ಪರ ಊರುಗಳಿಂದ ಆಗಮಿಸಿದ ಸಾವಿರಾರು ಭಕ್ತರು ಉತ್ಸವಗಳಲ್ಲಿ ಪಾಲ್ಗೊಂಡರು.

ಯಕ್ಷಗಾನ ಮೇಳದ ತಿರುಗಾಟ ಸಮಾಪ್ತಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟವೂ ಇದೇ ಸಂದರ್ಭದಲ್ಲಿ ಸಮಾಪ್ತಿಗೊಂಡಿತು. ಈ ಅಂಗವಾಗಿ ಮೇಳದ ಶ್ರೀ ಮಹಾಗಣಪತಿ ದೇವರಿಗೆ ಧರ್ಮಸ್ಥಳದ ಮಂಜುಕೃಪಾದಲ್ಲಿ ಮಧ್ಯಾಹ್ನ ಗಣಯಾಗ ಹಾಗೂ ಮಹಾಪೂಜೆ ನೆರವೇರಿಸಲಾಯಿತು.

ಸಂಜೆ ಮಹಾಪೂಜೆಯ ನಂತರ ಕ್ಷೇತ್ರದ ಸಕಲ ಗೌರವಗಳೊಂದಿಗೆ ಶ್ರೀ ಮಹಾಗಣಪತಿ ದೇವರನ್ನು ಭವ್ಯ ಶೋಭಾಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಆನೆಗಳು, ಬಸವ, ಕೇರಳದ ಚೆಂಡೆ ವಾದ್ಯ ಬಳಗ, ಜಾಗಟೆ ಹಾಗೂ ವಿವಿಧ ವಾದ್ಯಮೇಳಗಳ ವೈಭವದ ನಡುವೆ ನಡೆದ ಮೆರವಣಿಗೆಯಲ್ಲಿ ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡರು. ಬಳಿಕ ಶ್ರೀ ದೇವರ ದರ್ಶನ ಸೇವೆ ನೆರವೇರಿಸಿ, ಛತ್ರ ಗಣಪತಿ ಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪಾರುಪತ್ಯೆದಾರ ಲಕ್ಷ್ಮೀನಾರಾಯಣ ರಾವ್, ಮೇಳದ ವ್ಯವಸ್ಥಾಪಕ ಗಿರೀಶ್ ಹೆಗ್ಡೆ, ಯಕ್ಷಗಾನ ಕಲಾವಿದರು, ಕ್ಷೇತ್ರದ ಸಿಬ್ಬಂದಿ ಭಾಗವಹಿಸಿದ್ದರು.ಸೇವೆಯಾಟ ಮಂಗಳವಾರದಿಂದ ಮೂರು ದಿನಗಳ ಕಾಲ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಸೇವೆಯಾಟ ಆರಂಭಗೊಂಡಿದ್ದು, ನಡೆಯಲಿದ್ದು, ಕಲಾವಿದರು ಸಂಪ್ರದಾಯಬದ್ಧವಾಗಿ ಗೆಜ್ಜೆ ಬಿಚ್ಚುವ ಮೂಲಕ ಪ್ರಸಕ್ತ ಸಾಲಿನ ವಾರ್ಷಿಕ ತಿರುಗಾಟಕ್ಕೆ ಮಂಗಳ ಹಾಡಲಿದ್ದಾರೆ.