ದಶಮಂಟಪ ಸರಣಿ: ಕೋಟೆ ಮಾರಿಯಮ್ಮ ದೇಗುಲ- ಅಹಿರಾವಣ-ಮಹಿರಾವಣ ವಧೆ

| Published : Oct 21 2023, 12:31 AM IST

ದಶಮಂಟಪ ಸರಣಿ: ಕೋಟೆ ಮಾರಿಯಮ್ಮ ದೇಗುಲ- ಅಹಿರಾವಣ-ಮಹಿರಾವಣ ವಧೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ ಕಥಾ ಸಾರಾಂಶ ಅಳವಡಿಸಲಾಗುತ್ತಿದೆ. ಮಂಟಪಕ್ಕಾಗಿ ಸುಮಾರು ರು.25 ಲಕ್ಷ ವೆಚ್ಚ ಮಾಡಲಾಗುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ದಸರಾ ಉತ್ಸವದಲ್ಲಿ 48ನೇ ವರ್ಷದಲ್ಲಿ ಪಾಲ್ಗೊಳ್ಳುತ್ತಿರುವ ಮಡಿಕೇರಿಯ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ ಪಂಚಮುಖಿ ಆಂಜನೇಯನಿಂದ ಅಹಿರಾವಣ- ಮಹಿರಾವಣ ವಧೆ ಕಥಾ ಸಾರಾಂಶ ಅಳವಡಿಸಲಾಗುತ್ತಿದೆ. ಮಂಟಪಕ್ಕಾಗಿ ಸುಮಾರು ರು.25 ಲಕ್ಷ ವೆಚ್ಚ ಮಾಡಲಾಗುತ್ತಿದೆ. ದೇವಾಲಯ ದಸರಾ ಸಮಿತಿ ಜಂಟಿ ಅಧ್ಯಕ್ಷರಾಗಿ ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದಲ್ಲಿ ಒಟ್ಟು 17 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಹುದ್ಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಮಡಿಕೇರಿಯ ಆರ್ವಿನ್ ಹಾಗೂ ರಾಕೇಶ್ ತಂಡ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಫಯರ್ ಎಫೆಕ್ಟ್‌ನ್ನು ಬೆಂಗಳೂರಿನ ಮಸೂದ್ ಹಾಗೂ ಸಮಿತಿಯ ತೀರ್ಥ ಹಾಗೂ ತಂಡ ನೀಡಲಿದೆ. ದಿಂಡಿಗಲ್‌ನ ಕಳೇಯಗಂ ಲೈಟಿಂಗ್ ಬೋರ್ಡ್ ಅಳವಡಿಸಲಾಗುತ್ತಿದೆ. ಮಡಿಕೇರಿಯ ಶಕ್ತಿ ವಿನಾಯಕ ಇವೆಂಟ್ ಮ್ಯಾನೇಜ್‌ಮೆಂಟ್ ನ ಪ್ರಶಾಂತ್ ನೇತೃತ್ವದಲ್ಲಿ ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದೆ. ಫ್ಲಾಟ್‌ಫಾರಂ ಅನ್ನು ಟೀಂ ಕೆಎಂಟಿ ಮಾಡಲಿದೆ. ಟ್ಯಾಕ್ಟರ್ ಸೆಟ್ಟಿಂಗ್ಸ್ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಟೀಂ ಕೆಎಂಟಿ ಮಾಡಲಿದೆ. ದೇವಾಲಯದ ಇತಿಹಾಸ: ಶ್ರೀ ಕೋಟೆ ಮಾರಿಯಮ್ಮ ದೇವಾಲಯ ನಗರದ ಕೋಟೆಯ ಹಿಂಭಾಗದ ಪೆನ್ಶನ್‌ಲೇನ್ ಸಮೀಪವಿದೆ. ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಕೋಟೆ ಮಾರಿಯಮ್ಮ ದೇವಾಲಯ ಭವ್ಯ ಇತಿಹಾಸವನ್ನು ಹೊಂದಿದೆ. ಈ ದೇವಿಯು ರಾಜನ ಆಸ್ಥಾನ ದೇವತೆಯಾಗಿ ರಾರಾಜಿಸುತ್ತಿದ್ದಳು. ಕ್ರಮೇಣ ರಾಜನ ದುರಾಡಳಿತ, ಅನಾಚಾರಗಳು ಎಲ್ಲೆ ಮೀರಿದಾಗ ದೇವಿಯು ಆತನಿಗೆ ಛೀಮಾರಿ ಹಾಕಿದಳು. ಇದಕ್ಕೆ ಕೋಪಗೊಂಡ ರಾಜನು ದೇವಿಯ ವಿಗ್ರಹವನ್ನು ಭಗ್ನಗೊಳಿಸಿ ಕೋಟೆಯ ಹಿಂಬದಿಯ ಬಾವಿಯಲ್ಲಿ ಎಸೆದನು. ಕೆಲ ಸಮಯದ ನಂತರ ಶ್ರೀ ಕೋಟೆ ಮಾರಿಯಮ್ಮ ತಾಯಿ ಮುತ್ತು-ಮುತ್ತು ಎಂಬ ದಂಪತಿಗೆ ಕನಸಿನಲ್ಲಿ ಕಾಣಿಸಿಕೊಂಡು ತನ್ನ ವಿಗ್ರಹವು ಬಾವಿಯಲ್ಲಿ ಇರುವುದಾಗಿಯೂ ಅದನ್ನು ಹೊರ ತೆಗೆದು ಪೂಜಿಸಬೇಕೆಂದು ತಿಳಿಸಿದಳು. ಆಕೆಯ ಮಾತನ್ನು ಪಾಲಿಸಿದ ಮುತ್ತು ದಂಪತಿ ವಿಗ್ರಹ ಹೊರ ತೆಗೆದು ಪೂಜಿಸಿ ಬಾವಿಯ ಸಮೀಪದಲ್ಲಿಯೇ ಪ್ರತಿಷ್ಠಾಪಿಸಿದರು. ಈ ಸಂದರ್ಭ ತನ್ನನ್ನು ಕೋಟೆಯಿಂದ ಹೊರಗಟ್ಟಿದ ರಾಜನ ಮೇಲೆ ಕೋಪದಿಂದ ಕೋಟೆಯ ಕಡೆ ತಿರುಗಿಯೂ ನೋಡುವುದಿಲ್ಲವೆಂದು ಕೋಟೆಗೆ ವಿರುದ್ಧ ದಿಕ್ಕಿಗೆ ಅಂದರೆ ಉತ್ತರಾಭಿಮುಖವಾಗಿ ನೆಲೆ ನಿಂತಳು. ಪುರಾತನವಾದ ಈ ದೇವಾಲಯದಲ್ಲಿ ಉದ್ಭವಲಿಂಗ ಮತ್ತು ಹುತ್ತವಿದ್ದು ಇತ್ತೀಚಿನ ಕೆಲವು ವರ್ಷಗಳ ಹಿಂದೆ ದೇವಾಲಯದ ಮುಂಭಾಗದಲ್ಲಿರುವ ಅರಳಿ ಮರದ ಬುಡದಲ್ಲಿ ನಾಗ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ. ನವರಾತ್ರಿ, ಷಷ್ಠಿ, ಹಬ್ಬ ಹರಿದಿನಗಳಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ನವರಾತ್ರಿಯಂದು ಕರಗವನ್ನು ಹೊರಡಿಸುತ್ತಾರೆ. ನಂತರ ಕುಂಭ ಪೂಜೆ, ಶಾಂತಿ ಪೂಜೆಗಳು ನಡೆಯುವುದು ಈ ದೇವಾಲಯದ ವಿಶೇಷವಾಗಿದೆ. ಕೋಟೆ ಮಾರಿಯಮ್ಮ ದೇವಾಲಯದ ಈ ಬಾರಿಯ ಕರಗವನ್ನು ಉಮೇಶ್ ಸುಬ್ರಮಣಿ ಹಾಗೂ ಅನೀಶ್ ಕುಮಾರ್ ಹೊರುತ್ತಿದ್ದಾರೆ. 48 ವರ್ಷದ ಉಮೇಶ್ ಅವರಿಗೆ ಇದು 27ನೇ ವರ್ಷ ಹಾಗೂ 46 ವರ್ಷದ ಅನೀಶ್ ಅವರಿಗೆ ಇದು 25ನೇ ಕರಗ ಸೇವೆಯಾಗಿದೆ.