ಹಲಗೂರಿನಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಮಂಡ್ಯದ ಸ್ವಾಭಿಮಾನ ಉಳಿಸಲು ದರ್ಶನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ. ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ವಿಜಯಮಾಲೆ ಮಂಡ್ಯದಲ್ಲಿ ದೊರೆಯಲಿದೆ ಎಂದು ವಿಶ್ವಾಸದಿಂದ ಹೇಳಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ನಟ ದರ್ಶನ್‌ ಹಲಗೂರು ಸೇರಿ ಮಳವಳ್ಳಿ ತಾಲೂಕಿನಾದ್ಯಂತ ಅದ್ಧೂರಿ ಪ್ರಚಾರ ನಡೆಸಿದರು.

ಹಲಗೂರು ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಜೈಕಾರದ ಘೋಷಣೆ ಮೊಳಗಿಸಿದರು. ‘ಡಿ-ಬಾಸ್’, ‘ಡಿ-ಬಾಸ್’ ಘೋಷಣೆ ಕೂಗಿ ಅಭಿಮಾನ ಪ್ರದರ್ಶಿಸಿದರು. ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ನಟ ದರ್ಶನ್ ಅವರಿಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಗುಲಾಬಿ ಹೂವಿನ ಹಾರ ಹಾಕಿ ಸ್ವಾಗತಿಸಿದರು.

ನನಗೂ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ನಾನು ವ್ಯಕ್ತಿ ನೋಡಿ ಬರುವವನೇ ಹೊರತು ಪಕ್ಷ ನೋಡಿ ಅಲ್ಲ. ಐದು ವರ್ಷದ ಹಿಂದೆ ಶಾಸಕ ನರೇಂದ್ರಸ್ವಾಮಿ ಅವರು ಮಾಡಿದ ಸಹಾಯ ಮರೆಯುವಂತಿಲ್ಲ. ಅವರೂ ಸೇರಿ ಮದ್ದೂರು ಶಾಸಕ ಕೆ.ಎಂ.ಉದಯ್ ಅವರ ಕೋರಿಕೆ ಮೇಲೆ ನಾನಿಲ್ಲಿಗೆ ಬಂದಿದ್ದೇನೆ. ಜಿಲ್ಲಾ ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಸ್ಟಾರ್ ಚಂದ್ರು ಅವರಿಗೆ ಮತ ಹಾಕುವಂತೆ ಅಭಿಮಾನಿಗಳಲ್ಲಿ ಸಾರ್ವಜನಿಕರಲ್ಲಿ ಮತ ಯಾಚಿಸಿದರು.

ಹಲಗೂರಿನಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ, ಮಂಡ್ಯದ ಸ್ವಾಭಿಮಾನ ಉಳಿಸಲು ದರ್ಶನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ. ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ವಿಜಯಮಾಲೆ ಮಂಡ್ಯದಲ್ಲಿ ದೊರೆಯಲಿದೆ ಎಂದು ವಿಶ್ವಾಸದಿಂದ ಹೇಳಿದರು.

ದರ್ಶನ್ ಅಭಿಮಾನಿಗಳ ಶಕ್ತಿ ಕಾಂಗ್ರೆಸ್‌ಗೆ ಸಿಗಬೇಕು. ಆದ್ದರಿಂದ ನಮ್ಮ ಪಕ್ಷದ ಹಲವಾರು ಗ್ಯಾರಂಟಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಲ್ಲಿ ಮತಯಾಚಿಸಿದರು.

ನಂತರ ತೆರೆದ ವಾಹನದಲ್ಲಿ ಹುಸ್ಕೂರಿಗೆ ತೆರಳುವಾಗ ದಾರಿ ಉದ್ದಕ್ಕೂ ಸಿಗುವ ಗ್ರಾಮಗಳಲ್ಲಿ ನಟ ದರ್ಶನ್ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾದು ನಿಂತಿದ್ದರು. ಪ್ರತಿ ಗ್ರಾಮದಲ್ಲಿಯೂ ದರ್ಶನ್ ಗೆ ಅದ್ದೂರಿ ಸ್ವಾಗತ. ಅಭಿಮಾನಿಗಳಿಂದ ಜೈಕಾರ ಘೋಷಣೆ ಮೊಳಗಿದವು.

ನಟ ದರ್ಶನ್ ಜೊತೆ ಪೋಟೋ ತೆಗೆದುಕೊಳ್ಳಲು ಟಿ.ಕೆ.ಹಳ್ಳಿಯಲ್ಲಿ ಮಹಿಳೆಯೊಬ್ಬರು ತೆರೆದ ವಾಹನವನ್ನು ಏರಿದರಲ್ಲದೆ, ನೆಚ್ಚಿನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಹುಸ್ಕೂರಿಗೆ ಹೋಗುವ ಮಾರ್ಗ ಮಧ್ಯ ಸಿಗುವ ಅಂತರಳ್ಳಿ ಗ್ರಾಮದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾದು ನಿಂತಿದ್ದರು. ದರ್ಶನ್ ಕಾರಿನಿಂದಲೇ ಅವರಿಗೆ ಹಸ್ತಲಾಘವ ಮಾಡಿ ನಂತರ ರೋಡ್ ಶೋ ಮುಖಾಂತರ ಹುಸ್ಕೂರು ಗ್ರಾಮದಲ್ಲಿ ಮತ ಯಾಚಿಸಿದರು.

ಶಾಸಕರಾದ ಕೆ.ಎಂ.ಉದಯ್‌, ಮರಿತೀಬ್ಬೆಗೌಡ, ಮಧು ಮಾದೇಗೌಡ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಯಾಚಿಸಿದರು. ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಕ್ಷಿತಾ, ಉಪಾಧ್ಯಕ್ಷೆ ಲತಾ, ಜಿಲ್ಲಾ ಮಾಜಿ ಸದಸ್ಯ ಚಂದ್ರಕುಮಾರ್, ಟಿ.ಕೆ.ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್‌.ಕೆ.ತೇಜ್ ಕುಮಾರ್ (ಶ್ಯಾಮ್) ಎಚ್.ವಿ. ರಾಜು, ಸೇರಿದಂತೆ ಇತರರಿದ್ದರು.