22 ರಿಂದ ರಂಗಾಯಣದಲ್ಲಿ ನವರಾತ್ರಿ ರಂಗೊತ್ಸವ

| Published : Sep 20 2025, 01:00 AM IST

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ರಂಗಾಯಣದ ವತಿಯಿಂದ ರಂಗಭೀಷ್ಮ ಬಿ.ವಿ. ಕಾರಂತ ಕಾಲೇಜು ನವರಾತ್ರಿ ರಂಗೋತ್ಸವನ್ನು ಸೆ.22 ರಿಂದ ಅ.1 ರವರೆಗೆ ಆಯೋಜಿಸಿದ್ದು, ನಾಟಕಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ನಗರದ ರಂಗಾಯಣದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗೋತ್ಸವವನ್ನು ಸೆ.22ರ ಸಂಜೆ 5.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಉದ್ಘಾಟಿಸುವರು. ರಂಗಾಯಣದ ನಾಟಕಗಳ ಭಿತ್ತಿಚಿತ್ರ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ವಿ. ವೆಂಕಟೇಶ್ ಉದ್ಘಾಟಿಸುವರು ಎಂದು ಹೇಳಿದರು.

ಇದೇ ವೇಳೆ ರಂಗಭೂಮಿ ಮತ್ತು ಕಿರುತೆರೆ ಕಲಾವಿದ ಧರ್ಮೇಂದ್ರ ಅರಸ್ ಅವರಿಗೆ ನವರಾತ್ರಿ ರಂಗಗೌರವ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಮೊದಲಾದವರು ಪಾಲ್ಗೊಳ್ಳುವರು ಎಂದರು.

ಕಾಲೇಜು ನವರಾತ್ರಿ ರಂಗೋತ್ಸವದಲ್ಲಿ 400 ಕಾಲೇಜು ವಿದ್ಯಾರ್ಥಿಗಳು ಅಭಿನಯಿಸುವ 10 ನಾಟಕಗಳು ಸೆ.22 ರಿಂದ ಅ.1 ರವರೆಗೆ ಪ್ರತಿದಿನ ಸಂಜೆ 7ಕ್ಕೆ ಭೂಮಿಗೀತದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.

ಜಾನಪದ ನೃತ್ಯ ಪ್ರದರ್ಶನ

ಅಲ್ಲದೆ, ಅಂತರರಾಜ್ಯ ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನವನ್ನು ಸೆ.22 ರಿಂದ ಅ.1 ರವರೆಗೆ ವನರಂಗದಲ್ಲಿ ಸಂಜೆ 5.30ಕ್ಕೆ ಆಯೋಜಿಸಲಾಗಿದೆ. ಲಂಬಾಡಿ/ಮಾತುರಿ ನೃತ್ಯ- ತೆಲಂಗಾಣ, ಲಾವಣಿ, ಹೋಲಿ ನೃತ್ಯ- ಮಹಾರಾಷ್ಟ್ರ, ಸಿದ್ದಿ ಢುಮಾಲ್ ನೃತ್ಯ- ಗುಜರಾತ್, ಸಂಬಲ್ ಪುರಿ ನೃತ್ಯ- ಒರಿಸ್ಸಾ, ತಿರುವತ್ತುರಕಳಿ ಮತ್ತು ಒಪ್ಪಾನ ನೃತ್ಯ- ಕೇರಳ, ಬಿಹು, ಗುಸಾನ್ ನೃತ್ಯ- ಅಸ್ಸಾಂ, ನೋರ್ತಾ ಮತ್ತು ಸೈತಾನ್ ನೃತ್ಯ- ಮಧ್ಯಪ್ರದೇಶ, ರಥ್ವಾ ನೃತ್ಯ- ಗುಜರಾತ್, ತಪ್ಪಾಟ್ಟಗುಳು ನೃತ್ಯ- ಆಂಧ್ರಪ್ರದೇಶ ಹಾಗೂ ಕರಗಂ, ಕಾವಾಡಿ, ತಪ್ಪಟ್ಟಮ್ ನೃತ್ಯ- ತಮಿಳುನಾಡು ತಂಡ ಪ್ರದರ್ಶನ ನೀಡಲಿದೆ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ನವರಾತ್ರಿ ರಂಗೋತ್ಸವ ಸಂಚಾಲಕಿ ಬಿ.ಎನ್. ಶಶಿಕಲಾ, ಕಾಲೇಜು ರಂಗೋತ್ಸವ ಸಂಚಾಲಕಿ ಕೆ.ಆರ್. ನಂದಿನಿ, ರಂಗಸಮಾಜ ಸದಸ್ಯ ಎಚ್.ಎಸ್. ಸುರೇಶ್ ಬಾಬು ಮೊದಲಾದವರು ಇದ್ದರು.

-----

ಬಾಕ್ಸ್...

ನವರಾತ್ರಿ ನಾಟಕಗಳು

ಸೆ. 22- ಶರೀಫ

ಸೆ.23- ನೋವಿಗದ್ದಿದ ಕುಂಚ

ಸೆ.24- ರಾಕ್ಷಸ

ಸೆ.25- ಚಿತ್ರಪಟ ರಾಮಾಯಣ

ಸೆ.26- ಶ್ರೀ ತಿಮ್ಮಾರ್ಪಣಮಸ್ತು

ಸೆ.27- ಕಲ್ಯಾಣದ ಬಾಗಿಲು

ಸೆ.28- ಚೂರಿಕಟ್ಟೆ ಅಥಾರ್ತ್ ಕಲ್ಯಾಣಪುರ

ಸೆ.29- ಮಾದಾರಿ ಮಾದಯ್ಯ

ಸೆ.30- ಜಾತ್ರೆ

ಅ.1- ಜನ ಗಣ ಮನ