ಸಾರಾಂಶ
ಮಾನವೀಯ ಮೌಲ್ಯಗಳನ್ನು ಪೋಷಿಸಿ, ಬೆಳೆಸಿ, ಆಧ್ಯಾತ್ಮ ತಪಸ್ಸಿನ ಮೂಲಕ ಕಂದಾಚಾರ ಮತ್ತು ಮೌಢ್ಯದಲ್ಲಿ ಮುಳುಗಿದವರ ಕಣ್ಣು ತೆರೆಸಿದ ದಿವ್ಯ ಶಕ್ತಿಯಾಗಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹೇಳಿದರು.
ಮುಳಗುಂದ: 16ನೇ ಶತಮಾನದಲ್ಲಿ ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕ, ದಾಸ ಶ್ರೇಷ್ಠ ಕನಕದಾಸರು. ಮಾನವೀಯ ಮೌಲ್ಯಗಳನ್ನು ಪೋಷಿಸಿ, ಬೆಳೆಸಿ, ಆಧ್ಯಾತ್ಮ ತಪಸ್ಸಿನ ಮೂಲಕ ಕಂದಾಚಾರ ಮತ್ತು ಮೌಢ್ಯದಲ್ಲಿ ಮುಳುಗಿದವರ ಕಣ್ಣು ತೆರೆಸಿದ ದಿವ್ಯ ಶಕ್ತಿಯಾಗಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹೇಳಿದರು.ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ನಡೆದ ದಾಸ ಶ್ರೇಷ್ಠ ಕನಕದಾಸರ 537ನೇ ಜಯಂತಿಯಲ್ಲಿ ಮಾತನಾಡಿದರು.
ಕೀರ್ತನೆ, ಮುಂಡಿಗೆ, ಉಗಾಭೋಗ, ಸುಳಾದಿ, ದಂಡಕಗಳು ಮಾತ್ರವಲ್ಲದೇ, ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ ಎಂಬ ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಹ ಉಪದೇಶಗಳನ್ನು ನೀಡಿ ಕನ್ನಡ ಹರಿದಾಸ ಪರಂಪರೆಯಲ್ಲಿ ದಿಟ್ಟ ಹೆಜ್ಜೆ ಇಟ್ಟವರಲ್ಲಿ ಒಬ್ಬರಾಗಿ ದಾಸಶ್ರೇಷ್ಠರಾದರು ಎಂದರು. ಪಪಂ ಸದಸ್ಯ ಕೆ.ಎಲ್. ಕರಿಗೌಡರ ಮಾತನಾಡಿ, ದಾಸ ಸಾಹಿತ್ಯಕ್ಕೆ ಕನಕರು ನೀಡಿದ ಕೊಡುಗೆ ಪ್ರಸ್ತುತ. ಮಹನೀಯರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರ ಬದುಕು, ತತ್ವಾದರ್ಶ, ಚಿಂತನೆ, ಸಂದೇಶಗಳನ್ನು ಅರಿತು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು ಎಂದರು.ಈ ವೇಳೆ ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಸದಸ್ಯರಾದ ಷಣ್ಮುಖಪ್ಪ ಬಡ್ನಿ, ಮಹಾದೇವಪ್ಪ ಗಡಾದ, ಬಸವರಾಜ ಹಾರೋಗೇರಿ, ಇಮಾಮಸಾಬ ಶೇಖ ಸೇರಿದಂತೆ ಪಪಂ ಸಿಬ್ಬಂದಿ ಇದ್ದರು.