ಸಾರಾಂಶ
ಬೆಂಗಳೂರು ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮ್ಮ ಭೇಟಿಗೆ ಆಗಮಿಸಿದ್ದ ನಟರು, ನಿರ್ದೇಶಕರು ಸೇರಿದಂತೆ ಚಿತ್ರರಂಗದ ಸ್ನೇಹಿತರನ್ನು ಕಾಣಲು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ತೂಗುದೀಪ ನಿರಾಕರಿಸಿದ್ದಾರೆ.
ದರ್ಶನ್ ಅವರನ್ನು ಭೇಟಿಯಾಗಲು ನಿರ್ದೇಶಕರಾದ ಜೋಗಿ ಪ್ರೇಮ್, ಕಾಟೇರ ತರುಣ್ ಸುಧೀರ್ ಹಾಗೂ ಕೆಲ ನಿರ್ಮಾಪಕರು ತೆರಳಿದ್ದರು. ಆದರೆ ತಮ್ಮ ಪತ್ನಿ ಹಾಗೂ ಪುತ್ರನ ಹೊರತುಪಡಿಸಿ ಇನ್ನುಳಿದವರನ್ನು ಭೇಟಿಯಾಗಲು ದರ್ಶನ್ ನಿರಾಕರಿಸಿದ್ದಾರೆ. ಹೀಗಾಗಿ ಜೈಲಿನಲ್ಲಿರುವ ತಮ್ಮ ಗೆಳೆಯನ ‘ದರ್ಶನ’ ಸಿಗದೆ ಚಲನಚಿತ್ರ ರಂಗದ ಬೇಸರದಲ್ಲಿ ಸ್ನೇಹಿತರು ಮರಳಿದ್ದಾರೆ ಎಂದು ತಿಳಿದು ಬಂದಿದೆ.
ವಾರದಲ್ಲಿ 2 ಬಾರಿ ಭೇಟಿಗೆ ಅವಕಾಶ
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಅವರ ಕುಟುಂಬದವರು ಹಾಗೂ ಸ್ನೇಹಿತರು ಸೇರಿದಂತೆ ಹೊರಗಿನವರಿಗೆ ವಾರದಲ್ಲಿ 2 ಬಾರಿ ಭೇಟಿಗೆ ಅವಕಾಶವಿದೆ. ಈ ನಿಯಮವೇ ದರ್ಶನ್‌ಗೂ ಅನ್ವಯವಾಗಲಿದೆ. ಈ ಹಿನ್ನಲೆಯಲ್ಲಿ ದರ್ಶನ್ ಭೇಟಿಗೆ ಬರುವ ಅವರ ಅಭಿಮಾನಿಗಳು ಸೇರಿ ಹೊರಗಿನವರಿಗೆ ಅನುಮತಿ ನೀಡುತ್ತಿಲ್ಲ ಎಂದು ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ.
ಜೈಲಿಗೆ ದರ್ಶನ್ ಆಗಮಿಸಿದ ಬಳಿಕ ಅವರನ್ನು ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿಯಾಗಿದ್ದರು. ಅದೇ ವೇಳೆ ದರ್ಶನ್ ಭೇಟಿಗೆ ನಟ ವಿನೋದ್ ಪ್ರಭಾಕರ್ ಸಹ ಬಂದಿದ್ದರು. ಆಗ ಅವರ ಜತೆ ತೆರಳಿ ವಿನೋದ್ ಭೇಟಿಯಾಗಿದ್ದರು. ಇದಾದ ಬಳಿಕ ಹೊರಗಿನವರನ್ನು ಕಾಣಲು ದರ್ಶನ್ ಒಲ್ಲೆ ಎನ್ನುತ್ತಿದ್ದಾರೆ.
ಮುಖ ತೋರಿಸಲು ದರ್ಶನ್ ಹಿಂಜರಿಕೆ ಕೊಲೆ ಆರೋಪ ಹೊತ್ತು ಜೈಲು ಸೇರಿದ ಬಳಿಕ ದರ್ಶನ್ ಮುಗುಮ್ಮಾಗಿದ್ದಾರೆ. ಯಾರೊಂದಿಗೆ ಹೆಚ್ಚಿನ ಮಾತುಕತೆ ಇಲ್ಲದೆ ಮೌನವಾಗಿದ್ದಾರೆ. ಜೈಲಿನಲ್ಲಿ ಪತ್ನಿ ಹಾಗೂ ಮಗನನ್ನು ನೋಡಿ ಭಾವುಕರಾಗಿದ್ದ ಅವರು, ಬೇರೆಯವರಿಗೆ ಮುಖ ತೋರಿಸಲು ಸಹ ಹಿಂದೇಟು ಹಾಕುತ್ತಿದ್ದಾರೆ. ನಾನು ಯಾರೊಂದಿಗೂ ಮಾತನಾಡಲ್ಲ ಎನ್ನುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನನ್ನ ಭೇಟಿಗೆ ಜೈಲಿಗೆ ಬರಬೇಡಿ: ದರ್ಶನ್
ತಮ್ಮನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಬರಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಕಾರಾಗೃಹದ ಭದ್ರತಾ ಸಿಬ್ಬಂದಿ ಮೂಲಕ ನಟ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಪ್ರತಿ ದಿನ ತಮ್ಮ ನೆಚ್ಚಿನ ನಟ ಕಾಣಲು ದಾವಣಗೆರೆ, ಕಲುಬರಗಿ ಹಾಗೂ ಬೀದರ್ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಸಖ್ಯಾಂತ ಅಭಿಮಾನಿಗಳು ಆಗಮಿಸುತ್ತಿದ್ದಾರೆ.