ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಸಭೆ:

ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದರು.ವಿಧಾನಸಭೆಯಲ್ಲಿ ಗುರುವಾರ ನಡೆದ ಬರಗಾಲದ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು. ಸದನದ ಎಲ್ಲಾ ಸದಸ್ಯರನ್ನು ದಸರಾ ಉತ್ಸವಕ್ಕೆ ಆಹ್ವಾನಿಸಿದರು. ಈ ಬಾರಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ಪತ್ರ ಕಳುಹಿಸಿದ್ದೇನೆ. ಬೆಳಗ್ಗೆ ಅವರ ಜತೆ ದೂರವಾಣಿ ಮೂಲಕವೂ ಮಾತನಾಡಿದ್ದೇನೆ. ಅವರು ನಮ್ಮ ಆಹ್ವಾನ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಮುಂದಿನ ತಿಂಗಳು ನಾಡಹಬ್ಬ ದಸರಾ ಬರುತ್ತಿದೆ. ಈ ವರ್ಷದ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ನಾನು ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಬರಬೇಕು ಎಂದರು.ದಸರಾ ಉದ್ಘಾಟಿಸಲಿರುವ ಅತಿಕಿರಿಯ ಸ್ವಾಮೀಜಿ:ಗವಿಮಠಕ್ಕೆ ಇದುವರೆಗೆ 17 ಮಂದಿ ಪೀಠಾಧಿಪತಿಗಳಾಗಿದ್ದಾರೆ. ಇದೀಗ 18ನೇ ಪೀಠಾಧಿಪತಿಗಳಾಗಿರುವ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನ ಪಡೆಯುವ ಮೂಲಕ ಗವಿಮಠದ ಪರಂಪರೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. 1977ರ ಜೂ.1ರಂದು ಜನಿಸಿರುವ ಗವಿಶ್ರೀಗಳಿಗೆ ಪ್ರಸ್ತುತ 49 ವರ್ಷ ವಯಸ್ಸು. ಹಾಗಾಗಿ, ಮೈಸೂರು ದಸರಾ ಉದ್ಘಾಟಿಸುವ ಕಿರಿಯ ವಯಸ್ಸಿನ ಶ್ರೀ ಎನ್ನುವ ಹಿರಿಮೆಗೂ ಪಾತ್ರರಾಗಲಿದ್ದಾರೆ.

ಶಿಕ್ಷಣ, ದಾಸೋಹಕ್ಕೆ ಆದ್ಯತೆ:

ವಿವಿಧ ಕ್ಷೇತ್ರಗಳಲ್ಲಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಶ್ರೀಗಳು, ಗವಿಸಿದ್ದೇಶ್ವರ ಜಾತ್ರೆಯನ್ನು ನಾಡಿನಾದ್ಯಂತ ಪ್ರಸಿದ್ಧಿಗೊಳಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರಿಗೆ ವೈವಿಧ್ಯಮಯ ಪ್ರಸಾದ ವಿತರಿಸುವ ಮಹಾದಾಸೋಹದ ಪರಂಪರೆಯನ್ನು ವಿಸ್ತರಿಸಿದ್ದಾರೆ.

ಗವಿಮಠದ ಉಚಿತ ಪ್ರಸಾದ ನಿಲಯವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ವಿಸ್ತರಿಸಿದ್ದು, ಬಾಲಕಿಯರಿಗಾಗಿ ಉಚಿತ ಹೈಟೆಕ್ ಪಿಯು ವಸತಿ ಕಾಲೇಜು ಆರಂಭಿಸಿದ್ದಾರೆ. ಇದಲ್ಲದೆ ಜಿಲ್ಲೆಯ ಗಿಣಿಗೇರಿ ಕೆರೆ ಸೇರಿದಂತೆ 15ಕ್ಕೂ ಹೆಚ್ಚು ಕೆರೆಗಳ ಅಭಿವೃದ್ಧಿ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಉಚಿತ ಗ್ರಂಥಾಲಯ ಹಾಗೂ ನಶಿಸಿಹೋಗುತ್ತಿದ್ದ ಹಿರೇಹಳ್ಳದ ಪುನಶ್ಚೇತನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿದ್ದಾರೆ.