ಹುಬ್ಬಳ್ಳಿಯಲ್ಲೀಗ ಶಿರಸಿ ಮಾರಿಕಾಂಬೆಯ ದರ್ಶನ

| Published : Sep 14 2024, 01:55 AM IST

ಸಾರಾಂಶ

ಮೊದಲು ಸಣ್ಣ ಪ್ರಮಾಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿತು. ದಿ. ಜಿ.ಆರ್‌. ಕಂಪ್ಲಿ ಅವರು ಮಂಡಳದ ಅಧ್ಯಕ್ಷರಾದ ಬಳಿಕ 1986ರಿಂದ ಪ್ರತಿ ವರ್ಷವೂ ವಿಭಿನ್ನ ರೀತಿಯ ದೃಶ್ಯಾವಳಿ ಪ್ರದರ್ಶಿಸಿಕೊಂಡು ಬರಲಾಗುತ್ತಿದೆ.

ಹುಬ್ಬಳ್ಳಿ:

ಇಲ್ಲಿನ ಸ್ಟೇಷನ್‌ ರಸ್ತೆಯ ಶ್ರೀಗಣೇಶೋತ್ಸವ ಮಂಡಳಿಯು ಕಳೆದ 48 ವರ್ಷಗಳಿಂದ ಪ್ರತಿವರ್ಷವೂ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ರೂಪಕ ದೃಶ್ಯಾವಳಿ ಪ್ರಸ್ತುತ ಪಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತಿ ವರ್ಷವೂ ಜನರ ಅಭಿರುಚಿಗೆ ತಕ್ಕಂತೆ ವಿಶಿಷ್ಟವಾಗಿರುವ ದೃಶ್ಯಾವಳಿಗಳ ಪ್ರದರ್ಶನ ಮಾಡುವ ಮೂಲಕ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಈ ಗಣೇಶೋತ್ಸವ ಮಂಡಳಿಯು ಈ ಬಾರಿ ಹುಬ್ಬಳ್ಳಿಯ ಜನತೆಗೆ ಶಿರಸಿ ಮಾರಿಕಾಂಬೆಯ ಜೀವನ ಚರಿತ್ರೆ ತಿಳಿಸುವ ಕಾರ್ಯ ಕೈಗೊಂಡಿದೆ. ನಿತ್ಯವೂ 15 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಮಾರಿಕಾಂಬೆಯ ಜೀವನ ದರ್ಶನ ಮಾಹಿತಿ ಪಡೆಯುತ್ತಿದ್ದಾರೆ.

1976ರಲ್ಲಿ ಪ್ರಾರಂಭ:

ಈ ಮಂಡಳಿಯು 1976ರಿಂದ ಪ್ರಾರಂಭವಾಯಿತು. ಮೊದಲು ಸಣ್ಣ ಪ್ರಮಾಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿತು. ದಿ. ಜಿ.ಆರ್‌. ಕಂಪ್ಲಿ ಅವರು ಮಂಡಳದ ಅಧ್ಯಕ್ಷರಾದ ಬಳಿಕ 1986ರಿಂದ ಪ್ರತಿ ವರ್ಷವೂ ವಿಭಿನ್ನ ರೀತಿಯ ದೃಶ್ಯಾವಳಿ ಪ್ರದರ್ಶಿಸಿಕೊಂಡು ಬರಲಾಗುತ್ತಿದೆ. ಕಂಪ್ಲಿ ಅವರೇ 42 ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರೆದಿದ್ದರು. ಅವರು ನಿಧನರಾದ ನಂತರ ಹಿಂದೆ 26 ವರ್ಷಗಳಿಂದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ ಬೋಚಗೇರಿ ಅವರು ಕಳೆದ 2 ವರ್ಷಗಳಿಂದ ಮಂಡಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶೇಷ ರೂಪಕ ಪ್ರದರ್ಶನ:

1986ರಿಂದ ಪ್ರಸಕ್ತ ಸಾಲಿನ ವರೆಗೂ ಯಶಸ್ವಿ ಕಾರ್ಯ ಕೈಗೊಂಡಿದ್ದು, ಮಂಡಳದಿಂದ ಪ್ರಥಮ ಬಾರಿಗೆ ವೈಕುಂಠ ದರ್ಶನದ ದೃಶ್ಯಾವಳಿ ಪ್ರಸ್ತುತಪಡಿಸಲಾಯಿತು. ನಂತರ 87ರಲ್ಲಿ ಕೈಲಾಸ, 88ರಲ್ಲಿ ಮಹಾಭಾರತ, 89ರಲ್ಲಿ ರಾಮಾಯಣ, 90ರಲ್ಲಿ ಶ್ರೀ ಸತ್ಯನಾರಾಯಣ, 91ರಲ್ಲಿ ಶಿವಾಜಿ ರಾಯಘಡ ಕೋಟೆ ಹೀಗೆ 2022ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ, 2023ರಲ್ಲಿ ಪಂಡರಪುರದ ಪಾಂಡುರಂಗ ವಿಠ್ಠಲ, ಈ ಬಾರಿ ಶಿರಸಿ ಮಾರಿಕಾಂಬಾ ಜೀವನ ಚರಿತ್ರೆ ಕುರಿತು ರೂಪಕ ದೃಶ್ಯಾವಳಿ ಪ್ರಸ್ತುತಪಡಿಸಲಾಗುತ್ತಿದೆ.

ಈ ಎಲ್ಲ ಕಾರ್ಯಗಳ ಯಶಸ್ಸಿಗೆ ಮಂಡಳಿಯ ಉಪಾಧ್ಯಕ್ಷ ಶ್ರೀಧರ ದಿವಟೆ, ಗೌರವಾಧ್ಯಕ್ಷ ಕಾಶಿನಾಥ ನಿರಂಜನ, ಕಾರ್ಯಾಧ್ಯಕ್ಷ ಸುನಿಲ ವಾಳ್ವೇಕರ, ಕಾರ್ಯದರ್ಶಿ ಅಭಿಷೇಕ ಕಲ್ಯಾಣಮಠ ಸೇರಿದಂತೆ ಹಲವರು ಕೈಜೋಡಿಸಿದ್ದು, ಪ್ರತಿವರ್ಷವೂ ವಿಭಿನ್ನ ರೂಪಕಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.

ದಿ. ಜಿ.ಆರ್. ಕಂಪ್ಲಿ ಅವರ ಪ್ರೇರಣೆಯಂತೆ ಗಣೇಶೋತ್ಸವದಲ್ಲಿ ಪ್ರತಿವರ್ಷವೂ ಪೌರಾಣಿಕ, ಐತಿಹಾಸಿಕ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಈ ಅಭೂತಪೂರ್ವ ಕಾರ್ಯಕ್ಕೆ ಮಂಡಳಿಯ ಎಲ್ಲ ಸದಸ್ಯರು ಕೈಜೋಡಿಸಿದ್ದಾರೆ ಎಂದು ಶ್ರೀ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಬೋಚಗೇರಿ

ಹೇಳಿದರು.