ದರೋಜಿ ಕರಡಿಧಾಮ: ಅಪರೂಪದ ನಿಶಾಚರ ಕುರುಡುಗಪ್ಪಟ ಪಕ್ಷಿ ಪತ್ತೆ

| Published : Nov 11 2025, 02:30 AM IST

ಸಾರಾಂಶ

ನೆಲದಲ್ಲಿ ಗೂಡುಕಟ್ಟಿ ಮರದಲ್ಲಿ ವಿಶ್ರಮಿಸುವ ಈ ಪಕ್ಷಿ ಈ ಭಾಗದಲ್ಲಿ ಇದೇ ಮೊದಲು ಕ್ಯಾಮರಾದಲ್ಲಿ ದಾಖಲಾಗಿದೆ.

ಹೊಸಪೇಟೆ: ಅಪರೂಪದ ದಕ್ಷಿಣ ಏಷ್ಯಾ ಸವನ್ನಾ ನಿಶಾಚರ ಕುರುಡುಗಪ್ಪಟ (ನೈಟ್ ಜಾರ್) ಪಕ್ಷಿ ದರೋಜಿ ಕರಡಿಧಾಮ ಪ್ರದೇಶದಲ್ಲಿ ಪತ್ತೆಯಾಗಿದೆ.

ಪಕ್ಷಿ ವೀಕ್ಷಣೆಯ ಪ್ರವಾಸಿ ಸಂಘಟನೆ ‘ನೇಚರ್ ಇಂಡಿಯಾ ಮುಂಬಯಿ’ನ ಪ್ರಸಿದ್ಧ ಪಕ್ಷಿ ವೀಕ್ಷಕ ಆದೇಶ್ ಶಿವಕರ್ ಮತ್ತವರ ತಂಡವು ಈಚೆಗೆ ದರೋಜಿ ಕರಡಿಧಾಮದ ಭಾಗದಲ್ಲಿ ಪಕ್ಷಿ ಶೋಧ, ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ತಂಡದ ಅಂಜಲಿ ಕೇಲ್ಕರ್ ಅವರು ತಮ್ಮ ಕ್ಯಾಮರಾದಲ್ಲಿ ಈ ಪಕ್ಷಿಯ ಚಿತ್ರವನ್ನು ಸೆರೆಹಿಡಿದಿದ್ದಾರೆ.ನೆಲದಲ್ಲಿ ಗೂಡುಕಟ್ಟಿ ಮರದಲ್ಲಿ ವಿಶ್ರಮಿಸುವ ಈ ಪಕ್ಷಿ ಈ ಭಾಗದಲ್ಲಿ ಇದೇ ಮೊದಲು ಕ್ಯಾಮರಾದಲ್ಲಿ ದಾಖಲಾಗಿದೆ. ಈ ಪ್ರಭೇದದ ನೈಟ್ ಜಾರ್ ಇರುವಿಕೆ ಹೊಸಪೇಟೆ ಸಮೀಪದ ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಇತ್ತಾದರೂ ಕೇವಲ ಅದರ ಸದ್ದನ್ನು ಮಾತ್ರ ಆಲಿಸಲಾಗಿತ್ತು. ಛಾಯಾಗ್ರಹಣದಲ್ಲಿ ಇದೇ ಮೊದಲು ಸೆರೆ ಸಿಕ್ಕಿರುವುದು ಅಚ್ಚರಿ ಸಂಗತಿಯಾಗಿದೆ. ದೊಡ್ಡ ಕಣ್ಣು ಮತ್ತು ಅತ್ಯುತ್ತಮ ಛದ್ಮವೇಷಧಾರಿಯಾದ ಇದು ಕೇವಲ ಇದರ ವಿಶಿಷ್ಟ ಧ್ವನಿಯಿಂದಲೇ ಪತ್ತೆಹಚ್ಚಲಾಗಿದೆಂದು ಪರಿಸರ ಪ್ರೇಮಿ, ಪಕ್ಷಿ ಮಾರ್ಗದರ್ಶಕ ಪಂಪಯ್ಯ ಮಳೆಮಠ ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪಾಕಿಸ್ತಾನದಿಂದ ಇಂಡೋನೇಷ್ಯಾದವರೆಗೆ ವ್ಯಾಪಕ ಆವಾಸಸ್ಥಾನ ಹೊಂದಿರುವ ಈ ಪಕ್ಷಿ ಚೀನಾ, ಪಾಕಿಸ್ತಾನ, ಉತ್ತರ ಭಾರತ ಮತ್ತು ತೈವಾನದಲ್ಲಿ ಹೆಚ್ಚು ಕಂಡು ಬರುತ್ತದೆ.