ದರ್ಶನ್‌ ಮಗ ಇದ್ದಂತೆ, ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ: ಸುಮಲತಾ

| Published : Jul 05 2024, 12:51 AM IST

ದರ್ಶನ್‌ ಮಗ ಇದ್ದಂತೆ, ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ: ಸುಮಲತಾ
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ದೊರಕಬೇಕು. ಕೊಲೆಯಂತಹ ಕೃತ್ಯ ಮಾಡುವ ವ್ಯಕ್ತಿತ್ವ ನಟ ದರ್ಶನ್ ಅವರದ್ದಲ್ಲ ಎಂಬುದಾಗಿ ನಂಬಿದ್ದೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ದೊರಕಬೇಕು. ಕೊಲೆಯಂತಹ ಕೃತ್ಯ ಮಾಡುವ ವ್ಯಕ್ತಿತ್ವ ನಟ ದರ್ಶನ್ ಅವರದ್ದಲ್ಲ ಎಂಬುದಾಗಿ ನಂಬಿದ್ದೇನೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಹೇಳಿದ್ದಾರೆ.

ಅಲ್ಲದೆ, ಈ ಅಪರಾಧದಲ್ಲಿ ಅವರು ಆರೋಪಿಯಾಗಿ ನಿಂತಿರುವುದನ್ನು ನೋಡುವುದು ತಾಯಿಯಾಗಿ ನೋವಿನ ಸಂಗತಿ ಎಂದೂ ಅವರು ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಅವರು, ಈ ಘಟನೆ ಅರ್ಥೈಸಿಕೊಳ್ಳಲು ಸಾಧ್ಯವಾಗದೆ ಹಲವು ದಿನ ನೋವಿನಲ್ಲಿದ್ದೆ. ನನ್ನ ಮೌನದ ಬಗ್ಗೆ ಕಾಮೆಂಟ್ ಮಾಡುತ್ತಿರುವವರು ನನ್ನ ಮತ್ತು ದರ್ಶನ್‌ ಕುಟುಂಬದ ಬಾಂಧವ್ಯ ಅರ್ಥ ಮಾಡಿಕೊಂಡಿಲ್ಲ ಎಂದರು.

ದರ್ಶನ್‌ ಯಾವಾಗಲೂ ನನಗೆ ಮಗನಂತೆ. ದರ್ಶನ್ ಸ್ಟಾರ್ ಮತ್ತು ಸೂಪರ್‌ಸ್ಟಾರ್ ಆಗುವ ಮೊದಲು ನಾನು ಅವರನ್ನು 25 ವರ್ಷಗಳಿಂದ ಬಲ್ಲೆ. ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸಲ್ಲ. ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಂಬಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ದರ್ಶನ್ ಜೊತೆಗೆ ಅವನ ಪತ್ನಿ ವಿಜಯಲಕ್ಷ್ಮಿ ಮತ್ತು ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯ. ಇತರೆ ಆರೋಪಿಗಳ ಬಡ ಕುಟುಂಬಗಳು ಕೂಡ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿ. ದರ್ಶನ್ ವಿರುದ್ಧದ ಆರೋಪ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ಈ ವಿಚಾರದಲ್ಲಿ ಅವರಿಗೆ ಅವರ ನಿಲುವು, ಸತ್ಯಾಸತ್ಯ ಸ್ಪಷ್ಟಪಡಿಸುವ ಅವಕಾಶ ಇರಲಿ ಎಂದರು.

ಚಿತ್ರರಂಗದ ಸಾವಿರ ಜನರ ಜೀವನೋಪಾಯ ದರ್ಶನ್‌ ಚಲನಚಿತ್ರ ನಿರ್ಮಾಣಗಳ ಮೇಲೆ ಅವಲಂಬಿತವಾಗಿದೆ. ಅವರ ತಾಯಿಯಾಗಿ ಸತ್ಯ ಹೊರಬರಲಿ ಮತ್ತು ಎಲ್ಲರಿಗೂ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ದರ್ಶನ್ ಅಭಿಮಾನಿಗಳು ಯಾವುದೇ ನಕಾರಾತ್ಮಕತೆಗೆ ಪ್ರತಿಕ್ರಿಯಿಸಬಾರದು ಎಂದು ಸುಮಲತಾ ಹೇಳಿದರು.