ನಾಗನಕೆರೆ ಬಳಿ ಇಂದು ದಾಸಯ್ಯ ಪರಂಪರೆಯ ಗಿಡದ ಜಾತ್ರೆ

| Published : Dec 13 2024, 12:46 AM IST

ನಾಗನಕೆರೆ ಬಳಿ ಇಂದು ದಾಸಯ್ಯ ಪರಂಪರೆಯ ಗಿಡದ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ತಾಲೂಕಿನ ನಾಗನಕೆರೆ ಬಳಿ ಶುಕ್ರವಾರ ನಡೆಯುವ ಶ್ರೀವೆಂಕಟೇಶ್ವರ ಭಕ್ತರ ಇತಿಹಾಸವುಳ್ಳ ದಾಸಯ್ಯ ಪರಂಪರೆಯ ಗಿಡದ ಜಾತ್ರೆಗೆ ಸಕಲ ಸಿದ್ಧತೆಗಳು ನಡೆಯತ್ತಿವೆ. ಗಿಡದ ಜಾತ್ರೆಯು ಪ್ರತಿವರ್ಷ ಡಿಸೆಂಬರ್ ತಿಂಗಳ ಮೊದಲ ಅಥವಾ ಕೊನೇ ವಾರದಲ್ಲಿ ಜರುಗುತ್ತದೆ. ಈ ಬಾರಿ ಡಿ.13ರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಲಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ/ದೇವಲಾಪುರ

ತಾಲೂಕಿನ ನಾಗನಕೆರೆ ಬಳಿ ಶುಕ್ರವಾರ ನಡೆಯುವ ಶ್ರೀವೆಂಕಟೇಶ್ವರ ಭಕ್ತರ ಇತಿಹಾಸವುಳ್ಳ ದಾಸಯ್ಯ ಪರಂಪರೆಯ ಗಿಡದ ಜಾತ್ರೆಗೆ ಸಕಲ ಸಿದ್ಧತೆಗಳು ನಡೆಯತ್ತಿವೆ.

ಗಿಡದ ಜಾತ್ರೆಯು ಪ್ರತಿವರ್ಷ ಡಿಸೆಂಬರ್ ತಿಂಗಳ ಮೊದಲ ಅಥವಾ ಕೊನೇ ವಾರದಲ್ಲಿ ಜರುಗುತ್ತದೆ. ಈ ಬಾರಿ ಡಿ.13ರ ಬೆಳಗ್ಗೆಯಿಂದ ಸಂಜೆವರೆಗೂ ನಡೆಯಲಿದೆ. ಒಂದೇ ದಿನ ನಡೆದರೂ ಅತಿದೊಡ್ಡ ಗಿಡದ ಜಾತ್ರೆಗೆ ಸಾವಿರಾರು ಹರಿಭಕ್ತರು ಇತಿಹಾಸ ಪರಂಪರೆ ಹೊಂದಿರುವ ಜಾತ್ರೆ ಆಚರಿಸುತ್ತಾ ಬಂದಿದ್ದಾರೆ.

ವೆಂಕಟೇಶ್ವರಸ್ವಾಮಿ ಭಕ್ತಾದಿಗಳು ಶ್ರೀಕ್ಷೇತ್ರ ತಿರುಪತಿಗೆ ಹೋಗದವರು ಗಿಡದ ಜಾತ್ರೆಗೆ ಹೋಗಿ ದಾಸಪ್ಪರಿಗೆ ಪೂಜೆ ಸಲ್ಲಿಸುವ ಮುಖಾಂತರ ಹರಕೆ ಇತ್ಯಾದಿಗಳನ್ನು ನೀಡುತ್ತಾರೆ. ಈ ದೇಗುಲವನ್ನು ಎರಡನೇ ತಿರುಪತಿ ಎಂದೆ ಜಿಲ್ಲಾದ್ಯಂತ ಪ್ರಸಿದ್ಧಿ ಪಡೆದಿದೆ.

ಜಾತ್ರೆಗೆ ಜಿಲ್ಲೆಯ ವಿವಿಧ ಭಾಗಗಳಿಂದಲೂ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಜಾತ್ರೆಯಲ್ಲಿ ಅಂಗಡಿಗಳನ್ನು ತೆರೆದು ರೈತರಿಗೆ ಬೇಕಾಗುವ ಒಕ್ಕಣೆಯ ಸಾಮಗ್ರಿಗಳು, ತಿಂಡಿ ತಿನಿಸುಗಳು, ಜವನ ಬಾಳೆಹಣ್ಣು ಮಾರಾಟ ಮಾಡಲಾಗುತ್ತಿದೆ. ಈ ಜಾತ್ರೆಯು ಕಾಡಿನ ಮಧ್ಯ ನಡೆದರೂ ಗೋವಿಂದನ ಘೋಷ ಶಂಕು ಜಗಟೆಯ ನೀನಾದ ಜೋರಾಗಿರುತ್ತದೆ.

ತಿರುಪತಿಗೆ ಹೋಗಲಾಗದವರಿಂದ ಸ್ವಾಮಿಯ ದರ್ಶನ:

ತಿರುಪತಿಗೆ ಹೋಗಲು ಸಾಧ್ಯವಾಗದವರು ಈ ಕ್ಷೇತ್ರಕ್ಕೆ ಬಂದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಇದಕ್ಕೆ ಚಿಕ್ಕ ತಿರುಪತಿ ಎಂಬ ಹೆಸರು ಬಂದಿದೆ. ಕೆರೆ ದಂಡೆಯ ಗಿಡದ ಕೆಳಗೆ ದೇವರಿಗೆ ಎಡೆ ಇಟ್ಟು ಪೂಜಿಸುವುದರಿಂದ ಗಿಡದ ಜಾತ್ರೆಯಾಗಿ ಜನವಲಯದಲ್ಲಿ ಉಳಿದು ಬಂದಿದೆ.

ಜಾತ್ರೆ ಸಮಯದಲ್ಲಿ ಇಲ್ಲಿ ಹರಕೆ ತೀರಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಹೀಗೆ ಬರುವ ದಾಸಪ್ಪಂದಿರು ತಮ್ಮ ಜೋಳಿಗೆಯಲ್ಲಿ ದೇವರನ್ನು ತಂದು ನಾಗನಕೆರೆ ದಂಡೆ ಗಿಡದ ಪ್ರದೇಶಗಳಲ್ಲಿಟ್ಟು ಪೂಜಿಸುತ್ತಾರೆ. ಈ ಸಂಪ್ರದಾಯ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಬೆಟ್ಟದ ಗುಡಿ ಮೇಲೆ ಜಾತ್ರೆ ಸಂಭ್ರಮ:

ಗಿಡದ ಜಾತ್ರೆಯು ಮಾಮೂಲಿ ಯಾಗಿ ಕೆರೆ ದಡದಲ್ಲಿ ನಡೆಯುತ್ತಿದೆ. ಹಳೆಯ ಶ್ರೀವೆಂಕಟೇಶ್ವರ ಸ್ವಾಮಿಯ ದೇವಾಲಯ ಪಾಳು ಬಿದ್ದು ತದನಂತರದಲ್ಲಿ ನೂತನ ದೇವಾಲಯ ನಿರ್ಮಾಣವಾಗಿ ಬೆಟ್ಟದ ಗುಡಿ ಎಂದು ಪ್ರಸಿದ್ಧಿ ಪಡೆದು ಬೆಟ್ಟದ ಮೇಲ್ಭಾಗದಲ್ಲಿ ಪೂಜೆ ಜಾತ್ರೆ ನಡೆಯುತ್ತದೆ. ಭಕ್ತಾದಿಗಳು ದಾಸಪ್ಪನಿಗೆ ಮಧ್ಯ ಹರಕೆ ನೀಡುವುದು ವಿಶೇಷವಾಗಿದೆ.