ಜೇಡರ ದಾಸಿಮಯ್ಯ ಹಾಗೂ ಅಲ್ಲಮಪ್ರಭುದೇವರು ವಚನ ಸಾಹಿತ್ಯದ ಮೇರು ಪರ್ವತ ಎಂದು ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪಿ.ಬಿ.ಬಿರಾದಾರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜೇಡರ ದಾಸಿಮಯ್ಯ ಹಾಗೂ ಅಲ್ಲಮಪ್ರಭುದೇವರು ವಚನ ಸಾಹಿತ್ಯದ ಮೇರು ಪರ್ವತ ಎಂದು ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪಿ.ಬಿ.ಬಿರಾದಾರ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಬಸವನಬಾಗೇವಾಡಿ ಬಸವೇಶ್ವರ ದೇವಾಲಯ ಸಂಸ್ಥೆಯ ದತ್ತಿ, ರಾಜೇಂದ್ರಸ್ವಾಮಿ ವಿವೇಕಾನಂದ ಸ್ವಾಮಿ ದತ್ತಿ, ಲಿಂ.ಶ್ರೀಮತಿ ಕೊಟ್ರಬಸಯ್ಯ ದತ್ತಿ, ದಿ.ಸುಗಂಧಿ ಮುರಿಗೆಪ್ಪನವರು ಹಾಗೂ ಬಾಬುರಾವ ಹುಜರೆ ಎಂಬ ದತ್ತಿಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 11ನೇ ಶತಮಾನದ ಆದ್ಯ ವಚನಕಾರ ಜೇಡರ ದಾಸಿಮಯ್ಯನವರು ಹಾಗೂ ಶೂನ್ಯಪೀಠದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿವಶರಣ ಅಲ್ಲಮಪ್ರಭುದೇವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಶರಣ ಚಿಂತಕ ಮೋಹನ ಕಟ್ಟಿಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆ-ಭಾವ, ಉಳಿಸಿ ಬೆಳೆಸುವ ಮೂಲಕ ಕನ್ನಡಾಂಬೆಯ ಸೇವೆಯನ್ನು ನಿರಂತರ ಮಾಡುತ್ತಿರುವ ಸಂಘಟನೆ ಎಂದರೇ ಅದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಹೀಗಾಗಿ ಜಿಲ್ಲಾ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳಿಗೂ ತುಂಬು ಹೃದಯದ ಅಭಿನಂದನೆಗಳು. 12ನೇ ಶತಮಾನದ ಎಲ್ಲ ಬಸವಾದಿ ಶಿವಶರಣ-ಶರಣೆಯರ ವಚನಗಳು ನಮಗೆಲ್ಲ ದಿಕ್ಸೂಚಿಯಾಗಿ ನಿಂತಿವೆ. ಆ ನಿಟ್ಟಿನಲ್ಲಿ ಇಂದಿನ ಎರಡೂ ದತ್ತಿ ಗೋಷ್ಠಿಗಳು ಅತ್ಯಂತ ಮೌಲಿಕವಾಗಿ ಮೂಡಿ ಬಂದಿವೆ ಎಂದರು. ಬಸವನಾಡಿನ ಸಾಹಿತಿ, ಶರಣ ಚಿಂತಕಿ ಶಾಂತಾ ಬಿರಾದಾರ ದೇವರ ದಾಸಿಮಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಕನ್ನಡದ ಆದ್ಯ ವಚನಕಾರರಾದ ದಾಸಿಮಯ್ಯನವರು ತಮ್ಮ ನೇಯ್ಗೆಯ ವೃತ್ತಿಯೊಂದಿಗೆ ಕಾಯಕ, ಅನುಭವಗಳ ಸಾರವನ್ನು ಬಳಸಿಕೊಂಡು ಅನೇಕ ವಚನಗಳನ್ನು ರಚಿಸಿ ನಮ್ಮನ್ನೆಲ್ಲ ಎಚ್ಚರಿಸಿದ ಮಹಾನ್ ಶಿವಶರಣ ಎಂದರು.ಕವಯಿತ್ರಿ ಸುನಂದಾ ಕೋರಿ ಅಲ್ಲಮಪ್ರಭುದೇವರ ವಚನಗಳಲ್ಲಿ ಮೌಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಬೆರಗು ಮತ್ತು ಬೆಡಗಿನ ವಚನಕಾರರಾದ ಅಲ್ಲಮಪ್ರಭುಗಳು ತಮ್ಮ ವಚನಗಳ ಮೂಲಕ ಆತ್ಮಜ್ಞಾನವನ್ನು, ವೈರಾಗ್ಯವನ್ನೂ ಬೋಧಿಸಿದ ಮಹಾನ್ ಶರಣರು ಅಲ್ಲಮಪ್ರಭುಗಳು ಎಂದರು.ಮುಖ್ಯ ಅತಿಥಿಗಳಾಗಿ ಗೀತಾ ಕುಗನೂರ, ವಿಜಯಲಕ್ಷ್ಮೀ ಹಳಕಟ್ಟಿ, ರಶ್ಮಿ ಬದ್ನೂರ, ನೀಲಾ ಇಂಗಳೆ, ಸುಧಾ ಪಾಟೀಲ, ಅರ್ಜುನ ಶಿರೂರ ಮುಂತಾದವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾವಿ ಜೇಡರ ದಾಸಿಮಯ್ಯನವರ ವಚನ ಗಾಯನ ಮಾಡುವ ಮೂಲಕ ವೇದಿಕೆಗೆ ಮೆರಗು ತಂದರು. ಶಿಕ್ಷಕಿ ಭಾರತಿ ಗೊಂಗಡಿ ಪ್ರಾರ್ಥಿಸಿದರು. ರಿಯಾಜ್‌ ಪಿಂಜಾರ ಸ್ವಾಗತಿಸಿ, ಗೌರವಿಸಿದರು. ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಕಮಲಾ ಮುರಾಳ, ಭಾಗೀರಥಿ ಸಿಂಧೆ, ಬಸನಗೌಡ ಬಿರಾದಾರ, ಮಹಾದೇವಿ ತೆಲಗಿ, ಗಂಗಮ್ಮ ರಡ್ಡಿ, ಜಿ.ಎಸ್.ಬಳ್ಳೂರ, ಸುಖದೇವಿ ಅಲಬಾಳಮಠ, ಶ್ರೀಕಾಂತ ನಾಡಗೌಡ, ಸಿದ್ರಾಮಪ್ಪ ಜಂಗಮಶೆಟ್ಟಿ, ಪ್ರದೀಪ ಕುಲಕರ್ಣಿ, ಸಿದ್ದು ಬೀಳಗಿ, ಹರ್ಷಿಣಿ ಮಾಳವಾಡಿ, ಅಸ್ಲಮ್ ಮುಲ್ಲಾ, ಕೆ.ಎಸ್. ಹಣಮಾಣಿ, ಅಮೋಘಸಿದ್ಧ ಪೂಜಾರಿ, ಎಂ.ಎನ್. ನಿಂಬಾಳ, ಅಸ್ಲಮ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

ಹೆಣ್ಣು-ಗಂಡು, ಮೇಲು-ಕೀಳು,ಎಂಬ ಆಚರಣೆಯ ಬೇಧಗಳನ್ನು ವಿರೋಧಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಖಂಡಿಸಿದ ಕನ್ನಡದ ಆದ್ಯ ವಚನಕಾರ ದಾಸಿಮಯ್ಯನವರು ಹಾಗೂ 12ನೇ ಶತಮಾನದ ಪ್ರಸಿದ್ಧ ವಚನಕಾರರು, ನೇರ ನಿಷ್ಠುರವಾದಿಯಾಗಿದ್ದ ಅನೇಕ ಶಿವಶರಣ-ಶರಣೆಯರಿಗೆ ಭಕ್ತಿ, ವೈರಾಗ್ಯಗಳನ್ನು ಬೋಧಿಸಿದ ಅಲ್ಲಮಪ್ರಭುಗಳು ತಮ್ಮ ವಚನಗಳ ಮೂಲಕ ಅಂತರಂಗ ಬಹಿರಂಗಗಳನ್ನು ಶೋಧಿಸಲೆತ್ನಿಸಿದ ವಚನಕಾರರಲ್ಲಿ ಅಲ್ಲಮಪ್ರಭುಗಳು ಕೂಡ ಮೇಲ್ಪಂಕ್ತಿಗಳಲ್ಲಿ ನಿಲ್ಲುವವರು.

-ಪ್ರೊ.ಪಿ.ಬಿ.ಬಿರಾದಾರ,
ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರು.