ಇಂದು ದರ್ಶನ್‌ ಪರಪ್ಪನ ಅಗ್ರಹಾರ ಜೈಲಿಗೆ?

| Published : Jun 22 2024, 12:46 AM IST / Updated: Jun 22 2024, 08:01 AM IST

ಇಂದು ದರ್ಶನ್‌ ಪರಪ್ಪನ ಅಗ್ರಹಾರ ಜೈಲಿಗೆ?
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 12 ದಿನಗಳಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಸತತ ವಿಚಾರಣೆ ಎದುರಿಸಿದ್ದ ನಟ ದರ್ಶನ್ ತೂಗುದೀಪ ಹಾಗೂ ಅವರ ನಾಲ್ವರು ಸಹಚರರು ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವುದು ಬಹುತೇಕ ಖಚಿತವಾಗಿದೆ.

 ಬೆಂಗಳೂರು;  ಕಳೆದ 12 ದಿನಗಳಿಂದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರಿಂದ ಸತತ ವಿಚಾರಣೆ ಎದುರಿಸಿದ್ದ ನಟ ದರ್ಶನ್ ತೂಗುದೀಪ ಹಾಗೂ ಅವರ ನಾಲ್ವರು ಸಹಚರರು ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವುದು ಬಹುತೇಕ ಖಚಿತವಾಗಿದೆ.

ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್ ಹಾಗೂ ಅವರ ಆಪ್ತರಾದ ವಿನಯ್‌, ಪ್ರದೂಷ್‌ ಹಾಗೂ ಧನರಾಜ್‌ರನ್ನು ಶನಿವಾರ ಹಾಜರುಪಡಿಸಲಾಗುತ್ತದೆ. ಈಗಾಗಲೇ ಪ್ರಕರಣದ ತನಿಖೆ ಸಲುವಾಗಿ ಮೂರು ಬಾರಿ ವಶಕ್ಕೆ ಪಡೆದಿರುವ ಕಾರಣ ಮತ್ತೊಮ್ಮೆ ಆರೋಪಿಗಳನ್ನು ಪೊಲೀಸರು ಸುಪರ್ದಿಗೆ ಪಡೆಯುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೊಳಗಾಗದರೆ ದರ್ಶನ್‌ ಗ್ಯಾಂಗ್ ಅಂತಿಮವಾಗಿ ಜೈಲು ಸೇರಲಿದೆ.

ನ್ಯಾಯಾಲಯದ ಮುಂದೆ ಗುರುವಾರ ದರ್ಶನ್‌ ಸೇರಿದಂತೆ ನಾಲ್ವರನ್ನು ಹಾಜರುಪಡಿಸಿ ಮತ್ತೆರೆಡು ದಿನ ಕಸ್ಟಡಿಗೆ ಪೊಲೀಸರು ಪಡೆದಿದ್ದರು. ಈ ಅವಧಿ ಮುಕ್ತಾಯವಾಗುವ ಹಿನ್ನಲೆಯಲ್ಲಿ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನು ಕಾನೂನಿನಲ್ಲಿ ಕೂಡ ಮತ್ತೆ ಕಸ್ಟಡಿಗೆ ಪಡೆಯಲು ಪೊಲೀಸರಿಗೆ ಅ‍ವಕಾಶವಿಲ್ಲ ಎನ್ನಲಾಗಿದೆ.

ಇನ್ನು ಈಗಾಗಲೇ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್‌ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 13 ಆರೋಪಿಗಳು ಸೆರೆಮನೆ ವಾಸ ಶುರುವಾಗಿದೆ. ಹೀಗಾಗಿ ಬಾಕಿ ಉಳಿದಿರುವ ದರ್ಶನ್ ಸೇರಿ ನಾಲ್ವರು ಸಹ ಶನಿವಾರ ಸಂಜೆ ವೇಳೆಗೆ ಪೊಲೀಸ್ ಠಾಣೆಯ ಲಾಕಪ್‌ನಿಂದ ಸೆಂಟ್ರಲ್ ಜೈಲ್‌ನ ಕತ್ತಲ ಕೋಣೆಗೆ ಸ್ಥಳಾಂತರವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯತಮೆ ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕ್ರೂರವಾಗಿ ಹಲ್ಲೆ ನಡೆಸಿ ಕೊಂದ ಆರೋಪದ ಮೇರೆಗೆ ನಟ ದರ್ಶನ್ ಹಾಗೂ ಅವರ 16 ಮಂದಿ ಸಹಚರರನ್ನು ಪೊಲೀಸರು ಬಂಧಿಸಿದ್ದರು.

ಪವಿತ್ರಾಗೌಡ ವಿಚಾರಣಾಧೀನ ಕೈದಿ ನಂ.6024:

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್‌ರವರ ಪ್ರಿಯತಮೆ ಪವಿತ್ರಾಗೌಡ ಈಗ ವಿಚಾರಣಾಧೀನ ಕೈದಿ ನಂ.6024 ಆಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಶುಕ್ರವಾರ ಜೈಲಿಗೆ ಆಗಮಿಸಿದ್ದ ಪವಿತ್ರಾ ಸೇರಿದಂತೆ 13 ಆರೋಪಿಗಳಿಗೆ ಕಾರಾಗೃಹ ಅಧಿಕಾರಿಗಳು ಯುಟಿಪಿ ನಂಬರ್ ನೀಡಿದ್ದಾರೆ. ಕಾರಾಗೃಹದ ಮಹಿಳಾ ಕೈದಿಗಳ ವಿಭಾಗದಲ್ಲಿ ಪವಿತ್ರಾಳಿಗೆ ಸೆಲ್‌ ನೀಡಲಾಗಿದ್ದು, ಇನ್ನುಳಿದ ಆರೋಪಿಗಳು ವಿಶೇಷ ಭದ್ರತಾ ವಿಭಾಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ.ಈ ಎಲ್ಲ ಆರೋಪಿಗಳಿಗೆ ಜೈಲಿಗೆ ಆಗಮಿಸಿದ ಕೂಡಲೇ ಮತ್ತೊಮ್ಮೆ ವೈದ್ಯಕೀಯ ತಪಾಸಣೆ ನಡೆಸಿ ಸೆಲ್‌ ಅನ್ನು ಕಾರಾಗೃಹದ ಅಧಿಕಾರಿಗಳು ವಿತರಿಸಿದ್ದಾರೆ.

ದರ್ಶನ್ ಕೊಲೆಗಡುಕ ಅಲ್ಲ: ಕೈ ಶಾಸಕ ಉದಯ್‌

‘ನಟ ದರ್ಶನ್‌ ಅವರದ್ದು ಸಿಡುಕು ಹಾಗೂ ಒರಟು ಸ್ವಭಾವ ನಿಜ. ಆದರೆ ಆತ ಕೊಲೆಗಡುಕ ಅಲ್ಲ’ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಉದಯ್‌ ಗೌಡ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದರ್ಶನ್‌ ಅವರದ್ದು ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ. ಸ್ವಲ್ಪ ಸಿಡುಕು ಮನೋಭಾವ ಹೊಂದಿದ್ದಾರೆ. ಸಹಜವಾಗಿಯೇ ರಫ್‌ ಅಂಡ್‌ ಟಫ್‌ ಆಗಿ ವರ್ತಿಸುತ್ತಿದ್ದರು. ಆದರೆ ಕೊಲೆಗಡುಕ ಅಲ್ಲ ಎಂದು ಹೇಳಿದರು.ಹತ್ಯೆಯಾಗಿರುವುದು ಖಂಡನೀಯ. ಆದರೆ ಪ್ರಕರಣದಲ್ಲಿ ದರ್ಶನ್‌ ಪಾತ್ರ ಏನು ಎಂಬುದು ತನಿಖೆಯಿಂದ ಅಷ್ಟೇ ಬಹಿರಂಗವಾಗಬೇಕು. ನನಗೂ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ನಿತ್ಯ ಮಾಧ್ಯಮಗಳಲ್ಲಿ ತೋರಿಸುವಷ್ಟೇ ನನಗೂ ಗೊತ್ತಿದೆ. ದರ್ಶನ್‌ ಮಾಡಿದ್ದಾರೆಯೇ ಅಥವಾ ಜೊತೆಗೆ ಇರುವವರು ಹತ್ಯೆ ಮಾಡಿ ಅದು ಇವರಿಗೂ ಸುತ್ತಿಕೊಂಡಿತೇ ಎಂಬುದು ಇನ್ನಷ್ಟೇ ತಿಳಿಯಬೇಕು ಎಂದು ಹೇಳಿದರು.

ನೀವು ನೋಡಿದಂತೆ ದರ್ಶನ್‌ ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿರುವಂತೆ ಕೊಲೆ ಮಾಡುವ ವ್ಯಕ್ತಿತ್ವ ಅವರದ್ದಲ್ಲ. ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾದಾಗ ಸಿಡುಕು ತೋರುತ್ತಿದ್ದರು. ನಿಮ್ಮ (ಮಾಧ್ಯಮಗಳ) ಮೇಲೂ ಹಲವು ಬಾರಿ ರೇಗಾಡಿದ್ದಾರೆ. ಅಷ್ಟೇ ಹೊರತು ಕೊಲೆ ಮಾಡುವಂತಹ ಕಟುಕ ಅಲ್ಲ ಎಂದು ಸಮರ್ಥಿಸಿಕೊಂಡರು.ನನ್ನ ಗನ್‌ಮೆನ್‌ ಮೇಲೆ ಹಲ್ಲೆ ಆರೋಪ ಸುಳ್ಳು:ದರ್ಶನ್‌ ಬೆಂಬಲಿಗರು ನನ್ನ ಗನ್‌ ಮ್ಯಾನ್‌ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಸುಳ್ಳು. ಇಂತಹ ಯಾವುದೇ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ಹೀಗಾಗಿ ನಾನು ಮಧ್ಯಸ್ಥಿಕೆ ವಹಿಸಿ ಇತ್ಯರ್ಥಪಡಿಸಿದ್ದೇನೆ ಎಂದೆಲ್ಲಾ ಬಿಂಬಿಸಿರುವುದು ಸುಳ್ಳು ಎಂದು ಶಾಸಕ ಉದಯ್‌ ಸ್ಪಷ್ಟಪಡಿಸಿದರು. ನನಗೆ ಐದಾರು ಮಂದಿ ಗನ್ ಮ್ಯಾನ್ ಬದಲಾಗಿದ್ದಾರೆ. ಯಾರ ಮೇಲೆ ಹಲ್ಲೆಯಾಗಿದೆ ಎಂಬುದು ಗೊತ್ತಿಲ್ಲ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಅದೆಲ್ಲವೂ‌ ಸುಳ್ಳು ಎಂದು ಸ್ಪಷ್ಟನೆ ನೀಡಿದರು.

ಶಾಸಕ ಉದಯ್‌ ಮನೆಯಲ್ಲೇ ದರ್ಶನ್‌ ಬಂಟರಿಂದ ಪೇದೆಗೆ ಥಳಿತ?

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್‌ ಬಂಟರು ಮದ್ದೂರು ಕ್ಷೇತ್ರದ ಶಾಸಕ ಉದಯ್‌ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದಿದ್ದರೂ ಆ ಪ್ರಕರಣವನ್ನು ಸದ್ದಿಲ್ಲದೆ ಮುಚ್ಚಿಹಾಕಿರುವ ಆರೋಪವೂ ಕೇಳಿಬಂದಿದೆ.

ಶಾಸಕ ಉದಯ್ ಗನ್ ಮ್ಯಾನ್ ಆಗಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೇದೆ ನಾಗೇಶ್ ಮೇಲೆ ದರ್ಶನ್‌ ಆಪ್ತರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹಲ್ಲೆ ಸಂಬಂಧ ಪೇದೆ ನಾಗೇಶ್‌ ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ನಾಗೇಶ್ ಮೇಲೆ ಹಲ್ಲೆ ನಡೆದಿರುವ ಕುರಿತು ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್‌ ಲೀಗಲ್‌ ಕೇಸ್‌ ಕೂಡ ದಾಖಲಾಗಿತ್ತು. ಪ್ರಕರಣವನ್ನು ಬೆಳೆಸದ ಶಾಸಕ ಉದಯ್‌ ರಾಜಿ-ಸಂಧಾನದ ಮೂಲಕ ನಾಗೇಶ್ ಅವರನ್ನು ಸಮಾಧಾನಪಡಿಸಿದ್ದರು ಎಂದು ತಿಳಿದು ಬಂದಿದೆ.ಏನಿದು ಘಟನೆ?:

ಏ.22ರಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಪರ ಲೋಕಸಭಾ ಚುನಾವಣೆ ಪ್ರಚಾರಕ್ಕೆಂದು ಮದ್ದೂರು ಕ್ಷೇತ್ರಕ್ಕೆ ದರ್ಶನ್‌ ಆಗಮಿಸಿದ್ದರು. ಈ ವೇಳೆ ಮುಖಂಡರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ನಾಗೇಶ್‌ ಜೊತೆ ದರ್ಶನ್‌ ಸ್ನೇಹಿತ ಲಕ್ಷ್ಮಣ್‌ ಹಾಗೂ ಇತರರು ಜಗಳ ತೆಗೆದಿದ್ದರು. ಇದೇ ಜಗಳ ಮುಂದುವರೆಸಿ ಅದೇ ದಿನ ರಾತ್ರಿ 11.30ರ ಸಮಯದಲ್ಲಿ ಶಾಸಕ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಹೇಳಲಾಗಿದೆ.

ಹಲ್ಲೆಯಿಂದ ಮನನೊಂದ ಪೇದೆ ನಾಗೇಶ್‌ ಕೆಸ್ತೂರು ಪೊಲೀಸ್‌ ಠಾಣೆಯಲ್ಲಿ ದರ್ಶನ್‌ ಸ್ನೇಹಿತರ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಈ ಸಂಬಂಧ ಏ.23ರಂದು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್ ಮೆಡಿಕಲ್‌ ಲೀಗಲ್‌ ಕೇಸ್‌ ಬುಕ್‌ನಲ್ಲಿ ದಾಖಲಿಸಿದ್ದರು. ಆದರೆ ದೂರು ದಾಖಲಿಸಲು ಬಿಡದ ಶಾಸಕ ಉದಯ್ ರಾಜಿ-ಸಂಧಾನದ ಮೂಲಕ ನಾಗೇಶ್‌ ಅವರನ್ನು ಅಲ್ಲಿಂದ ಕಳುಹಿಸಿದ್ದರು. ಈ ಘಟನೆ ಬಳಿಕ ಉದಯ್ ಗನ್‌ ಮ್ಯಾನ್ ಹುದ್ದೆಯಿಂದ ನಾಗೇಶ್‌ ಹೊರಬಂದಿದ್ದರು. ಇದೀಗ ಡಿಎಆರ್ ತುಕಡಿಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾಹಿತಿ ಇದ್ದರೂ ಮುಚ್ಚಿಹಾಕಿದ ಖಾಕಿ ಪಡೆ?: ದರ್ಶನ್ ಆಪ್ತರು ಪೇದೆ ನಾಗೇಶ್‌ ಮೇಲೆ ಹಲ್ಲೆ ನಡೆಸಿರುವ ಸಂಬಂಧ ನಾಗೇಶ್ ಚಿಕಿತ್ಸೆ ಪಡೆದಿದ್ದ ದಾಖಲೆ ಪತ್ತೆಯಾಗಿದ್ದು, ಈ ಮಾಹಿತಿ ಗೊತ್ತಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕಿದ್ದರೇ ಎಂಬ ಅನುಮಾನ ಇದೀಗ ಕಾಡಲಾರಂಭಿಸಿದೆ. ದರ್ಶನ್‌ ಸ್ನೇಹಿತ ಲಕ್ಷ್ಮಣ್‌ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿದ ವಿಷಯವನ್ನು ನಾಗೇಶ್‌ ಮೇಲಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ ಅಧಿಕಾರಿಗಳು ಕೇವಲ ಘಟನೆ ವಿವರ ಪಡೆದು ಸುಮ್ಮನಾಗಿದ್ದರು. ಹಿರಿಯ ಅಧಿಕಾರಿಗಳ ನಡೆ ವಿರುದ್ಧ ಗನ್‌ಮ್ಯಾನ್‌ಗಳು ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ದರ್ಶನ್‌ಗೆ 40 ಲಕ್ಷ ನೀಡಿದವರಿಗೆ ಪೊಲೀಸ್‌ ಸಮನ್ಸ್‌:

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್‌ ಅವರಿಗೆ 40 ಲಕ್ಷ ರು. ಕೊಟ್ಟಿದ್ದ ಅವರ ಸ್ನೇಹಿತ ಮೋಹನ್ ರಾಜ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ದರ್ಶನ್ ಬಂಧನ ಬಳಿಕ ಪೊಲೀಸರ ಸಂಪರ್ಕಕ್ಕೆ ಸಿಗದೆ ಬಿಜೆಪಿ ಮುಖಂಡ ಎನ್ನಲಾದ ಮೋಹನ್‌ ರಾಜ್‌ ಅಜ್ಞಾತವಾಗಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತಾವು ಬಚಾವಾಗಲು ಅಗತ್ಯವಿರುವ ಹಣಕ್ಕಾಗಿ ಮೋಹನ್‌ ರಾಜ್‌ ಅವರಿಂದ 40 ಲಕ್ಷ ರು. ಹಣವನ್ನು ದರ್ಶನ್ ಪಡೆದಿದ್ದರು. ಆನಂತರ ಆ ಹಣವನ್ನು ಅವರ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದರು.ಶೆಡ್‌ ಪೊಲೀಸರ ಸುಪರ್ದಿಯಲ್ಲಿದೆ, 

ಸಾಕ್ಷ್ಯನಾಶ ಆಗಿಲ್ಲ: ಜಯಣ್ಣ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೃತ್ಯ ನಡೆದ ಸ್ಥಳದಲ್ಲಿ ಸಾಕ್ಷ್ಯ ನಾಶವಾಗಿಲ್ಲ. ಪೊಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡಿದ್ದೇವೆ ಎಂದು ಪಟ್ಟಣಗೆರೆ ಶೆಡ್ ಮಾಲಿಕ ಜಯಣ್ಣ ಸ್ಪಷ್ಟಪಡಿಸಿದ್ದಾರೆ.ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಜಯಣ್ಣ, ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಕೃತ್ಯದ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿದೆ ಎಂಬ ಆರೋಪವನ್ನು ತಳ್ಳಿ ಹಾಕಿದರು. ರೇಣುಕಾಸ್ವಾಮಿ ಹತ್ಯೆ ಕೃತ್ಯ ನಡೆದ ಸ್ಥಳದಲ್ಲಿ ಜನರ ಓಡಾಟ ನಿರ್ಬಂಧಿಸಲಾಗಿದೆ. ಕೃತ್ಯ ಬೆಳಕಿಗೆ ಬಂದ ದಿನದಿಂದಲೂ ಶೆಡ್‌ ಪೊಲೀಸರ ಸುಪರ್ದಿಯಲ್ಲಿದೆ. ಬೇರೆ ಯಾರೂ ಅಲ್ಲಿಗೆ ಪ್ರವೇಶಿಸಿಲ್ಲ. ಹೀಗಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿದೆ ಎಂಬುದು ಸತ್ಯವಲ್ಲ ಎಂದು ಜಯಣ್ಣ ಹೇಳಿದರು.

ಡಿ’ಗ್ಯಾಂಗ್‌ ಸಿನಿಮಾ ಟೈಟಲ್‌ ನೀಡಲು ಚೇಂಬರ್ ನಕಾರ:ಪಿಎಂ ಪ್ರೊಡಕ್ಷನ್ ನಿರ್ಮಾಪಕ ಮಂಜುನಾಥ್ ನಾಯ್ಕ್ ಅವರು ‘ಡಿ ಗ್ಯಾಂಗ್‌’ ಹೆಸರಿನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಶೀರ್ಷಿಕೆಯನ್ನು ನೋಂದಣಿ ಮಾಡಿಸಿಕೊಳ್ಳಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡ‍ಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಫಿಲ್ಮ್ ಛೇಂಬರ್ ‘ಡಿ ಗ್ಯಾಂಗ್’ ಶೀರ್ಷಿಕೆ ನೀಡಲು ನಿರಾಕರಿಸಿದೆ.ಈ ಕುರಿತು ಮಾತನಾಡಿರುವ ‘ಡಿ ಗ್ಯಾಂಗ್‌’ ನಿರ್ದೇಶಕ ರಾಕಿ ಸೋಮ್ಲಿ, ‘ಡಿ ಗ್ಯಾಂಗ್‌ ಹೆಸರಿನಲ್ಲಿ ನಾನು ಎರಡು ವರ್ಷಗಳ ಹಿಂದೆಯೇ ಹಾಡನ್ನು ನಿರ್ದೇಶಿಸಿದ್ದು, ಅದು ಯೂಟ್ಯೂಬ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಇದೆ. ಇದೇ ಹೆಸರಿನ ಮೇಲೆ ಸಿನಿಮಾ ಮಾಡುವುದಕ್ಕೆ ಆಗಿನಿಂದಲೂ ತಯಾರಿ ಮಾಡಿಕೊಳ್ಳುತ್ತಿದ್ದೆ. ಈಗ ದರ್ಶನ್‌ ಬಂಧನದ ಹಿನ್ನೆಲೆಯಲ್ಲಿ ‘ಡಿ ಗ್ಯಾಂಗ್‌’ ಹೆಸರು ಸದ್ದು ಮಾಡುತ್ತಿರುವುದರಿಂದ ಬೇರೆ ಯಾರಾದರೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದುಕೊಂಡು ಶುಕ್ರವಾರ ಟೈಟಲ್‌ ನೋಂದಣಿಗೆ ಹೋಗಿದ್ದೆ. ಆದರೆ, ವಾಣಿಜ್ಯ ಮಂಡಳಿ ನಿರಾಕರಿಸಿದೆ. ಆದರೆ, ‘ಡಿ ಗ್ಯಾಂಗ್‌’ ಹೆಸರಿಗೂ ಈಗಿನ ಬೆಳವಣಿಗೆಗಳಿಗೆ ಯಾವುದೇ ಸಂಬಂಧವಿಲ್ಲ. ಇದನ್ನು ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ಹೇಳಿದ್ದೇನೆ’ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌, ‘ಪಿಎಂ ಪ್ರೊಡಕ್ಷನ್ ನಿರ್ಮಾಪಕ ಮಂಜುನಾಥ್ ನಾಯ್ಕ್ ಅವರಿಂದ ಡಿ ಗ್ಯಾಂಗ್‌ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಲಾಗಿತ್ತು. ಡಿ ಗ್ಯಾಂಗ್ ಎಂದರೆ ದರ್ಶನ್ ಅಂತಲೇ ಬರುವುದರಿಂದ, ಅಲ್ಲದೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೂ ಡಿ ಗ್ಯಾಂಗ್ ಅಂತಲೇ ಹೇಳುತ್ತಿರುವುದರಿಂದ ಶೀರ್ಷಿಕೆಯನ್ನು ಕೊಡಲು ಸಾಧ್ಯವಿಲ್ಲವೆಂದು ಹೇಳಿದ್ದೇನೆ’ ಎಂದು ತಿಳಿಸಿದ್ದಾರೆ.