ದಾಸೋಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಶ್ರೀ

| Published : Mar 28 2024, 12:48 AM IST

ದಾಸೋಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದಾಸೋಹ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲ ದಾನಗಳಿಗಿಂತ ಅನ್ನದಾನವೇ ಶ್ರೇಷ್ಠವಾಗಿದೆ. ನಾವೆಲ್ಲರು ಕಾಯಕದಲ್ಲಿ ದೇವರನ್ನು ಕಾಣಬೇಕಾಗಿದೆ. ಯಾರು ಕಾಯಕದಲ್ಲಿ ತೊಡಗುವುದಿಲ್ಲವೋ, ಅವರು ಹಲವಾರು ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ದೇವರು ಜಗಳೂರಲ್ಲಿ ನುಡಿದಿದ್ದಾರೆ.

- ದೊಣೆಹಳ್ಳಿಯಲ್ಲಿ ಶರಣ ಬಸವವೇಶ್ವರ ಮಠದಿಂದ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮ

- - -

ಕನ್ನಡ ಪ್ರಭವಾರ್ತೆ ಜಗಳೂರು

ದಾಸೋಹ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಲ್ಲ ದಾನಗಳಿಗಿಂತ ಅನ್ನದಾನವೇ ಶ್ರೇಷ್ಠವಾಗಿದೆ ಎಂದು ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ದೇವರು ನುಡಿದರು.

ತಾಲೂಕಿನ ದೊಣೆಹಳ್ಳಿಯಲ್ಲಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ಮಾ.೨೫ ರಿಂದ ೨೯ವರೆಗೆ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದ ಅವರು, ನಾವೆಲ್ಲರು ಕಾಯಕದಲ್ಲಿ ದೇವರನ್ನು ಕಾಣಬೇಕಾಗಿದೆ. ಯಾರು ಕಾಯಕದಲ್ಲಿ ತೊಡಗುವುದಿಲ್ಲವೋ, ಅವರು ಹಲವಾರು ಸಮಸ್ಯೆಗಳಿಂದ ಬಳಲುತ್ತಾರೆ ಎಂದು ತಿಳಿಸಿದರು.

ಅನಾರೋಗ್ಯದಿಂದ ಬಳಲುವವರು ಆರೋಗ್ಯವಂತರಾಗುತ್ತಾರೆ. ಅಹಂಕಾರವುಳ್ಳವರು ಸಂಸ್ಕಾರವಂತ ಆಗುತ್ತಾರೆ. ದಾಸೋಹಕ್ಕೆ ಅಷ್ಟೊಂದು ಶಕ್ತಿ ಇದೆ. ದಾಸೋಹದಲ್ಲಿ ಸಾಕ್ಷಾತ್ ಶಿವ ಇರುತ್ತಾನೆ. ಹಾಗಾಗಿ, ಕಷ್ಟಗಳು ದೂರವಾಗುತ್ತವೆ ಎಂದರು.

ದಾವಣಗೆರೆಯ ಬಕ್ಕೇಶ್, ಕೊಟ್ಟೂರಿನ ಕೊಟ್ಟೂರೇಶ್ವರರು, ನಾಯಕನಹಟ್ಟಿ ತಿಪ್ಪೇಸ್ವಾಮಿ, ಖಾನಮಡುಗಿನ ಶರಣರು ಸಮಕಾಲೀನರಾಗಿದ್ದರು. ದೊಣೆಹಳ್ಳಿಯಲ್ಲಿ ದಾಸೋಹ ಮಠದ ಕಾಮಗಾರಿಗಳು ಸರಗವಾಗಿ ನಡೆಯುತ್ತಿವೆ. ಕೇವಲ ಐದು ತಿಂಗಳಲ್ಲಿ ಹೆಚ್ಚಿನ ಕಾಮಗಾರಿ ಮುಗಿದಿರುವುದು ವಿಸ್ಮಯವಾಗಿದೆ. ತಾವು ೨೦೦ರಿಂದ ೩೦೦ ದೇವಸ್ಥಾನ ನಿರ್ಮಿಸಿದ್ದು, ಇಷ್ಟೊಂದು ಶೀಘ್ರವಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.

ದಾಸೋಹ ಕಾರ್ಯಕ್ರಮ ಸಂಚಾಲಕ, ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ಶಿವಶರಣರು ತಮ್ಮ ಅರಿವು, ಅನುಭವಗಳ ಶಕ್ತಿಯಿಂದ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಖಾನಮಡುಗಿನ ಶರಣರಿಗೆ ಚಿತ್ರದುರ್ಗ ಮುರುಘಾ ಮಠದ ಶ್ರೀಗಳು ದೀಕ್ಷೆ ನೀಡಿದರು. ಅನಂತರ ಶರಣರು ದೊಣೆಹಳ್ಳಿಯಲ್ಲಿ ಮಠ ನಿರ್ಮಾಣ ಮಾಡಲು ಮುಂದಾದರು. ಈ ವೇಳೆ ಸಹಕಾರ ದೊರೆಯದೇ ಇದ್ದಾಗ ಸಮೀಪದ ಖಾನಮಡುಗಿನಲ್ಲಿ ಮಠ ನಿರ್ಮಾಣ ಮಾಡಿದರು ಎಂದು ತಿಳಿಸಿದರು.

ದೊಣೆಹಳ್ಳಿ ಉತ್ತರ ಕರ್ನಾಟಕ್ಕೆ ಹೆಬ್ಬಾಗಿಲಾಗಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು. ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಆರ್ಶೀವಚನಗಳ ನೀಡಲಿದ್ದಾರೆ. ಭಕ್ತರು ಸದುಪಯೋಗ ಪಡೆಯಬೇಕು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಚಂಡಿಗಡಿಹಳ್ಳಿ ಮಠದ ಬಸವ ಮಹಾಂತ ಸ್ವಾಮೀಜಿ, ಕೋಡ್ಲಿಪೇಟೆ ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಕಾನಾಮಡುಗಿನ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು, ಚಿತ್ರದುರ್ಗದ ಹಿರಿಯ ಪತ್ರಕರ್ತರಾದ ಉಜ್ಜಿನಪ್ಪ, ವೀರಶೈವ ಸಮಾಜ ಮುಖಂಡರಾದ ಷಣ್ಮುಖಪ್ಪ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಶಿವನಗೌಡ, ಚಿತ್ರದುರ್ಗದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರೇಶ್, ಎನ್.ಟಿ. ಎರ್ರಿಸ್ವಾಮಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷೆ ಸುಜಾತ, ನಿವೃತ್ತ ಉಪನ್ಯಾಸಕರಾದ ಸಂಗೇನಹಳ್ಳಿ ಆಶೋಕ್ ಕುಮಾರ್, ಯಾದವ ರೆಡ್ಡಿ ಮತ್ತಿತರರು ಹಾಜರಿದ್ದರು.

- - -

-26ಜೆಜಿಎಲ್1:

ದೊಣೆಹಳ್ಳಿಯಲ್ಲಿ ಶ್ರೀ ಶರಣ ಬಸವವೇಶ್ವರ ದಾಸೋಹ ಮಠ ಆವರಣದಲ್ಲಿ ನಡೆದ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು ಪಾಲ್ಗೊಂಡರು.